ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆಯಾಗಿದ್ದು ಇಲ್ಲಿನ ಜನಪ್ರತಿನಿದಿಗಳು ಅಭಿವೃದ್ಧಿಯ ಪರ ಇದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಅವರು ಇಲ್ಲಿನ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ ನಂತರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು.
ಭಟ್ಕಳ ತಾಲೂಕಾ ಆಸ್ಪತ್ರೆಯು ೧೯೫೫ರಲ್ಲಿ ಆರಂಭವಾಗಿದ್ದು ಇಂದು ಅತ್ಯುತ್ತಮ ಸೇವೆ ನೀಡುತ್ತಿರುವುದಕ್ಕೆ ಇಲ್ಲಿನ ಆಡಳಿತ ವೈದ್ಯಾಧಿಕಾರಿ, ವೈದ್ಯರುಗಳು ಹಾಗೂ ಸಿಬ್ಬಂದಿಗಳ ಇಚ್ಚಾಶಕ್ತಿಯೇ ಕಾರಣವಾಗಿದೆ. ಇಲ್ಲಿಗೆ ಅಗತ್ಯವಿರುವ ೫೦ ಹಾಸಿಗೆಗಳನ್ನು ಮಂಜೂರು ಮಾಡುವುದಲ್ಲದೇ ಹೊಸದಾಗಿ ೩೦ ಹಾಸಿಗೆಗಳ ತಾಯಿ-ಮಗು ಆಸ್ಪತ್ರೆಯನ್ನು ಮಂಜೂರಿ ಮಾಡುವುದಾಗಿ ಭರವಸೆಯನ್ನು ನೀಡಿದರು.
ಆಸ್ಪತ್ರೆ ಸೇರಿದಂತೆ ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಇದು ತಮ್ಮದು ಎನ್ನುವ ಭಾವನೆ ಮುಖ್ಯವಾಗುತ್ತದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅಂತಹ ವಾತಾವರಣ ಇರುವುದರಿಂದಲೇ ಇಷ್ಟೊಂದು ದೊಡ್ಡಮಟ್ಟದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಯಿತು. ಸರಕಾರದಿಂದ ಕೂಡಾ ಅಗತ್ಯದ ಎಲ್ಲಾ ಮಂಜೂರಾತಿಯನ್ನು ನೀಡಿದ್ದು ಅಗತ್ಯವಿರುವ ೩ ಡಯಾಲಿಸಿಸ್ ಯಂತ್ರವನ್ನು ಕೂಡಾ ಮಂಜೂರು ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ಭಟ್ಕಳ ಸರಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಬೇಕು, ಇಲ್ಲಿನ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಬೇಕು ಎನ್ನುವ ಕನಸಿತ್ತು. ಅದು ಅತ್ಯಂತ ಯಶಸ್ವೀಯಾಗಿ ಈಡೇರಿದೆ ಎಂದರೆ ಅದಕ್ಕೆ ಆರೋಗ್ಯ ಸಚಿವರು ಅಗತ್ಯವಿರುವ ಎಲ್ಲಾ ಮಂಜೂರಾತಿಯನ್ನು ನೀಡಿರುವುದು ಕಾರಣವಾಗಿದೆ. ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ಉತ್ತಮ ಕೆಲಸ ಕಾರಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಆಸ್ಪತ್ರೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು ಇದಕ್ಕೆಲ್ಲಾ ಭಟ್ಕಳದ ಜನತೆಯ ಸಹಕಾರವೇ ಕಾರಣವಾಗಿದೆ. ಶಾಸಕರು ಮತ್ತು ಸರಕಾರದ ಮಂಜೂರಾತಿಗೆ ಸಹಕರಿಸಿದ ವೈದ್ಯಕೀಯ ಸಚಿವರ ಕಾರ್ಯ ಶ್ಲಾಘಿಸಿದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಮುಂತಾದವರು ಉಪಸ್ಥಿತರದ್ದರು.