ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬ್ರಾಹ್ಮಣರನ್ನು ಸಿಎಂ ಮಾಡಲು ಆರೆಸ್ಸೆಸ್ ತೀರ್ಮಾನ: ಎಚ್.ಡಿ. ಕುಮಾರಸ್ವಾಮಿ

ಬ್ರಾಹ್ಮಣರನ್ನು ಸಿಎಂ ಮಾಡಲು ಆರೆಸ್ಸೆಸ್ ತೀರ್ಮಾನ: ಎಚ್.ಡಿ. ಕುಮಾರಸ್ವಾಮಿ

Mon, 06 Feb 2023 19:38:43  Office Staff   Vb

ಬೆಂಗಳೂರು: 'ವಿಧಾನಸಭೆ ಚುನಾವಣೆಯ ಬಳಿಕ ಆರೆಸ್ಸೆಸ್, ಸಂಘ ಪರಿವಾರದವರು ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಯವರನ್ನು ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ 'ಪಂಚರತ್ನ' ಯಾತ್ರೆ ಸಂದರ್ಭದಲ್ಲಿ ಜೋಶಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, 'ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ಬ್ರಾಹ್ಮಣ ವರ್ಗಕ್ಕೆ ಪ್ರಹ್ಲಾದ್ ಜೋಶಿ ಸೇರಿದ್ದು, ಅವರು ಹಳೆಯ ಕಾಲದ ಬ್ರಾಹ್ಮಣರಂತಲ್ಲ' ಎಂದು ವಾಗ್ದಾಳಿ ನಡೆಸಿದರು.

'ಬ್ರಾಹ್ಮಣ ಸಮುದಾಯದಲ್ಲಿ ಎರಡು-ಮೂರು ವಿಧಗಳಿವೆ. ಶೃಂಗೇರಿಯ ಮಠವನ್ನು ಒಡೆದ ಬ್ರಾಹ್ಮಣ ವರ್ಗ ಜೋಶಿ ಅವರದ್ದು. ನಮ್ಮ ಭಾಗದ ಹಳೆಯ ಬ್ರಾಹ್ಮಣರಂತಲ್ಲ ಅವರು. ಜೋಶಿಯವರು 'ಮರಾಠಾ ಪೇಳ್ವೆ' ಸಮುದಾಯಕ್ಕೆ ಸೇರಿದವರು. ಆದರೆ, ಬ್ರಾಹ್ಮಣರು ಸರ್ವೇ ಜನಾಃ ಸುಖಿನೋ ಭವಂತು ಅನ್ನುವವರು. ಸರ್ವ ಜನರ ಕ್ಷೇಮ ಬಯಸುವವರು' ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು.

ಮಾರ್ಚ್‌ನಲ್ಲಿ ಸಮಾರೋಪ: 'ಜೆಡಿಎಸ್ ಪಂಚರತ್ನ ಯಾತ್ರೆ ಈ ತಿಂಗಳ 27ರವರೆಗೆ ನಡೆಯಲಿದೆ. ಮಾರ್ಚ್‌ನಲ್ಲಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ರಥಯಾತ್ರೆ. ಮಾರ್ಚ್ 20 ಅಥವಾ 25ಕ್ಕೆ ಸಮಾರೋಪ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ಕ್ಷೇತ್ರಗಳು ಜೆಡಿಎಸ್‌ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕಂಡಿವೆ. ಆದರೆ, ಇದೀಗ ಅಭಿವೃದ್ಧಿ ನೆಪದಲ್ಲಿ ಬಿಜೆಪಿ ಲೂಟಿ ಮಾಡುತ್ತಿದೆ. ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.


Share: