ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಸಿದ ಸಿಆರ್ಪಿಎಫ್ ಸಿಬ್ಬಂದಿ! : ಉತ್ತರ ಪ್ರದೇಶದಲ್ಲಿ ಇಬ್ಬರು ಜವಾನರ ಸಹಿತ ನಾಲ್ವರ ಬಂಧನ
ಲಕ್ನೊ, ಎ.30: ಆಘಾತಕಾರಿ ವಿದ್ಯಮಾನವೊಂದರಲ್ಲಿ, ಆಯುಧಾಗಾರದಿಂದ ಶಸ್ತ್ರಾಸ್ತ್ರಗಳನ್ನು ಕದ್ದು, ನಕ್ಸಲರಿಗೆ ಪೂರೈಸುತ್ತಿದ್ದ ಆರೋಪದಲ್ಲಿ ಇಬ್ಬರು ಸಿಆರ್ಪಿಎಫ್ ಜವಾನರ ಸಹಿತ ನಾಲ್ವರನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು (ಎಸ್ಟಿಎಫ್) ಶುಕ್ರವಾರ ಬಂಧಿಸಿದೆ.
ನಿಷೇಧಿತ ಮಾವೊವಾದಿ ಉಗ್ರರಿಗೆ ಕೆಲವು ಸಿಆರ್ಪಿಎಫ್ ಜವಾನರು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಮಾರಾಟಮಾಡುತ್ತಿದ್ದಾರೆಂಬ ಗುಪ್ತಚರ ವರದಿಯನ್ನಾಧರಿಸಿ, ಉತ್ತರ ಪ್ರದೇಶಾದ್ಯಂತದ ಹಲವು ನಗರಗಳ ಸಿಆರ್ಪಿಎಫ್ ಠಾಣೆಗಳ ಮೇಲೆ ಎಸ್ಟಿಎಫ್ ನಡೆಸಿದ ಬೃಹತ್ ದಾಳಿಯ ವೇಳೆ ಈ ಬಂಧನಗಳು ನಡೆದಿವೆ.
75 ಮಂದಿ ಸಿಆರ್ಪಿಎಫ್ ಯೋಧರ ಹತ್ಯೆ ನಡೆದ ದಾಂತೆವಾಡ ನಕ್ಸಲ್ ದಾಳಿಯ ತನಿಖೆಯ ವೇಳೆ ಉಗ್ರರು ದಾಳಿಗೆ ಬಳಸಿದ ಆಯುಧಗಳು ಉತ್ತರಪ್ರದೇಶದ ಭದ್ರತಾ ಸಿಬ್ಬಂದಿಗೆ ಪೂರೈಸಲಾದವುಗಳೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಎಸ್ಟಿಎಫ್ ಅಧಿಕಾರಿಗಳು ಸಿಆರ್ಪಿಎಫ್ ಸಿಬ್ಬಂದಿಯ ಮೇಲೆ ಹದ್ದಿನ ಕಣ್ಣಿರಿಸಿದ್ದರು. ದಾಳಿ ಹಾಗೂ ಬಂಧನವನ್ನು ಖಚಿತಪಡಿಸಿರುವ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಬ್ರಿಜ್ಲಾಲ್, ಈ ಆಯುಧ ಕಳ್ಳರ ಜಾಲವು ವಿಸ್ತಾರವಾಗಿದ್ದು, 6 ತಿಂಗಳುಗಿಂತಲೂ ಹೆಚ್ಚು ಸಮಯದಿಂದ ಈ ದಂಧೆ ನಡೆಯುತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆಂದು ತಿಳಿಸಿದರು. ಇದರಲ್ಲಿ ಇನ್ನಷ್ಟು ಮಂದಿ ತೊಡಗಿಕೊಂಡಿರುವ ಸಾಧ್ಯತೆಯ ಬಗ್ಗೆ ಬಂಧಿತರ ವಿಚಾರಣೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದರು.
