ಧಾರವಾಡ,ಏ,೨೧: ಚರ್ಮೋದ್ಯಮದ ಬೆಳವಣಿಗೆ ಹಾಗೂ ಚರ್ಮ ಕುಶಲ ಕರ್ಮಿಗಳಿಗೆ ಉತ್ತೇಜನ ನೀಡಲು ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಸರ್ಕಾರ ಪ್ರಸಕ್ತ ಆಯವ್ಯಯದಲ್ಲಿ ಕರ್ನಾಟಕ ಚರ್ಮಗಾರಿಕೆ ಅಭಿವೃದ್ಧಿ ನಿಗಮಕ್ಕೆ ೨.೫ ಕೋಟಿ ರೂ.ಗಳ ಅನುದಾನ ನೀಡಿದೆಯೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಟಿ. ಹೊನ್ನೂರಪ್ಪ ಇಂದಿಲ್ಲಿ ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಯಲ್ಲಿ ನಿಗಮದ ಲಿಡ್‌ಕರ್ ಮಳಿಗೆಯ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಇದರ ಜೊತೆಯಲ್ಲಿ ನಿಗಮ ವಿಶೇಷ ಘಟಕ ಯೋಜನೆಯಡಿ ಚರ್ಮ ಕುಶಲಗಾರರಿಗೆ ನೆರವು ನೀಡಲು ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ೪.೬೩ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ಅವರು ಹೇಳಿದರು.
ಕಳೆದ ವರ್ಷ ನಿಗಮ೫.೫ ಕೋಟಿ ರೂ.ಗಳ ಮಾರಾಟದ ಗುರಿಯನ್ನು ಹೊಂದಿದ್ದು, ಆಪೈಕಿ ೩.೭೫ ಕೋಟಿಗಳಷ್ಟು ವಹಿವಾಟು ಮಾಡಿದೆಯೆಂದು ಅವರು ಹೇಳಿದರು. ಇದೇ ಅವಧಿಯಲ್ಲಿ ಸರ್ಕಾರವು ನಿಗಮವನ್ನು ಪುನ:ಶ್ಚೇತನಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ೩.೫ ರೂ.ಗಳ ಅನುದಾನ ಬಿಡುಗಡೆ ಮಾಡಿತ್ತು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲ ಕರ್ಮಿಗಳ ಕುಟುಂಬಗಳಿಗೆ ನಿರಂತರ ಉದ್ಯೋಗ, ಕಚ್ಚಾಮಾಲು ಪೂರೈಕೆ ಮಾಡುವುದು, ಮಾರಾಟ ವಹಿವಾಟನ್ನು ವೃದ್ಧಿಗೊಳಿಸಿ ನಿಗಮವನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಹೊಸ ಮಾರಾಟ ಮಳಿಗೆಗಳನ್ನು ತೆರೆಯುವುದು. ಈಗಿದ್ದ ಮಾರಾಟ ಮಳಿಗೆಗಳ ನವೀಕರಣ ಹಾಗೂ ಗಣಕೀಕರಣಗೊಳಿಸುವುದು ಮತ್ತು ಚರ್ಮ ಕುಶಲ ಕರ್ಮಿಗಳ ಉಪಯೋಗಕ್ಕಾಗಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಉನ್ನತೀಕರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ಅವರು ಹೇಳಿದರು.
ಇದಲ್ಲದೆ ಮಾರಾಟವನ್ನು ವೃದ್ಧಗೊಳಿಸಿ ಕುಶಲಕರ್ಮಿಗಳಿಗೆ ಹೆಚ್ಚು ಉದ್ಯೋಗ ನೀಡುವಂತಾಗಲು ವಸ್ತುಪ್ರದರ್ಶನ ಏರ್ಪಡಿಸುವುದು, ಕೊಲ್ಲಾಪುರಿ ಚಪ್ಪಲಿಗಳ ಮಾರಾಟಕ್ಕೆ ಡೀಲರ್‌ಗಳನ್ನು ನೇಮಿಸುವುದು. ಕುಶಲಕರ್ಮಿಗಳು ಮತ್ತು ಸಣ್ಣ ಪ್ರಮಾಣz ಘಟಕಗಳು ತಯಾರಿಸಿದ ಉತ್ಪನ್ನಗಳ ಮೇಲೆ ಶೇ. ೨೦ರಷ್ಟು ಸರ್ಕಾರಿ ರಿಯಾಯ್ತಿ ನೀಡುವುದು. ಕಿಲ್ಟ್ ಸಂಸ್ಥೆ ಸಹಯೋಗದೊಂದಿಗೆ ಹೊಸ ವಿನ್ಯಾಸಗಳ ಅಭಿವೃದ್ಧಿ ಮತ್ತು ಉತ್ಪಾದನಾ ಕಾರ್ಯ ಹಮ್ಮಿಕೊಂಡಿದೆಯೆಂದು ಅವರು ಹೇಳಿದರು.
ವಾಣಿಜ್ಯ ಚಟುವಟಿಕೆಗಳಡಿ ಸುಮಾರು ೧೨೦೦ ಕುಶಲಕರ್ಮಿಗಳು ಮತ್ತು ೧೦೦೦ಕ್ಕಿಂತ ಹೆಚ್ಚು ಸಣ್ಣ ಪ್ರಮಾಣದ ಘಟಕಗಳು ತಯಾರಿಸಿದ ಚರ್ಮೋತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ. ರಾಜ್ಯದ ಹೊರಗೆ ಮತ್ತು ಒಳಗೆ ಪ್ರಮುಖ ಸ್ಥಳಗಳಲ್ಲಿ ಚರ್ಮ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ವ್ಯವಸ್ಥೆಗೊಳಿಸಲಾಗುತ್ತಿದೆಯೆಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಹುಬ್ಬಳ್ಳಿಯ ಲಿಡ್‌ಕರ್ ಲೆದರ್ ಎಂಪೋರಿಯಂ ಕಳೆದ ವರ್ಷ ೩೩ ಲಕ್ಷ ಮೊತ್ತದ ಚರ್ಮ ವಸ್ತುಗಳನ್ನು ಮಾರಾಟ ಮಾಡಿ ಗುರಿಮೀರಿ ಸಾಧನೆ ಮಾಡಿದೆಯೆಂದು ಮಾರ್ಕೆಟಿಂಗ್ ಅಧಿಕಾರಿ ಶ್ರೀ ಕೆ.ಎಸ್. ಬೆಂಗೇರಾ ಈ ಸಂದರ್ಭದಲ್ಲಿ ತಿಳಿಸಿದರು.