೨೪ ದಿನಗೂಲಿ ಸಿಬ್ಬಂದಿಗಳ ನಿಯಮಬಾಹಿರ ನೇಮಕ ಪ್ರಕರಣ
ಭಟ್ಕಳ : ಮಾಜಿ ಶಾಸಕ ಸುನಿಲ್ ನಾಯ್ಕ ಅಧ್ಯಕ್ಷರಾಗಿರುವ ಭಟ್ಕಳದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕಿನಲ್ಲಿ (ಪಿಎಲ್ಡಿ) ೨೪ ದಿನಗೂಲಿ ಸಿಬ್ಬಂದಿಗಳ ನೇಮಕ ಹಾಗೂ ಖಾಯಂ ಮಾಡಿರುವ ಸಂದರ್ಭ ನಿಯಮ ಪಾಲಿಸಿಲ್ಲ ಎಂದು ಕಾರವಾರದ ಸಹಕಾರ ಸಂಘಗಳ ಉಪನಿಬಂಧಕರು ಬ್ಯಾಂಕಿನ ಆಡಳಿತ ಮಂಡಳಿಯನ್ನು ಒಂದು ವರ್ಷದ ಅವಧಿಗೆ ಅನರ್ಹಗೊಳಿಸಿ ಆದೇಶಿಸಿದ್ದು ಸುನಿಲ್ ನಾಯ್ಕರಿಗೆ ತೀವ್ರ ಮುಖಭಂಗವಾದAತಾಗಿದೆ ಎಂದು ವರದಿಯಾಗಿದೆ.
ಪಿಎಲ್ಡಿ ಬ್ಯಾಂಕ್ ಆಡಳಿತ ಮಂಡಳಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಕುಮಟಾದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ ತಕ್ಷಣಕ್ಕೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಭಟ್ಕಳದಲ್ಲಿ ಬ್ಯಾಂಕ್ ಆರಂಭವಾದಾಗಿನಿAದ ಪಿ.ಎಲ್.ಡಿ. ಬ್ಯಾಂಕ್ ಇನ್ನೂ ತನಕ ಸುಪರ್ಸೀಡ್ ಆಗಿದ್ದ ಉದಾಹರಣೆಯಿಲ್ಲ. ಭಟ್ಕಳ ಪಿಎಲ್ಡಿ ಬ್ಯಾಂಕಿನಲ್ಲಿ ಒಟ್ಟೂ ೧೫ ಮಂದಿ ನಿರ್ದೇಶಕರಿದ್ದು, ಸುನೀಲ ನಾಯ್ಕ ಅಧ್ಯಕ್ಷರಾಗಿದ್ದರು. ಉಪನಿಬಂಧಕರು ತಮ್ಮ ಆದೇಶದಲ್ಲಿ ದಿನಗೂಲಿ ಸಿಬ್ಬಂದಿಗಳನ್ನು ನೇಮಕಾತಿ ಸಮಿತಿ ರಚಿಸಿಕೊಳ್ಳದೇ ಸಹಕಾರ ನಿಬಂಧಕರ ಪ್ರತಿನಿಧಿಯನ್ನು ನಿಯೋಜಿಸಿಕೊಳ್ಳದೇ, ನೇರ ನೇಮಕಾತಿ ಅರ್ಜಿ ಕರೆಯದೇ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸದೆ ದಿನಗೂಲಿ ನೌಕರರನ್ನು ಖಾಯಂಗೊಳಿಸಿ ನೇಮಕ ಮಾಡಿದ್ದು, ಇದು ಕರ್ನಾಟಕ ಸಹಕಾರಿ ಸಂಘಗಳ ನಿಯಾಮವಳಿ ೧೯೬೦ ನಿಯಮ ೧೭ ಮತ್ತು ೧೮ನ್ನು ಉಲ್ಲಂಘನೆ ಮಾಡಿದ್ದರಿಂದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರನ್ನು ಒಂದು ವರ್ಷದ ಅವಧಿಗೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ ಪ್ರಕರಣ ೨೯-ಸಿ ರನ್ವಯ ಅನರ್ಹಗೊಳಿಸಿದ್ದಾರೆ.
ಅನರ್ಹಗೊಂಡ ಸದಸ್ಯರು ಈ ಅವಧಿಯಲ್ಲಿ ಇನ್ನೊಂದು ಸಂಘದ ಡೆಲಿಗೇಟಾಗಿ ಚುನಾಯಿತರಾಗಲು ಅಥವಾ ನೇಮಕಗೊಳ್ಳಲು ಅಥವಾ ಮುಂದುವರಿಯಲು ಅರ್ಹತೆ ಇರುವುದಿಲ್ಲ ಎಂದೂ ತಿಳಿಸಲಾಗಿದೆ. ಈಗಾಗಲೇ ಪಿಎಲ್ಡಿ ಬ್ಯಾಂಕಿನ ನಾಲ್ಕು ಮಂದಿ ನಿರ್ದೇಶಕರು ಅನರ್ಹ ಆದೇಶ ಬರುವ ಪೂರ್ವದಲ್ಲೇ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭಟ್ಕಳ ಪಿಎಲ್ಡಿ ಬ್ಯಾಂಕಿಗೆ ಇನ್ನು ಒಂದೂವರೆ ತಿಂಗಳಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಚುನಾವಣಾ ಸನಿಹದಲ್ಲೇ ಪ್ರಸ್ತುತ ಇರುವ ಬ್ಯಾಂಕಿನ ಆಡಳಿತ ಮಂಡಳಿ ಅನರ್ಹಗೊಳಿಸಿ ಆದೇಶ ಮಾಡಲಾಗಿದೆ.