ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂದಾಪುರ: ಎಡ್ವಿನ್ ಕ್ರಾಸ್ತರ ನೆನಪಿನಲ್ಲಿ...

ಕುಂದಾಪುರ: ಎಡ್ವಿನ್ ಕ್ರಾಸ್ತರ ನೆನಪಿನಲ್ಲಿ...

Mon, 03 May 2010 17:45:00  Office Staff   S.O. News Service

ಕುಂದಾಪುರ: ಇತ್ತೀಚೆಗೆ ಉದಯವಾಣಿಯ ಕೆಲವು ಹಳೆಯ ಸಂಚಿಕೆಗಳನ್ನು ತಿರುವುತ್ತಿದ್ದೆ. ಅದು ಹಳೆಯದು ಎಂದರೆ ೭೦ರ ದಶಕದ್ದು. ೧೯೭೨ರಿಂದ ೧೯೭೭ರ ವರೆಗಿನ ಕೆಲವು ಸಂಚಿಕೆಗಳನ್ನು ನೋಡುತ್ತಿದ್ದಂತೆ ಅಲ್ಲಿ ಅನೇಕ ಕುತೂಹಲಕರ ಸಂಗತಿಗಳು ಕಂಡುಬಂದವು. ಹಾಗೆ ನನ್ನ ಕುತೂಹಲ ಕೆರಳಿಸಿದ್ದು ಕುಂದಾಪುರದ ಪುರಸಭೆಗೆ ಸಂಬಂಧಿಸಿದ ಸುದ್ದಿಗಳು. ಕುಂದಾಪುರದ ಟೌನ್ ಪಂಚಾಯತ್‌ನಲ್ಲಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅಧ್ಯಕ್ಷರಾಗಿದ್ದುದು, ಆ ಸಮಯದಲ್ಲಿ ನಡೆದ ಸಂತೆ ಮಾರುಕಟ್ಟೆ ಹರಾಜು ಪ್ರಕರಣ ವಿನ್ನಿಫ್ರೆಡ್‌ರ ಅಧಿಕಾರಕ್ಕೆ ಸಂಚಕಾರ ತಂದಿದ್ದು, ವಿರೋಧಿ ಬಣ ಸಭೆ ನಡೆಸಿ ಅಧ್ಯಕ್ಷರ ವಿರುದ್ಧ ತಿರುಗಿ ನಿಂತದ್ದು, ಮಾಲಿಂಗ ಮತ್ತು ಪದ್ಮಾವತಿ ಎಂಬ ಸದಸ್ಯರಿಬ್ಬರನ್ನು ಆಡಳಿತದ ಬಣ ಅಪಹರಿಸಿದ್ದು, ಮಾಲಿಂಗ ವಾಪಾಸು ಬಂದಿದ್ದು, ಈ ಪ್ರಕರಣ ಊರೆಲ್ಲ ಸುದ್ದಿಯಾಗಿ ಕುಂದಾಪುರದ ಜನ ಟೌನ್‌ಪಂಚಾಯತಿನ ಆವರಣದ ಸುತ್ತ ಕಿಕ್ಕಿರಿದು ನೆರೆದಿದ್ದು, ನಂತರ ೧೯೭೫ರಲ್ಲಿ ಪೌರಸಮಿತಿ ಕುಂದಾಪುರ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದದ್ದು...ಹೀಗೆ ಅನೇಕಾನೇಕ ಘಟನೆಗಳನ್ನು ಉದಯವಾಣಿಯ ಅಂದಿನ ವರದಿಗಾರ ಎ.ಎಸ್.ಎನ್.ಹೆಬ್ಬಾರರು ತುಂಬಾ ರಸವತ್ತಾಗಿ ವರದಿ ಮಾಡಿದ್ದರು. ಅದನ್ನೆಲ್ಲ ಓದುತ್ತಿರುವಾಗ ಅಲ್ಲೆಲ್ಲ ಮುಂಚೂಣಿಯಲ್ಲಿ ಕಂಡ ಹೆಸರು ಎಡ್ವಿನ್ ಕ್ರಾಸ್ತಾ ಅವರದು. ಎಡ್ವಿನ ಕ್ರಾಸ್ತಾರ ಪುರಸಭಾ ರಾಜಕೀಯ ಬದುಕಿನ ಉತ್ತುಂಗದ ದಿನಗಳಲ್ಲಿ ಅವರಿಗಿದ್ದ ಛಲ, ನೈತಿಕತೆ, ಹೋರಾಟದ ಸ್ಪೂರ್ತಿ, ತಂತ್ರಗಾರಿಕೆ ಮತ್ತು ಜನಬೆಂಬಲದ ಬಗ್ಗೆ ಓದಿ ನಾನು ಆಶ್ಚರ್ಯಗೊಂಡೆ. ಎಡ್ವಿನ್ ಕ್ರಾಸ್ತಾರ ಕುರಿತು ನನಗಿದ್ದ ಅಭಿಮಾನ, ಆದರ ಇಮ್ಮಡಿಯಾಯಿತು. ತನ್ನ ಕೊನೆಯ ದಿನಗಳ ವರೆಗೆ ಅತ್ಯಂತ ಚಟುವಟಿಕೆಯಿಂದ ಇದ್ದು ನೇರ ನಡೆ ನುಡಿಗಳನ್ನು ಎಂದಿಗೂ ಬಿಟ್ಟು ಕೊಡದೆ ಈ ನಗರದ ಮತ್ತು ಒಟ್ಟು ಸಮಾಜದ ಉನ್ನತಿಗಾಗಿ ಸದಾ ಮಿಡಿಯುತ್ತಿದ್ದ ಎಡ್ವಿನ್ ಕ್ರಾಸ್ತಾ ಇಹಲೋಕ ತ್ಯಜಿಸಿ ಒಂದು ವರ್ಷವಾಯಿತೆಂದು ನೆನಪಾಗಿ ಕಣ್ತುಂಬಿ ಬಂತು.