ಎಸ್ಟಿಎಫ್ ಕಾರ್ಯಾಚರಣೆಯ ವಿವರ ನೀಡಿದ ಲಾಲ್, ಕೆಲವು ಸಿಆರ್ಪಿಎಫ್ ಸಿಬ್ಬಂದಿಯ ಶಂಕಿತ ಚಟುವಟಿಕೆಯ ಬಗ್ಗೆ ತಮಗೆ ಮಾಹಿತಿ ಬಂದಿತು. ಅವರು ಆಯುಧಗಳನ್ನು ಕದ್ದು ನಕ್ಸಲರಿಗೆ ಮಾರುತ್ತಿದ್ದಾರೆಂದು ಆರೋಪಿಸಲಾಗಿತ್ತು ಎಂದರು.ಅದಕ್ಕಾಗಿ ಎಸ್ಟಿಎಫ್ನ ಎಸ್ಎಸ್ಎ ನವೀನ್ ಆರೋರಾ ಹಾಗೂ ಹೆಚ್ಚುವರಿ ಎಸ್ಪಿ ಸತ್ಯೇಂದ್ರ ಸಿಂಗರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಯಿತು. ಮೊರಾದಾಬಾದ್, ರಾಮಪುರ ಹಾಗೂ ಝಾನ್ಸಿಗಳಲ್ಲಿ ದಾಳಿಗಳನ್ನು ನಡೆಸಿ ವಿನೋದ್ ಪಾಸ್ವಾನ್ ಹಾಗೂ ದಿನೇಶ್ ಸಿಂಗ್ ಎಂಬ ಸಿಆರ್ಪಿಎಫ್ ಸಿಬ್ಬಂದಿಯನ್ನು ಬಂಧಿಸಲಾಯಿತೆಂದು ಅವರು ವಿವರಿಸಿದರು.
ಎಸ್ಟಿಎಫ್ ಪ್ರಾಂತೀಯ ಸಶಸ್ತ್ರ ಪಡೆಯ ನಿವೃತ್ತ ಉಪನಿರೀಕ್ಷಕ ಯಶೋಧಾನಂದ ಸಿಂಗ್ ಎಂಬವರನ್ನೂ ಬಂಧಿಸಿದ್ದು, ಆತ ಸಿಆರ್ಪಿಎಫ್ನ ವಿವಿಧ ಆಯುಧ ಕೇಂದ್ರಗಳಲ್ಲಿ ಅಡ್ಡಾಡುತ್ತಿದ್ದರು. ಹಾಗೂ ತರಬೇತಿಯ ವೇಳೆ ಖಾಲಿಯಾದ ತೋಟಾಗಳನ್ನು ಇಟ್ಟು ಸಜೀವ ಗುಂಡುಗಳನ್ನು ಅಪಹರಿಸುತ್ತಿದ್ದರೆಂದು ಲಾಲ್ ತಿಳಿಸಿದರು.
ಬಂಧಿತರಿಂದ 5 ಸಾವಿರಕ್ಕೂ ಹೆಚ್ಚು ಜೀವಂತ ಕಾಡತೂಸು, ಐಎನ್ಎಸ್ಎಎಸ್ ರೈಫಲ್ಗಳ 16 ಮ್ಯಾಗಝೀನ್ಗಳು, 25 ಬೋರ್ನ ಬಂದೂಕುಗಳು, ಎಸ್ಎಲ್ಆರ್ ಹಾಗೂ ಎಕೆ-47 ರೈಫಲ್ಗಳು ಹಾಗೂ 245 ಕಿ.ಗ್ರಾಂ. ಖಾಲಿ ತೋಟಾಗಳನ್ನು ಮತ್ತು ಬಂದೂಕಿನ ಬಿಡಿಭಾಗಗಳು, ಮೊಬೈಲ್ ಫೋನ್ಗಳು ಹಾಗೂ ರೂ. 1.76 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಸಿಆರ್ಪಿಎಫ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.