ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ (ಪಿಎಲ್ಡಿ) ಇದರ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಸುನೀಲ ಬಿ, ನಾಯ್ಕ, ಉಪಾಧ್ಯಕ್ಷರಾಗಿ ಸುರೇಶ ಜೆ. ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹ ಕಾರಿ ಇಲಾಖೆಯ ಹಿರಿಯ ಅಧಿಕಾರಿ ಭಾಸ್ಕರ ನಾಯ್ಕ ಪಾಲ್ಗೊಂಡಿದ್ದರು. ಬ್ಯಾಂಕಿನ ನಿರ್ದೇಶಕರಾದ ಮಂಜಪ್ಪ ಎಮ್. ನಾಯ್ಕ, ನಾರಾಯಣ ನಾಯ್ಕ, ದೇವಿದಾಸ ನಾಯ್ಕ ತಲಗೋಡ, ಮಂಜುನಾಥ ಶನಿಯಾರ ನಾಯ್ಕ,ನವನೀತ ಜಿ. ನಾಯ್ಕ, ಮಂಜು ಎಮ್.ಮೊಗೇರ,ಗಾಯಿತ್ರಿ ವಿ. ನಾಯ್ಕ,ಹನ್ನಂತ ನಾಯ್ಕ,ಎಮ್.ಪಿ.ಶೈಲೇಂದ್ರಕುಮಾರ, ಪೂರ್ಣಿಮಾ ಕೃಷ್ಣ ನಾಯ್ಕ, ಈರ ತಿಮ್ಮಯ್ಯ ನಾಯ್ಕ, ನಾಗಪ್ಪ ಕುಪ್ಪಯ್ಯ ಗೊಂಡ, ಈಶ್ವರ ನಾಯ್ಕ ಮುರುಡೇಶ್ವರ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರಾಮ ಬಿಲ್ಲವ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಸುನೀಲ ಅವರ ಅಭಿಮಾನಿಗಳು ಹಾಗೂ ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ, ಮುಖಂಡ ಕೃಷ್ಣ ನಾಯ್ಕ ಆಸರಕೇರಿ,ವೆಂಕಟೇಶ ನಾಯ್ಕ ಸೇರಿದಂತೆ ಭಟ್ಕಳ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿಯ ಹಲವಾರು ಮುಖಂಡರು ಬ್ಯಾಂಕಿಗೆ ಆಗಮಿಸಿ ಹೂಮಾಲೆ ಹಾಕಿ ಶುಭಾಶಯ ಕೋರಿದರು.
ತಂದೆಯ ಹಿರಿಮೆಯನ್ನು ಸರಿಗಟ್ಟಿದ ಮತ್ತು
ಭಟ್ಕಳ ಪಿಎಲ್ಡಿ ಬ್ಯಾಂಕಿಗೂ ನೂತನ ಅಧ್ಯಕ್ಷ ಸುನೀಲ ನಾಯ್ಕ ಕುಟುಂಬಕ್ಕೂ ಅವಿನಾಭಾವ ನಂಟು ಇರುವುದನ್ನು ಬ್ಯಾಂಕಿನ ಇತಿಹಾಸ ಸಾರಿ ಹೇಳುತ್ತದೆ. ಸುನೀಲ ತಂದೆ ಬಿ.ಕೆ.ನಾಯ್ಕ 3 ಬಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬ್ಯಾಂಕಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಅವರ ಅವಧಿಯಲ್ಲಿಯೇ ಬ್ಯಾಂಕಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದು ಬ೦ದಿತ್ತು. ಈಗ ಅವರ ಪತ್ರ ಸುನೀಲ ಬಿ. ನಾಯ್ಕ ಸಹ 3ನೇ ಬಾರಿ ಬ್ಯಾಂಕಿನ ಅಧ್ಯಕ್ಷ ಹುದ್ದೆಗೆ ಏರುತ್ತಿದ್ದಾರೆ.
ಕಳೆದ ಆ.13ರಂದು ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಸುನೀಲ ನಾಯ್ಕ ಹಾಗೂ ಅವರ ತಂಡವನ್ನು ಮಣಿಸಲು ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ನಡೆದಿತ್ತಾದರೂ ಎಲ್ಲ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿ, ಸುನೀಲ ನಾಯ್ಕ ಅವರ ತಂಡದ ಎಲ್ಲ 15 ಅಭ್ಯರ್ಥಿಗಳು ಆಯ್ಕೆಯಾಗುವುದರೊಂದಿಗೆ ವಿರೋಧಿಗಳಿಗೆ ತಿರುಗೇಟು ನೀಡಿದ್ದರು. ನಿರ್ದೇಶಕರಾದಂದಿನಿಂದ ಇಲ್ಲಿಯವರೆಗೆ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಯಶಸ್ವಿಯಾಗಿರುವ ಸುನೀಲ ನಾಯ್ಕ, ಮತ್ತೊಮ್ಮೆ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿದು ವಿರೋಧಿಗಳೂ ಹುಬ್ಬೇರುವಂತೆ ಮಾಡಿದ್ದಾರೆ.