ಭಟ್ಕಳ: ನಗರದ ರಂಗೀಕಟ್ಟೆಯ ಕಾಮಾಕ್ಷಿ ಅಟೋ ಸರ್ವಿಸ್ ಪೆಟ್ರೋಲ್ ಬಂಕ್ ಎದುರುಗಡೆಯಲ್ಲಿ ಲಾರಿಯೊಂದಕ್ಕೆ ಏಕಾಎಕಿ ಬೆಂಕಿ ಹೊತ್ತಿಕೊಂಡ ಪ್ರಯುಕ್ತ ಕೆಲ ಕಾಲ ರಾಷ್ಟಿಯ ಹೆದ್ದಾರಿ ೬೬ರಲ್ಲಿ ಸಂಚಾರಕ್ಕೆ ವ್ಯತ್ಯಯವಾದ ಘಟನೆ ನಡೆಯಿತು.
ಲಾರಿಯು ಹುಬ್ಬಳ್ಳಿಯಿಂದ ಕೇರಳದ ಕಾಸರಗೊಡಿಗೆ ಸಿಮೆಂಟ್ ತುಂಬಿಕೊಡು ಹೋಗುತ್ತಿತ್ತು ಎನ್ನಲಾಗಿದೆ. ಲಾರಿಯ ಚಾಲಕ ಲಾರಿಯನ್ನು ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಪೆಟ್ರೋಬ್ ಬಂಕಿಗೆ ಡಿಸ್ಟಿಲ್ಡ್ ವಾಟರ್ ತರಲು ಹೋಗಿದ್ದಾಗ ಲಾರಿಯ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತೆನ್ನಲಾಗಿದೆ. ತಕ್ಷಣ ಕಾಮಾಕ್ಷಿ ಪೆಟ್ರೋಲ್ ಬಂಕ್‌ನಲ್ಲಿದ್ದ ಅಗ್ನಿ ಉಪಶಮನ ಎಕ್ಸಿಂಗ್ವಿಸ್ಟ್ರ್ ಉಪಯೋಗಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಯಿತು. ಇದರಿಂದ ಲಾರಿಯ ಮುಂಬಾಗ ಸಂಪೂರ್ಣ ಸುಟ್ಟು ಹೋಗುವುದು ಹಾಗೂ ಟಯರ್‌ಗೆ ಬೆಂಕಿ ತಗುಲುವುದು ತಪ್ಪಿಸಿದಂತಾಗಿತ್ತು. ತಕ್ಷಣ ಬಂದ ಅಗ್ನಿಶಾಮಕ ವಾಹನ ಅಗ್ನಿಶಾಮಕ ಅಧಿಕಾರಿ ಎಸ್. ರಮೇಶ ಅವರ ನೇತೃತ್ವದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವೀಯಾದರು.
ಲಾರಿಯು ಬೇಪಾರಿ ಟ್ರಾನ್ಸ್ಪೋರ್ಟ್ ಹುಬ್ಬಳ್ಳಿ ಇವರಿಗೆ ಸೇರಿದ್ದಾಗಿದ್ದು ಚಾಲಕ ಗದಗದ ವೆಂಕಟೇಶ ಅವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಘಟನೆಯಿಂದ ಗಾಬರಿಗೊಂಡ ಅವರಿಗೆ ನಾಗರೀಕರೇ ಧೈರ್ಯ ಹೇಳುತ್ತಿರುವುದು ಕಂಡು ಬಂತು. ಲಾರಿಯ ಮುಂಬಾಗ ಸಂಪೂರ್ಣ ಸುಟ್ಟು ಹೋಗಿ ಅಪಾರ ಹಾನಿಯಾಗಿದ್ದು, ಲಾರಿಯಲ್ಲಿದ್ದ ಸಿಮೆಂಟ್ ಚೀಲಕ್ಕೂ ಅಲ್ಪ ಸ್ವಲ್ಪ ಹಾನಿಯಾಗಿರುವ ಸಾಧ್ಯದೆ.