ಉಡುಪಿ, ನ.೧: ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಶುಚಿತ್ವ ಕಾಪಾಡುವ ಉದ್ದೇಶದಿಂದ ಆ ಸ್ಥಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ ತಿಳಿಸಿದ್ದಾರೆ.

ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವ ಹೊಸದಾದ ಡಬಲ್ ಡೆಕ್ಕರ್ ವಿಹಾರ ದೋಣಿ ‘ಶ್ರೀರಾಜರಾಜೇಶ್ವರಿ ಟೂರಿಸ್ಟ್ ಬೋಟ್’ನ್ನು ರವಿವಾರ ಮಲ್ಪೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೀಚ್ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಆ ಪ್ರದೇಶದ ಅಂದ ಕೆಡುತ್ತಿದೆ. ಆದುದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಅನಿವಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪದ ಅಭಿವೃದ್ಧಿಗೆ ಸರಕಾರ ಅನುದಾನ ಮಂಜೂರು ಮಾಡಿದ್ದು, ಸದ್ಯದಲ್ಲೇ ಈ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಕೂಡ ಅಭಿವೃದ್ಧಿಯಲ್ಲಿ ಹಿನ್ನೆಡೆ ಹಾಗೂ ಸವಲತ್ತುಗಳ ಕೊರತೆಯಿಂದ ಅದಕ್ಕೆ ತೊಡಕಾಗಿದೆ. ಖಾಸಗಿ ಸಹಭಾಗಿತ್ವ ಇದ್ದರೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಪ್ರಚಾರ ದೊರೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಣ್ ಮಧುಕರ್ ಪವಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಸ್.ಪ್ರಸನ್ನ ಕುಮಾರ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ನಗರಸಭಾ ಆಯುಕ್ತ ಗೋಕುಲ್ದಾಸ್ ನಾಯಕ್, ಉಪಾಧ್ಯಕ್ಷೆ ಇಂದಿರಾ ಶೇಖರ್, ಸದಸ್ಯರಾದ ಪಾಂಡುರಂಗ ಮಲ್ಪೆ, ವಿಜಯ ಕುಂದರ್ ಭಾಗವಹಿಸಿದ್ದರು.
ಬೋಟಿನ ಪಾಲುದಾರರಾದ ಗಣೇಶ್, ಸದಾನಂದ ಬಾಪುತೋಟ ಉಪಸ್ಥಿತರಿದ್ದರು. ಮಲ್ಪೆ ರಾಘವೇಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಡಬಲ್ ಡೆಕ್ಕರ್ ಸಿದ್ಧ!
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರನ್ನು ಸಾಗಿಸಲು ಹಾಗೂ ರಾತ್ರಿಯ ವೇಳೆ ಸಮುದ್ರದಲ್ಲಿ ಪಾರ್ಟಿ ನಡೆಸಲು ಸುಸಜ್ಜಿತ ‘ರಾಜರಾಜೇಶ್ವರಿ’ ಡಬಲ್ ಡೆಕ್ಕರ್ ಬೋಟು ಇದೀಗ ಸಿದ್ಧವಾಗಿದೆ.
ಸೈಂಟ್ಮೇರಿಸ್ ದ್ವೀಪಕ್ಕೆ ಈವರೆಗೆ ಎರಡು ಬೋಟುಗಳಿದ್ದು, ಇದೀಗ ಹೊಸದಾಗಿ ಡಬಲ್ಡೆಕ್ಕರ್ ಬೋಟು ಸೇರ್ಪಡೆಯಾಗಿದೆ.
ಎರಡು ಅಂತಸ್ತಿನಲ್ಲಿ ಒಟ್ಟು ೧೦೦ ಮಂದಿ ಇದರಲ್ಲಿ ಆರಾಮವಾಗಿ ಕುಳಿತು ಪಾರ್ಟಿ ಆಚರಿಸಬಹುದಾಗಿದೆ. ಸುಮಾರು ೪೫ಲಕ್ಷ ರೂ. ವೆಚ್ಚದಲ್ಲಿ ಈ ಬೋಟನ್ನು ನಿರ್ಮಿಸಲಾಗಿದೆ. ಇದರಲ್ಲಿ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಬೋಟಿನ ಪಾಲುದಾg ಸದಾನಂದ ತಿಳಿಸಿದ್ದಾರೆ