ಕೊಪ್ಪಳ ಮಾ. ೦೫ (ಕರ್ನಾಟಕ ವಾರ್ತೆ) ; ಪ್ರಸಕ್ತ ಸಾಲಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-೨, ದೈಹಿಕ ಶಿಕ್ಷಕರು ಗ್ರೇಡ್-೧ ಹಾಗೂ ವಿಶೇಷ ಶಿಕ್ಷಕರ ಸಂಗೀತ (ಹಾಡುಗಾರಿಕೆ) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ : ಅಧಿಕಾರಿಗಳಿಗೆ ತರಬೇತಿ
ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆಯ ಅನುಷ್ಠಾನ ಕುರಿತಂತೆ ಖಜಾನೆ ನಿರ್ದೇಶನಾಲಯದ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಹಣಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳಿಗೆ ಮಾರ್ಚ್ ೦೮ ರಿಂದ ೧೧ ರವರೆಗೆ ನಾಲ್ಕು ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಏರ್ಪಡಿಸಿದೆ.
ಸರ್ಕಾರ ದಿ: ೦೧-೦೪-೨೦೦೬ ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಕಚೇರಿ ಮುಖ್ಯಸ್ಥರ ಕರ್ತವ್ಯಗಳ ಬಗ್ಗೆ ಬೆಂಗಳೂರು ಖಜಾನೆ ನಿರ್ದೇಶನಾಲಯದ ವತಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಿದೆ. ತರಬೇತಿಯು ಮಾ. ೦೮ ರಿಂದ ೧೧ ರವರೆಗೆ ನಾಲ್ಕು ದಿನಗಳ ಕಾಲ, ದಿನಂಪ್ರತಿ ನಾಲ್ಕು ಅಧಿವೇಶನದಂತೆ ನಡೆಯಲಿದೆ. ಈ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಹಣಸೆಳೆಯುವ ಹಾಗೂ ಬಟವಾಡೆ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಹೆಚ್.ಆರ್.ಎಮ್.ಎಸ್. ನಲ್ಲಿ ವೇತನ ಬಿಲ್ಲು ತಯಾರಿಸುವ ಸಿಬ್ಬಂದಿಯೊಂದಿಗೆ ತಪ್ಪದೆ ಭಾಗವಹಿಸುವಂತೆ ಜಿಲ್ಲಾ ಖಜಾನೆ ಇಲಾಖೆ ಪ್ರಕಟಣೆ ತಿಳಿಸಿದೆ.