ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಮಂಗಳವಾರ ರಾತ್ರಿ ಮೃತರಾದ ತಾಲೂಕಿನ ಬೈಲೂರಿನ ರೈತ ರಾಮ ಪರಮಯ್ಯ ದೇವಡಿಗ (79) ಅವರ ನೇತ್ರದಾನಕ್ಕೆ ಮೃತರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು, ಸಿಬ್ಬಂದಿಗಳು ಬುಧವಾರ ಭಟ್ಕಳ ಸರಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃತರ ಪುತ್ರ ಪ್ರದೀಪ, ಅವರಿಂದ ನಾಲ್ಕು ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಇದು 2ನೇ ನೇತ್ರದಾನವಾಗಿದೆ. ಬಹಳ ಜನರಿಗೆ ನೇತ್ರದಾನದ ಬಗ್ಗೆ ತಪ್ಪು ತಿಳುವಳಿಕೆ ಇದೆ. ನೇತ್ರದಾನ ಪುಣ್ಯದ ಕೆಲಸವಾಗಿದ್ದು, ಉಳಿದವರೂ ಈ ಬಗ್ಗೆ ಚಿಂತನೆ ನಡೆಸಬೇಕು. ಮರಣದ ಪೂರ್ವದಲ್ಲಿಯೇ ಈ ಬಗ್ಗೆ ಒಪ್ಪಿಗೆ ಪತ್ರ ನೀಡಬೇಕು ಎಂದೇನೂ ಇಲ್ಲ. ಮರಣದ ನಂತರ ಅವರ ಕುಟುಂಬದವರು ಇಚ್ಛಿಸಿದ್ದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಮೃತ ರಾಮ ದೇವಡಿಗ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಬುಧವಾರ ಸಂಜೆ ಬೈಲೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.