ಭಟ್ಕಳ:ಯುವ ಪೀಳಿಗೆಯು ರಾಷ್ಟ್ರದ ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಿದ್ದು ಎಲ್ಲರೂ ಕೂಡಾ ಮತದಾನದ ಮಹತ್ವವನ್ನು ತಿಳಿದುಕೊಳ್ಳಬೇಕು. ಮತದಾನ ಒಂದು ಪವಿತ್ರ ಕಾರ್ಯವಾಗಿದ್ದು ಇಲ್ಲಿ ಯಾವುದೇ ಬೇದಭಾವವಿಲ್ಲ, ಪ್ರತಿಯೋರ್ವರಿಗೂ ಕೂಡಾ ಒಂದೇ ಮತದ ಹಕ್ಕಿದ್ದು ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿಗೂ ಜನ ಸಾಮಾನ್ಯನಿಗೂ ಕೂಡಾ ಒಂದೇ ರೀತಿಯ ಹಕ್ಕು ಇದೆ.
ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.
ಅವರು ಇಲ್ಲಿನ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಸಭಾಂಗಣದಲ್ಲಿ ಗುರುವಾರ ತಾಲೂಕಾ ಆಡಳಿತ, ಭಾರತ ಚುನಾವಣಾ ಆಯೋಗ ಇವುಗಳ ಸಂಯುಕ್ತ ಆಶ್ರಯದಲ್ಲಿ ೧೪ನೇ ರಾಷ್ಟ್ರೀಯ ಮತದಾರರ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ
ಎಸ್. ಮಾತನಾಡಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ೧೪ ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು ಮತದಾರರು ಜಾಗೃತರಾಗ ಬೇಕು ಎಂದರು.
ಈ ಸಂದರ್ಬದಲ್ಲಿ ಶಿಕ್ಷಕ ಶಿವಾನಂದ ಭಟ್ ಉಪನ್ಯಾಸ ನೀಡಿದರು. ತಹಸೀಲ್ದಾರ ಎ. ತೀಪ್ಪೇಸ್ವಾಮಿ, ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಡಿಗ, ಬಿಇಒ ವಿ.ಡಿ. ಮೊಗೇರ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಜಾಲಿ ಪ.ಪಂ ಮುಖ್ಯಾದಿಕಾüರಿ ಎನ್ ಮಂಜಪ್ಪ, ದಿ.ನ್ಯೂ ಇಂಗ್ಲೀಷ ಪಿ.ಯು. ಕಾಲೇಜ್ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ್ ಇತರರು ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಿ.ಆರ್‌ಪಿ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.