 

 

ಎಡ್ವಿನ್ ಕ್ರಾಸ್ತಾರ ಬದುಕನ್ನು ಒಂದು ಕ್ಷಣ ಹಿಂದಿರುಗಿ ನೋಡಿದರೆ ಎಂತಹ ಅರ್ಥಪೂರ್ಣ ಬದುಕು! ತನ್ನ ಹುಟ್ಟಿನಿಂದ ಸಾವಿನ ತಕವೂ ತನ್ನ ಸುತ್ತಮುತ್ತಲಿನ ಜನರಿಗಾಗಿ ಮಿಡಿಯುತ್ತಿದ್ದ, ಕೊನೆಯ ಉಸಿರಿನ ತಕವೂ ನ್ಯಾಯಕ್ಕಾಗಿ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ಎಡ್ವಿನ್ ಕ್ರಾಸ್ತಾರ ಬದುಕಿನ ಹಾದಿಯೂ ಕಷ್ಟ-ಸುಖ, ಸಂಘರ್ಷ-ಸಂತಸದ ಏರಿಳಿತಗಳ ರೋಚಕ ಹಾದಿಯಾಗಿತ್ತು. ಕನ್ನಡ ಕುದ್ರಿನಲ್ಲಿ ಆ ಕಾಲದಲ್ಲಿ ತಕ್ಕ ಮಟ್ಟಿಗೆ ಸ್ಥಿತಿವಂತರೇ ಆಗಿದ್ದ ಕುಟುಂಬದಲ್ಲಿ ಜನಿಸಿದ್ದ ಎಡ್ವಿನ್ ಪ್ರಾಯ ಪ್ರಬುದ್ದರಾಗುವ ಹೊತ್ತಿಗೆ ಅವರ ತಂದೆ ಪರೋಪಕಾರಗಳನ್ನು ಮಾಡಿ ಮಾಡಿ ಎಲ್ಲವನ್ನೂ ಕಳೆದುಕೊಂಡು ಊರುಬಿಡುವ ಸ್ಥಿತಿಗೆ ಬಂದಿದ್ದರು. ನಂತರ ದೂರದ ಮುಂಬೈಯಲ್ಲಿ, ಬಹ್ರೇನ್ ದೇಶದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಶ್ರಮಿಸಿದ ಎಡ್ವಿನ್ ಕ್ರಾಸ್ತಾರಿಗೆ ಕುಂದಾಪುರದ ಸೆಳೆತ ಇಲ್ಲಿಗೇ ಎಳೆದು ತಂದಿತು.

