
ಗದಗದ ವಿದ್ಯಾದಾನ ಸಮಿತಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿ ಅವರು ಮಾತನಾಡುತ್ತಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಅದರ ಗೌರವಸವಲತ್ತು ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಸೇರಿಕೊಂಡು ಪ್ರಧಾನಮಂತ್ರಿ ಮನಮೋಹನ ಸಿಂಗ್ ರನ್ನು ಭೇಟಿಯಾಗುವುದಾಗಿ ಮುಖ್ಯಮಂತ್ರಿ ಹೇಳಿದರು.
ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಹಾಗೂ ಕನ್ನಡಿಗರಿಗೆ ನೀಡಿರುವ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದಾಗಿ ಸಿಎಂ ತಿಳಿಸಿದರು. ರಾಜ್ಯದಲ್ಲಿ ತಲೆದೋರಿರುವವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಬೇರೆ ರಾಜ್ಯಗಳಿಂದವಿದ್ಯುತ್ ಖರೀದಗೆ ಸರಕಾರ ನಿರ್ಧರಿಸಿದೆ. ಇದಕ್ಕೆ ಎಷ್ಟು ಖರ್ಚಾದರೂ ಅಡ್ಡಿಯಿಲ್ಲ ಎಂದ ಮುಖ್ಯಮಂತ್ರಿ, ೫ ಸಾವಿರ ಮೆಗಾವಾಟ್ ವಿದ್ಯುತ್ತನ್ನು ಉತ್ಪಾದಿಸುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ ಎಂದರು.ಗದಗ ಜಿಲ್ಲೆಯ ಅಭಿವೃದ್ಧಿಗಾಗಿ ೨೫ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ ಮುಖ್ಯಮಂತ್ರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎಂದರಲ್ಲದೆ ಗದಗ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ೫ ಕೋಟಿ ರೂ. ನೀಡುವ ಭರವಸೆ ನೀಡಿದರು.ಜನರ ಅಭಿವೃದ್ಧಿ ಹಾಗೂ ಈಗಾಗಲೇ ಘೋಷಿಸಿರುವ ಯೋಜನೆಗಳ ಜಾರಿ ಹಾಗೂ ಪ್ರವಾಹದಿಂದ ಬೀದಿಪಾಲಾಗಿರುವ ಕುಟುಂಬಗಳಿಗೆ ೩-೪ ತಿಂಗಳೊಳಗೆ ಮನೆ ಕಟ್ಟಿಕೊಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸಾಹಿತ್ಯ ಭವನದ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಪಾ ಅಧ್ಯಕ್ಷ ಡಾ.ನಲ್ಲೂರ ಪ್ರಸಾದ್ ವಹಿಸಿದ್ದರು. ಮುಂಡರಗಿ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.ಸಾಹಿತ್ಯ ವಿರ್ಮಶಕ ಡಾ. ಸಿ.ಪಿ.ಕೃಷ್ಣಕುಮಾರ್ಸಮಾರೋಪ ಭಾಷಣ ಗೈದರು.
ಮುಖ್ಯ ಅತಿಥಿಗಳಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಟ್.ಕೆ.ಪಾಟೀಲ, ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಸಿ.ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ, ಶಾಸಕರಾದ ಶ್ರೀಶೈಲಪ್ಪ ಬಿದರೂರು, ಚಂದ್ರಕಾಂತ್ ಬೆಲ್ಲದ್, ಈಶಣ್ಣ ಗುಲಗಣ್ಣ, ಕಲಕಪ್ಪ ಬಂಡಿ, ರಾಮಣ್ಣ ಲಮಾಣಿ ಹಾಗೂ ಎಂಎಲ್ಸಿಗಳಾದ ಮೋಹನ್ ಲಿಂಬಿಕಾಯಿ, ಹಂಪಿ ವಿವಿಯ ಕುಲಪತಿ ಡಾ.ಎ.ಮುರಿಗೆಪ್ಪ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ಜಿಲ್ಲಾಧಿಕಾರಿ ಎ.ಎನ್.ವಿ.ಪ್ರಸಾದ್ ಹಾಜರಿದ್ದರು.
ಸಮ್ಮೇಳನದ ಮುಖ್ಯಾಂಶಗಳು:
ಪ್ರಸಕ್ತ ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ, ಜಾತೀಯತೆ,
ಅಸಮಾನತೆಯ ಕುರಿತು ಕನ್ನಡ ಸಾಹಿತ್ಯ ಪರಿಷತ್ ಜನರಲ್ಲಿ
ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ.
- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಕನ್ನಡಕ್ಕೆ ಗೌರವ ಕೊಡುವುದಾದರೆ ಕನ್ನಡ ಪ್ರಾಥಮಿಕ,
ಪ್ರೌಢ, ಪದವಿ ಕಾಲೇಜುಗಳಿಗೆ ಹಾಗೂ ಕನ್ನಡ ಶಿಕ್ಷಕರಿಗೆ
ಅನುದಾನ ನೀಡುವ ಸರಕಾರದ ನಿಲುವನ್ನು ಮುಂದಿನ ಬಜೆಟ್
ನಲ್ಲಿ ಮುಖ್ಯಮಂತ್ರಿ ಘೋಷಿಸಬೇಕು.
- ಮಾಜಿ ಸಚಿವ ಎಚ್.ಡಿ.ಪಾಟೀಲ
ಸಮ್ಮೇಳದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷೆ ನಾಡೋಜೆ
ಡಾ.ಗೀತಾ ನಾಗಭೂಷಣ್ರಿಗೆ ಸರಕಾರದ ಪರವಾಗಿ
೧೧,೧೧,೧೧೧ ರೂಪಾಯಿ ಚೆಕ್ಕನ್ನು ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ದೇಣಿಗೆಯಾಗಿ ನೀಡಿದರು.
ವಿರ್ಮಶಕ ಸಿ.ಪಿ. ಕೃಷ್ಣಕುಮಾರ್ ಸಮಾರೋಪ
ಭಾಷಣ ಮಾಡುತ್ತಿದ್ದ ವೇಳೆ ಇಂಗ್ಲಿಷ್ ಪದವನ್ನು
ಬಳಸಿದುದಕ್ಕಾಗಿ ಸಭಿಕರೆಲ್ಲ ಎದ್ದು ನಿಂತು
ಆಕ್ಷೇಪಿಸಿದರು. ಇದು ಪದೇ ಪದೇ ಮುಂದುವರಿದಾಗ
ಅಸಮಾಧಾನಗೊಂಡ ಅವರು ಸಮಾಧಾನದಿಂದ
ಕೇಳದ ಸಭಿಕರ ವಿರುದ್ಧಬೇಸರ ವ್ಯಕ್ತಪಡಿಸಿ
ಭಾಷಣವನ್ನು ಅಲ್ಲಿಗೇ ಮೊಟಕುಗೊಳಿಸಿದರು.