ಭಟ್ಕಳ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಜಿಲ್ಲಾಡಳಿತ ಉತ್ತರಕನ್ನಡ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಣ್ಕುಳಿಯಲ್ಲಿ ಇರುವ ಶ್ರೀ ಕಾಮಾಕ್ಷಿ ಬಿಲ್ಡಿಂಗ್ನಲ್ಲಿ ನೂತನವಾಗಿ ತೆರೆಯಲಾದ ನಮ್ಮ ಕ್ಲಿನಿಕ್ ಅನ್ನು ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ರಾಜ್ಯಾದ್ಯಂತ ನಮ್ಮ ಕ್ಲಿನಿಕ್ಗಳನ್ನು ತೆರೆದಿದೆ. ಜನಸಾಮಾನ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್ಜಿ ಮಾತನಾಡಿ, ನಮ್ಮ ಕ್ಲಿನಿಕ್ನಿಂದಾಗಿ ಸರಕಾರಿ ಆಸ್ಪತ್ರೆಯ ಮೇಲೆ ಇರುವ ಒತ್ತಡ ಕಡಿಮೆಯಾಗಲಿದೆ. ನಮ್ಮ ಕ್ಲಿನಿಕ್ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿಗಳನ್ನು ನೀಡಬೇಕಾಗಿದೆ ಎಂದು ತಿಳಿಸಿದರು. ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ದೀರ್ಘಾವಧಿ ರೋಗಗಳಿಗೆ ಸಂಬಂಧಿಸಿದಂತೆ ಔಷಧಿ ಅಥವಾ ಚಿಕಿತ್ಸೆ ಪಡೆಯಲು ನಮ್ಮ ಕ್ಲಿನಿಕ್ ಹೆಚ್ಚು ಸಹಕಾರಿಯಾಗಲಿದೆ. ನಮ್ಮ ಕ್ಲಿನಿಕ್ಗಳಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಕೆ.ಸುರೇಶ, ಶ್ರೀ ಕಾಮಾಕ್ಷಿ ಬಿಲ್ಡಿಂಗ್ ಮಾಲಕ ಆನಂದ ಕಿಣಿ, ಎಮ್.ಡಿ.ನಾಯ್ಕ, ಗಣಪತಿ ನಾಯ್ಕ ಜಾಲಿ, ಡಾ. ಅನಂತ ಮೊದಲಾದವರು ಉಪಸ್ಥಿತರಿದ್ದರು.