 

 

ಕುಂದಾಪುರದಲ್ಲಿ ವರ್ಕ್‌ಶಾಪ್ ತೆರೆದ ಎಡ್ವಿನ್ ಕ್ರಾಸ್ತಾ ತಮ್ಮ ನುರಿತ ಮತ್ತು ಕೌಶಲ್ಯಭರಿತ ಕೆಲಸದ ಮೂಲಕ ಅವಿಭಜಿತ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದು, ನಂತರ ಅವರ ಉದ್ಯಮ ಕುಂದಾಪುರದಿಂದ ಮೈಸೂರು ತನಕ ಬೃಹತ್ ಆಗಿ ವಿಸ್ತರಿಸಿರುವುದು ಈಗ ಇತಿಹಾಸ. ತಮ್ಮ sಞiಟಟ ಬಗ್ಗೆ ಕ್ರಾಸ್ತಾರಿಗೆ ಎಷ್ಟೊಂದು ಆತ್ಮವಿಶ್ವಾಸವಿತ್ತೆಂದರೆ ಯಾರಾದರೂ ಅವರ ಕೆಲಸದ ಬಗ್ಗೆ ತಕರಾರು ಎತ್ತಿದರೆ ’ನನ್ನಿಂದ ಆಗುವುದು ಇಷ್ಟೇ, ಇದಕ್ಕಿಂತ ಒಳ್ಳೆಯದು ಬೇಕೆಂದಿದ್ದರೆ ನೀವು ಇಂಗ್ಲಂಡಿಗೆ ಹೋಗಬೇಕು’ ಎಂದು ತಮಾಷೆಯಿಂದ ಹೇಳುತ್ತಿದ್ದರಂತೆ.

 

 

ಕುಂದಾಪುರದ ರಾಜಕೀಯದಲ್ಲಿ ಅವರು ಉಂಟುಮಾಡಿದ ಸಂಚಲನವನ್ನು ಅವರ ಸಮಕಾಲೀನರು, ಆ ಕಾಲದಲ್ಲಿ ಅವರ ಪ್ರಚಂಡ ಪ್ರತಾಪಗಳನ್ನು ಕಣ್ಣಾರೆ ಕಂಡ ಜನರು ಇಂದಿಗೂ ನೆನೆಸಿಕೊಳ್ಳುವುದಿದೆ. ೭೦-೮೦ರ ನಡುವಿನ ಕಾಲದಲ್ಲಿ ಅವರು ಕುಂದಾಪುರದ ರಾಜಕೀಯ ರಂಗದ ನಿಜವಾದ ನಾಯಕರೇ ಆಗಿದ್ದರು. ೧೯೭೫ರಲ್ಲಿ ಕುಂದಾಪುರ ಪಟ್ಟಣ ಪಂಚಾಯತ್ ಪುರಸಭೆಯಾಗಿ ಪರಿವರ್ತನೆಗೊಂಡಾಗ ಅವರು ಪ್ರಪ್ರಥಮ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾದ ಕಾಲದ ರಾಜಕೀಯ ಸನ್ನಿವೇಶ ನಿಜಕ್ಕೂ ಮೈನವಿರೇಳಿಸುವಂಥದು. ಸ್ವತಃ ತಾವೇ ನಾಯಕಾರಾಗಿ ಅವರು ಪೌರಸಮಿತಿಯನ್ನು ಕಟ್ಟಿದರು. ಅಂದಿನ ಜಿದ್ದಾಜಿದ್ದಿನ ರಾಜಕೀಯದಲ್ಲಿ ಎದುರಾಳಿಗಳನ್ನು ಮಣಿಸಿ ಬಹುಮತದ ಸಂಖ್ಯೆ ತಲುಪಿ ಅಧ್ಯಕ್ಷರಾಗಿ ಆಯ್ಕೆಯಾದರು. ಕತ್ತಲೆಯಲ್ಲಿದ್ದ ಕುಂದಾಪುರದ ಬೀದಿಗಳಿಗೆ ದೀಪಗಳ ಅಳವಡಿಕೆ ಆಗಿದ್ದು ಇವರ ಕಾಲದಲ್ಲಿಯೇ. ಅವರ ರಾಜಕೀಯ ಬದುಕು ಅತ್ಯಂತ ಪ್ರಾಮಾಣಿಕವಾಗಿತ್ತು. ಇತರರಿಗೂ ಅವರು ಜೀವಮಾನವಿಡೀ ಹೇಳಿದ್ದು ಪ್ರಾಮಾಣಿಕತೆ ಮತ್ತು ನಿಷ್ಠೆಯ ಬಗ್ಗೆ. ಕೊನೆಯವರೆಗೂ ಸೈದ್ದಾಂತಿಕ ರಾಜಕೀಯವನ್ನೇ ನಂಬಿ ಬದುಕಿದ ಕ್ರಾಸ್ತಾ ರಾಜಿ ಮಾಡಿಕೊಳ್ಳುವ, ಹಾದಿ ತಪ್ಪಿಸುವ ರಾಜಕೀಯವನ್ನು ಎಂದಿಗೂ ಮಾಡಲಿಲ್ಲ.

 

ಬಹಳ ಮುಖ್ಯವಾಗಿ ನನಗೆ ಕಾಡುವುದು ಅವರ ಸಾಮಾಜಿಕ ಬದುಕು. ಸಮಾಜದ ವಿವಿಧ ದುಗುಡಗಳಿಗೆ, ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ, ತಂಟೆ ತಕರಾರುಗಳನ್ನು ಬಗೆಹರಿಸುತ್ತಿದ್ದ ಪರಿ ಅನನ್ಯ. ಯಾವುದನ್ನು ಉತ್ತೇಜಿಸಬೇಕೋ ಅದಕ್ಕೆ ಉತ್ತೇಜನ ನೀಡುತ್ತಿದ್ದರು. ಆದರೆ ಯಾವುದು ಖಂಡನೀಯವೋ ಅಲ್ಲಿ ಮಾತ್ರ ಖಡಕ್ ಆಗಿ ಮಾತನಾಡುತ್ತಿದ್ದರು, ಖಂಡಿಸುತ್ತಿದರು, ಅನ್ಯಾಯವಾದಲ್ಲಿ ಅದನ್ನು ಪ್ರತಿಭಟಿಸುತ್ತಿದ್ದರು. ಹೋರಾಟ ಅನಿವಾರ್ಯವಾದರೆ ಅದಕ್ಕೂ ಸೈ ಎನ್ನುತ್ತಿದ್ದರು. ಕೊನೆಯ ದಿನಗಳ ತನಕ ಈ ಕಿಚ್ಚು ಅವರೊಳಗೆ ಆರಿರಲಿಲ್ಲ. ಅನ್ಯಾಯಗಳ ಸಂದರ್ಭದಲ್ಲಿ ಅವರು ಮಾತಿಗೆ ಸಿಕ್ಕರೆ ’ಅವರಿಗೆ ಏನು ಮಾಡಬೇಕು ಗೊತ್ತುಂಟೋ... ಎಂದು ತಮ್ಮ ಎಂದಿನ ದೃಢವಾದ ಧ್ವನಿಯಲ್ಲಿ ಮಾತು ಶುರುಮಾಡುತ್ತಿದ್ದರು.

 

ಎಡ್ವಿನ್ ಕ್ರಾಸ್ತಾ ನಿಜ ಅರ್ಥದಲ್ಲಿ ಆದರ್ಶಪ್ರಾಯರು, ಪ್ರಾತಃ ಸ್ಮರಣೀಯರು. ಕ್ರಾಸ್ತರು ಈಗ ಇದ್ದಿದ್ದರೆ, ಮಾತಿಗೆ ಸಿಕ್ಕಿದ್ದರೆ, ನಮಗೆಲ್ಲ ಮಾರ್ಗದರ್ಶನ ನಿಡುತ್ತಿದ್ದರೆ, ಭರವಸೆ-ಬೆಂಬಲ-ಸ್ಥೈರ್ಯದ ಆಸರೆಯಾಗಿ ಇರುತ್ತಿದ್ದರೆ...ಎಂದು ಇಂದಿಗೂ ಅನಿಸುವುದಿದೆ. ಆದರೆ ಈಗ ಕ್ರಾಸ್ತಾ ನೆನಪು ಮಾತ್ರ. ಅವರು ತಣ್ಣಗೆ ಮಾತನಾಡುತ್ತಾ ಹೊರಟು ಹೋಗಿ ವರುಷ ಒಂದು ಸಂದಿದೆ. ನಮ್ಮ ಮೈಮನಗಳಲ್ಲಿ ಅವರದೇ ನೆನಪು ತುಂಬಿದೆ. ಎಡ್ವಿನ್ ಕ್ರಾಸ್ತಾರಿಗೆ ಇದು ನಮ್ಮ ನುಡಿ ನಮನ.

 

 

ವರದಿ: ಶಶಿಧರ ಹೆಮ್ಮಾಡಿ.


Share: