ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳ್ತಂಗಡಿ: ಎಂಎಸ್‌ಇಝೆಡ್ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ: ವಿಶ್ವ ತುಳು ಸಮ್ಮೇಳನದ ಸಮಾರೋಪದಲ್ಲಿ ಕೇಂದ್ರ ಸಚಿವ ಮೊಯ್ಲಿ; ‘ಶೀಘ್ರವೇ ತುಳು ಭಾಷೆ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆ’

ಬೆಳ್ತಂಗಡಿ: ಎಂಎಸ್‌ಇಝೆಡ್ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ: ವಿಶ್ವ ತುಳು ಸಮ್ಮೇಳನದ ಸಮಾರೋಪದಲ್ಲಿ ಕೇಂದ್ರ ಸಚಿವ ಮೊಯ್ಲಿ; ‘ಶೀಘ್ರವೇ ತುಳು ಭಾಷೆ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆ’

Mon, 14 Dec 2009 03:21:00  Office Staff   S.O. News Service

ಬೆಳ್ತಂಗಡಿ, (ತುಳುನಾಡ ಸಿರಿದೊಂಪ ಉಜಿರೆ), ಡಿ.13: ಮಂಗಳೂರಿನಲ್ಲಿ ಸ್ಥಾಪನೆ ಯಾಗಲಿರುವ ವಿಶೇಷ ಆರ್ಥಿಕ ವಲಯ ಇಲ್ಲಿನ ಬೃಹತ್ ಆರ್ಥಿಕ ಬೆಳವಣಿಗೆಗೆ ಅವಕಾಶ ಒದಗಿಸಲಿದೆ. ಜಿಲ್ಲೆಯ ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿಯೂ ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ವಿಶೇಷ ಆರ್ಥಿಕ ವಲಯದ ಬಗ್ಗೆ ವಿಸ್ತೃತವಾದ ಚರ್ಚೆ ನಡೆದು ಇದರ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.

15694_5.jpg

ಉಜಿರೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿಶ್ವ ತುಳು ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಅವರು ಮಾತನಾಡುತ್ತಿದ್ದರು.

ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ತುಳು, ಕೊಡವ ಸೇರಿದಂತೆ ೧೨ ಭಾಷೆಗಳನ್ನು ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ನೇಮಿಸಲಾಗಿದ್ದ ತಜ್ಞ ಸಮಿತಿಯ ವರದಿಯೂ ಬಂದಿದೆ. ಯುಪಿ‌ಎಸಿ ಪರೀಕ್ಷೆಗಳಲ್ಲಿ ಅಳವಡಿಸುವ ವಿಚಾರದಲ್ಲಿ ಗೊಂದಲವಿದೆ. ಈ ಗೊಂದಲ ಗಳನ್ನು ಸರಿಪಡಿಸಲಾಗುತ್ತಿದ್ದು, ಕೆಲವೇ ಸಮಯದಲ್ಲಿ ಅಧಿಕೃತ ಘೋಷಣೆಯನ್ನು ನಿರೀಕ್ಷಿಸ ಬಹುದಾಗಿದೆ ಎಂದು ಭರವಸೆ ನೀಡಿದರು.

15683_7.jpg

ತುಳುವ ಎಂಬ ಗುರುತಿಸುವಿಕೆಯನ್ನು ಧೈರ್ಯವಾಗಿ ಪ್ರದರ್ಶಿಸುವ ಅಗತ್ಯವಿದೆ. ತುಳು ಭಾಷೆ, ಸಂಸ್ಕೃತಿಗೆ ತನ್ನದೇ ಆದ ಶಕ್ತಿಯಿದೆ. ಯಾವ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿ ತುಳು ಸಂಸ್ಕೃತಿಗೆ, ಇಲ್ಲಿನ ಜನತೆಗಿದೆ ಎಂದ ಮೊಯ್ಲಿ, ತುಳುನಾಡಿನದ್ದು ಧಾರ್ಮಿಕ ಸಮನ್ವಯತೆಯ, ಭಾಷಾ ಸಮನ್ವಯತೆಯ ಕೇಂದ್ರವಾಗಿದೆ. ಈ ಸಮನ್ವಯತೆಯನ್ನು  ಉಳಿಸಿಕೊಂಡು ತುಳುನಾಡಿನ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

15683_5.jpg

15694_14.jpg

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ರೆಂದ್ರ ಹೆಗ್ಗಡೆ ವಹಿಸಿದ್ದರು. ಉತ್ತರಾಂಚಲದ ರಾಜ್ಯಪಾಲೆ ಮಾರ್ಗರೆಟ್ ಆಳ್ವ, ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮಲ್ಲಿಕಾ ಪ್ರಸಾದ್, ಗೋಪಾಲ ಭಂಡಾರಿ, ಅಭಯಚಂದ್ರ ಜೈನ್, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಯಶೋವರ್ಮ ಸ್ವಾಗತಿಸಿದರು.

ನಮ್ಮಲ್ಲಿ ಪ್ರಗತಿಯ ವೇಗ ಕಡಿಮೆಯಾಗುತ್ತಿದೆ. ಯಾವುದೇ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಒಂದಲ್ಲ ಒಂದು ಅಡ್ಡಿ ಎದುರಾಗುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ - ವೀರಪ್ಪ ಮೊಯ್ಲಿ

ಮುಗಿನ ಸಮ್ಮೇಳನೊ.... ಮುಗಿಯಂದಿ ಜನಸಾಗರೊ....: ವಿಶ್ವ ತುಳು ಸಮ್ಮೇಳನ ೨೦೦೯ಕ್ಕೆ ವರ್ಣರಂಜಿತ ತೆರೆ

{ಪುಷ್ಪರಾಜ್ ಬಿ.ಎನ್.}

15694_10.jpg

ಉಜಿರೆ: ಕಳೆದ ಮೂರು ದಿನಗಳ ಕಾಲ ಉಜಿರೆಯಲ್ಲಿ ಸಡಗರದ ವಾತಾವರಣದೊಂದಿಗೆ ವೈಚಾರಿಕ ಚಿಂತನೆಗೂ ಹಾದಿ ಮಾಡಿಕೊಟ್ಟ ತುಳು ಸಮ್ಮೇಳನ ಇಂದು ವಿದ್ಯುಕ್ತವಾಗಿ ತೆರೆ ಕಂಡರೂ ಉಜಿರೆಗೆ ಬರುತ್ತಿರುವ ಜನ ಸಾಗರ ಸಮಾರೋಪ ಸಮಾರಂಭದ ಬಳಿಕವು ಕಡಿಮೆಯಾಗಿಲ್ಲ.

ವ್ಯಾಪಕವಾಗಿ ಪ್ರಚಾರ ಪಡೆದ ತುಳು ಸಮ್ಮೇಳನಕ್ಕೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಅಲ್ಲದೆ ಮುಂಬೈ ಹಾಗೂ ಹೊರನಾಡಿನಲ್ಲಿರುವ ತುಳುವರು ಪ್ರಪ್ರಥಮ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಸೇರಿದ್ದರು.

15683_21.jpg

ಊರುಗು ಊರೇ ಸೇರ್ಂಡ್....

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೊಡ್ಡ ನಗರವು ಅಲ್ಲ ಸಣ್ಣ ಹಳ್ಳಿಯೂ ಅಲ್ಲದೆ ಇರುವ ಉಜಿರೆಯಲ್ಲಿ ನಡೆದ ಮೂರು ದಿನಗಳ ಸಮ್ಮೇಳನದಲ್ಲಿ ಸ್ವಲ್ಪ ಕಡಿಮೆ ಜನಸಂದಣಿ ಕಂಡರೂ ಇಡೀ ಊರಿನ ಜನರೇ ಈ ಸಮ್ಮೇಳನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೇರಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಂಡ ವಾತಾವರಣ ಸೃಷ್ಟಿಯಾಗಿತ್ತು.

ಕೈಕೊಟ್ಟ ಸಂಚಾರ ವ್ಯವಸ್ಥೆ

 

ಸಮ್ಮೇಳನದ ಯಶಸ್ಸಿಗಾಗಿ ಇರುವ ರಸ್ತೆಯನ್ನು ದುರಸ್ತಿ ಮಾಡಿದರೂ ಅಗಲ ಕಿರಿದಾದ ರಸ್ತೆ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರಕ್ಕೆ ಏನೇನೂ ಸಾಲದಾಯಿತು. ವಿ‌ಐಪಿಗಳು ಜನಸಾಮಾನ್ಯರ ವಾಹನಗಳನ್ನು ನಿಲ್ಲಿಸಿ ಪೊಲೀಸರ ಬಂದೋಬಸ್ತಿನಲ್ಲಿ ಬರ್ರನೆ ಸಾಗಿ ಹೋದರೆ ಹೊರತು, ಜನ ಸಾಮಾನ್ಯರ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಕಂಡು ಕಾಣದಂತೆ ಸಾಗಿ ಹೋದರು. ಸಮ್ಮೇಳನದ ಕಾರ್ಯಕ್ರಮ ನೋಡಲು ತುಳುಗ್ರಾಮ ಕ್ಷಿಸಲು ಬಂದ ಜನಸಾಗರ ಗುರುವಾಯನಕೆರೆಯಿಂದ ಉಜಿರೆಯವರೆಗೆ ವಾಹನಗಳ ಸರತಿಯಲ್ಲಿ ಸಾಗಲೂ ಆಗದೆ ನಡೆದುಕೊಂಡು ಹೋಗಲು ಆಗದೆ ಗಂಟೆಗಟ್ಟಲೆ ಕಾಯಬೇಕಾಯಿತು.
 ಆದರೂ ಈ ನಡುವೆ ಜಾಗ ಸಿಕ್ಕಲ್ಲಿ ವಾಹನ ನಿಲ್ಲಿಸಿ ಜನ ಮೈಲುದ್ದ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು.

 

ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣಗೊಂಡ ತುಳುಗ್ರಾಮ, ವಸ್ತು ಪ್ರದರ್ಶನ ಎಲ್ಲವನ್ನು ಕ್ಷಿಸಲು ಬಂದ ಕೆಲವರು ರಸ್ತೆಯಲ್ಲೇ ಗಂಟೆಗಳ ಕಾಲ ಕಾದು ಸಮ್ಮೇಳನದ ಸಂಪೂರ್ಣ ದರ್ಶನ ಮಾಡಲು ಸಾಧ್ಯವಾಗದೆ ಹಿಂದಿತಿರುಗಿದ ದೃಶ್ಯವೂ ಕಂಡು ಬಂತು.

ಸಮ್ಮೇಳನ ಮೂರು ದಿನಗಳಲ್ಲಿ ಮುಗಿದು ಹೋಗುತ್ತದೆ ಎಂಬ ಕಾತರದಿಂದ ಎಲ್ಲಾ ಜನಸಾಗರ ಒಂದೆರಡು ದಿನಗಳಲ್ಲಿ ವಾಹನಗಳಲ್ಲಿ ಬಂದು ಸೇರತೊಡಗಿದ ಕಾರಣ ನಿರೀಕ್ಷೆಗಿಂತಲೂ ಮೀರಿ ಜನಸಂದಣಿ ಸೇರಿತ್ತು. ಪರಿಣಾಮವಾಗಿ ಆಹಾರದ ಸ್ಟಾಲುಗಳಲ್ಲಿ, ಭೋಜನ ಕೇಂದ್ರಗಳಲ್ಲಿ ನಿರೀಕ್ಷೆಗೂ ಮೀರಿದ ಜನರಿಂದಾಗಿ ಸಂಘಟಕರು ಪರದಾಡಬೇಕಾಯಿತು. ಆದರೂ ಸಂಘಟಕರು ಜನಸಂದಣಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾದ ತುಳುನಾಡು ಹಾಗೂ ವಸ್ತು ಪ್ರದರ್ಶನ ಮತ್ತು ಪ್ರಧಾನ ಸಭಾಂಗಣದಲ್ಲಿ ಜನ ಚದುರಿಹೋದ ಕಾರಣ ಹೆಚ್ಚಿನ ಅವ್ಯವಸ್ಥೆ ಉಂಟಾಗಲಿಲ್ಲ.

ತುಳು ಸಂಸ್ಕೃತಿ ವ್ಯಾಪರೀಕರಣದ ವಿರುದ್ಧ ಮೊಳಗಿದ ಧ್ವನಿ

15683_22.jpg

ಉಜಿರೆ: ತುಳು ಸಂಸ್ಕೃತಿ, ಆರಾಧನೆ ಜೊತೆ ವ್ಯಾಪರೀಕರಣದ ಮನೋಪ್ರವೃತ್ತಿ ಅಪಾಯಕಾರಿ ಬೆಳವಣಿಗೆ. ಸತ್ಯ ನ್ಯಾಯವನ್ನು ಧರ್ಮವೆಂದು ಕೂಡಿ ಬದುಕಿನ ತುಳುನಾಡಿನಲ್ಲಿ ಸೌಹಾರ್ದ ಬದುಕಿಗೂ ತೊಂದರೆಯಾಗುತ್ತಿರುವ ಬೆಳವಣಿಗೆ ನಡೆಯುತ್ತಿರುವ ಬಗ್ಗೆ ತುಳು ಸಮ್ಮೇಳನದ ಕೊನೆಯ ದಿನದ ಗೋಷ್ಠಿಯಲ್ಲಿ ಡಾ. ಶಶಿಕಲಾ ಶೆಟ್ಟಿ ತಮ್ಮ ಪ್ರಾಮಾಣಿಕ ಕಾಳಜಿ ವ್ಯಕ್ತಪಡಿಸಿ ದರು.

ತುಳುನಾಡಿನ ಮುಂದಿರುವ ಸವಾಲುಗಳ ಬಗ್ಗೆ ಮಾತನಾಡಿದ ಡಾ. ಶಶಿಕಲಾ ಶೆಟ್ಟಿಯವರು ಇತ್ತೀಚಿನ ದಿನಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ವೈಭಕರಣ, ಆರಾಧನೆಯ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರದ ಮನೋಭಾವ, ಆಚರಣೆಯ ನೆಪದಲ್ಲಿ ಆಡಂಭರ ತುಳುನಾಡಿನ ಜನರನ್ನು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಎಂದರು.

ತುಳುನಾಡಿನ ಜನರ ಒಲವು ಕೃಷಿಯಿಂದ ಇನ್ನೂ ಪಲ್ಲಟಗೊಂಡಿಲ್ಲ

ಸಮ್ಮೇಳನದ ಉದ್ದಕ್ಕೂ ಹರಿದು ಬಂದ ಜನಸಾಗರ ತುಳುನಾಡಿನ ಜನರ ಮನದಿಂದ ಇನ್ನೂ ಕೃಷಿ ಪಲ್ಲಟಗೊಂಡಿಲ್ಲ ಎನ್ನುವುದಕ್ಕೆ ಸಾಕ್ಷಿಯಾಯಿತು. ಕೃಷಿ, ಸಂಸ್ಕೃತಿ, ಕಸುಬುಗಳಲ್ಲಿ ಪಲ್ಲಟ ಎಂಬ ವಿಚಾರಗೋಷ್ಠಿಯಲ್ಲಿ ಡಾ. ನರೇಂದ್ರ ರೈ ದೇರ್ಲ, ತುಕರಾಂ ಪೂಜಾರಿ, ಡಾ. ಚಿನ್ನಪ್ಪ ಗೌಡ ಅತ್ಯಂತ ಸಮರ್ಥವಾಗಿ ಹೇಗೆ ತುಳುನಾಡಿನ ಜನಮಾನಸದಲ್ಲಿ ಈ ಪಲ್ಲಟಗಳು ತವಕ ತಲ್ಲಣಗಳನ್ನುಂಟುಮಾಡುತ್ತವೆ ಎಂದು ವಿವರಿಸಿದಾಗ ಸಭಾ ಮಂಟಪದಲ್ಲಿ ನೆರೆದಿದ್ದ ಜನರು ಭಾವೋದ್ವೇಗಕ್ಕೊಳಗಾಗಿ ಕಣ್ಣಾಲಿಗಳನ್ನು ತುಂಬಿಕೊಂಡಾಗ ತುಳುನಾಡಿನ ಜನಮಾನಸದಿಂದ ಕೃಷಿ ಇನ್ನೂ ಪಲ್ಲಟಗೊಂಡಿಲ್ಲ ಎಂದು ಸಾಬೀತು ಪಡಿಸಿದರು.

15683_9.jpg

ತುಳು ಗ್ರಾಮದಲ್ಲಿ ಪ್ರಾಚೀನ ತುಳುನಾಡಿನ ವಿವಿಧ ವೃತ್ತಿಗಳು, ಕೃಷಿ ಉಪಕರಣಗಳನ್ನು ನೋಡಲು ಜನ ಕುಟುಂಬ ಸಹಿತ ಮುಗಿಬಿದ್ದು ನೋಡುತ್ತಿರುವುದನ್ನು ಗಮನಿಸಿದಾಗ ತುಳುವರ ಮನದಿಂದ ಕೃಷಿಯ ಬಗೆಗಿನ ಒಲುಮೆ ಇನ್ನೂ ಹೊರಟು ಹೋಗಿಲ್ಲ ಎನ್ನುವುದು ಸಾರಿ ಹೇಳುತ್ತಿತ್ತು.

ತುಳುನಾಡಿನ ವ್ಯಾಪಾರ ವಹಿವಾಟುಗಳ ಬಗ್ಗೆ ಕೊನೆಯ ದಿನದ ಗೋಷ್ಠಿಯಲ್ಲಿ ಗಮನ ಸೆಳೆದ ಡಾ.ಎನ್.ಕೆ. ತಿಂಗಳಾಯರು ತುಳುನಾಡಿನಲ್ಲಿ ಬೆಳೆದ ಸಹಕಾರ ಚಳವಳಿಯ ಬಗ್ಗೆ ಮಾತನಾಡಿ ಈ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ ಎಂದರು. ಆದರೆ ಇತ್ತೀಚೆಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ತುಳುನಾಡಿನಲ್ಲಿ ಬೆಳೆದು ಬಂದ ಸ್ವಸಹಾಯ ಸಂಘಗಳ ಬಗ್ಗೆ ಗಮನ ಹರಿಸಲೇ ಇಲ್ಲ.

ಇಡೀ ಸಮ್ಮೇಳನದ ಯಶಸ್ಸಿಗೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಒದಗಿಸಿದ ಸ್ವಸಹಾಯ ಸಂಘಗಳ ಶಕ್ತಿ ಎಲ್ಲೂ ಪ್ರಸ್ತಾಪವಾಗಲೇ ಇಲ್ಲ. ತುಳುನಾಡಿನ ಪ್ರಾಚೀನ ಕೃಷಿ, ಕಸುಬುಗಳ ಬಗ್ಗೆ ಪ್ರದರ್ಶನ ನಡೆಯಿತು. ಆದರೆ, ಸಮ್ಮೇಳನದಲ್ಲಿ ಈ  ಬಗ್ಗೆ ಒತ್ತು ನೀಡುವ ವಿಚಾರ ಮಂಡನೆಯಾಗಲಿಲ್ಲ. ವಿಶೇಷ ಆರ್ಥಿಕ ವಲಯದಿಂದ ಜಿಲ್ಲೆಯ ಜನರಿಗೆ ಉದ್ಯೋಗವಕಾಶ ದೊರೆಯಬಹುದು ಎನ್ನುವ ಆಶಯವನ್ನು ಉದ್ಯಮಿ ಗಿರಿಧರ ಪ್ರಭು ಮಂಡಿಸುವ ಮೂಲಕ ಔದ್ಯಮಿಕ ತುಳುನಾಡನ್ನು ಕಟ್ಟುವ ಚಿಂತನೆಯನ್ನು ಮುಂದಿಟ್ಟರು. ಎರಡನೆ ದಿನದ ವಿಚಾರಗೋಷ್ಠಿಯಲ್ಲಿ ಕೃಷಿ, ಕಸುಬು ಪಲ್ಲಟದ ಬಗ್ಗೆ ವಿದ್ವಾಂಸರು ಮಂಡಿಸಿದ ಅಭಿಪ್ರಾಯಕ್ಕಿಂತ ತೀರಾ ಭಿನ್ನವಾಗಿತ್ತು.

ದೇಶದಲ್ಲಿ ತೆಲಂಗಾಣದಂತಹ ಪ್ರತ್ಯೇಕ ರಾಜ್ಯದ ಬೇಡಿಕೆಯ ವಿವಾದ ಬಿಸಿಯಾಗಿರುವಾಗಲೇ ವಿಶ್ವತುಲು ಸಮ್ಮೇಳನದಲ್ಲಿ ಪ್ರತ್ಯೇಕ ತುಳು ನಾಡಿನ ಬೇಡಿಕೆ ಮಂಡನೆಯಾಗದಿದ್ದರೂ ಪ್ರತ್ಯೇಕ ತುಳುನಾಡು ಅದರ ಚರಿತ್ರೆ ಅದರ ವೈವಿಧ್ಯಗಳ ಬಗ್ಗೆ ಸಮ್ಮೇಳನ ಪರೋಕ್ಷವಾಗಿ ಬೆಳಕು ಚೆಲ್ಲಿತು.

15683_10.jpg

 

ರೇಡಿಯೋ ಮಾಸ್ಕೊದಲ್ಲಿ ತುಳು ಚಿತ್ರಗೀತೆ ಪ್ರಸಾರಕ್ಕೆ ಕಾರಣರಾದ ಹೆಚ್. ಮುಹಮ್ಮದ್
ತುಳು ಚಲನಚಿತ್ರಗಳು ಬಿಡುಗಡೆಯಾದರೂ ತುಳು ಚಿತ್ರಗೀತೆಗಳು ಆಕಾಶವಾಣಿಯಲ್ಲಿ ಬಂದಿರಲಿಲ್ಲ. ಈ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಹೆಚ್. ಮುಹಮ್ಮದ್ ಅವರು ತಮ್ಮ ಪ್ರಯತ್ನದಿಂದ ೧೯೭೫ರಲ್ಲಿ ರೇಡಿಯೋ ಮಾಸ್ಕೋದಲ್ಲಿ ತುಳು ಚಲನಚಿತ್ರಗಳು ಕೇಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

 

ರೇಡಿಯೋ ಮಾಸ್ಕೋದಲ್ಲಿ ಆಗ ಕನ್ನಡ ಕಾರ್ಯಕ್ರಮಗಳು ಪ್ರತಿದಿನ ನಡೆಯುತ್ತಿದ್ದವು. ಪಿ. ಮಹಾದೇವಯ್ಯ ಅವರು ಕನ್ನಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಮುಹಮ್ಮದ್ ಅವರು ರೇಡಿಯೋ ಮಾಸ್ಕೊಗೆ ಪತ್ರ ಬರೆದು ತುಳು ಚಿತ್ರಗೀತೆಗಳಿಗೆ ಅವಕಾಶ ನೀಡುವಂತೆ ವಿನಂತಿಸಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಆಕಾಶವಾಣಿ ಕೇಂದ್ರದದವರು ತುಳು ಚಿತ್ರUತೆಗಳ ರೆಕಾರ್ಡ್‌ಅನ್ನು ಕಳುಹಿಸುವಂತೆ ಕೇಳಿದ್ದರು. “ಉಡಲ್ಪ ತುಡಾರ್” ಚಿತ್ರದ ಗೀತೆಯ ರೆಕಾರ್ಡ್‌ಅನ್ನು ಮಾಸ್ಕೋ ಆಕಾಶವಾಣಿ ಕೇಂದ್ರಕ್ಕೆ ಕಳುಹಿಸಲಾಯಿತು. ೧೯೭೫ರ ಸಪ್ಟೆಂಬರ್ ೧೨ರಂದು ೬:೪೦ಕ್ಕೆ ಚಿತ್ರಗೀತೆಯಲ್ಲಿ ಉಡಲ್ದ ತುಡರ್‌ನ ಗೀತೆಗಳು ಪ್ರಸಾರವಾಯಿತು. ಆ ಬಳಿಕ ಶ್ರೋತೃಗಳ ಕೋರಿಕೆಯಂತೆ ಈ ಗೀತೆಗಳು ಹಲವು ಬಾರಿ ಮರು ಪ್ರಸಾರವಾಗಿತ್ತು. ಕರ್ನಾಟಕದ ಆಕಾಶವಾಣಿ ನಿಲಯಗಳೇ ತುಳು ಚಿತ್ರಗೀತೆಗಳನ್ನು ಪ್ರಸಾರ ಮಾಡದಿದ್ದಾಗ ಮುಹಮ್ಮದ್ ಅವರ ಪ್ರಯತ್ನದಿಂದ ತುಳು ಚಿತ್ರಗೀತೆಗಳು ಪ್ರಸಾರಗೊಳ್ಳುವಂತಾಯಿತು.

ಚರ್ಚಿತಗೊಂಡ ಎಸ್‌ಇಝಡ್, ನಾಗರ್ಜುನ, ನೇತ್ರಾವತಿ ತಿರುವು ಯೋಜನೆ

15694_6.jpg

ಉಜಿರೆ:  ಕೋಡೆ-ಇನಿ -ಎಲ್ಲೆ ಎಂಬ ಪರಿಕಲ್ಪನೆಯಲ್ಲಿ  ನಡೆಯುತ್ತಿರುವ  ಸಮ್ಮೇಳನದಲ್ಲಿ ಈಗಾಗಲೇ  ತುಳು ಸಾಹಿತ್ಯ, ಜಾನಪದ ಹಾಗೂ ವಿವಿಧ ವಿಷಯಗಳ ಬಗ್ಗೆ ವಿಸ್ತೃತವಾದ ಚರ್ಚೆಗಳು ನಡೆದಿವೆ.  ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ  ಪೇಜಾವರ ಶ್ರೀಗಳು ವಿಶೇಷ ಆರ್ಥಿಕ ವಲಯ, ನಾಗಾರ್ಜುನ, ನೇತ್ರಾವತಿ ನದಿ  ತಿರುವು ಯೋಜನೆಗಳ ವಿರುದ್ಧ  ಧ್ವನಿಯೆತ್ತಿದರು. ಮಾತ್ರವಲ್ಲ ಈ ವಿರುದ್ಧ  ಪ್ರತಿಕ್ರಿಯಿಸಿದ ಇವರು  ಸಮಸ್ತ ತುಳು ನಾಡಿನ ಜನರ ಚಿಂತನೆಯಾಗಿದೆ ಎಂದು ಹೇಳಿದರು.

 ಮತ್ತೊಂದೆಡೆ ಕವಿಗೋಷ್ಠಿಯಲ್ಲಿ  ಅತಿಯಾದ ಕೈಗಾರೀಕರಣದ ವಿರುದ್ಧದ ಧ್ವನಿಗಳು ಕೇಳಿ ಬಂದಿತ್ತು.    ಹೀಗೆ ತುಳು ಸಮ್ಮೇಳನದ ಗೋಷ್ಠಿಗಳು ಒಂದಕ್ಕೊಂದು ಪ್ರತಿಸ್ಫರ್ಧಿಯಂತಿತ್ತು. ಆದರೆ ಈ ಗೋಷ್ಠಿಗಳ ಬಗ್ಗೆ ಜನರ ಭಾಗವಹಿಸುವಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.

ಗಮನ ಸೆಳೆದ ಆರೋಗ್ಯ ಕೇಂದ್ರ

 ವಿಶ್ವ ತುಳು ಸಮ್ಮೇಳನದ ಪ್ರಯುಕ್ತ ಏರ್ಪಡಿಸಿರುವ  ಉಜಿರೆಯ  ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ಆವರಣದ  ಮೇಲ್ಭಾದಿಯಲ್ಲಿರುವ  ಆರೋಗ್ಯ ವ್ಯವಸ್ಥೆಯು ಅಚ್ಚುಕಟ್ಟಿನ ಮೂಲಕ ಗಮನ ಸೆಳೆಯುತ್ತಿದೆ.

15683_24.jpg

 ಎಸ್‌ಡಿ‌ಎಂ ಮೆಡಿಕಲ್‌ನ ನಿರ್ದೇಶಕ ಆಗಿರುವ  ಡಾ.ನಿರಂಜನ್ ಕುಮಾರ್‌ರವರ ನೇತೃತ್ವದಲ್ಲಿ  ನಡೆಯುತ್ತಿರುವ ಈ ಆರೋಗ್ಯ ಕೇಂದ್ರ ಜನರನ್ನು ಆಕರ್ಷಿಸಿದೆ. ಇವರೆಗೆ      ೬೮ ಕ್ಕಿಂತ ಹೆಚ್ಚಿನ ಜನರು ಈ ಕೇಂದ್ರವನ್ನು ಸಂಪರ್ಕಿಸಿದ್ದು,  ವಿವಿಧ ಆನಾರೋಗ್ಯಗಳಿಗೆ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಲ್ಲಿ ಸಾಯಂಕಾಲ ೫ ಗಂಟೆಯಿಂದ ಬೆಳಿಗ್ಗೆಯವರೆಗೆ  ಚಿಕಿತ್ಸೆ ಕೊಡಲಾಗುತ್ತದೆ. ಉಳಿದ ಸಮಯಗಳಲ್ಲಿ  ಎಸ್‌ಡಿ‌ಎಂನ ಅಂಗಸಂಸ್ಥೆಗಳು  ಹಾಗೂ ಇತರ ಸಂಸ್ಥೆಗಳು  ಕಾರ್ಯನಿರತವಾಗಿವೆ ಎಂದು ಟೀಮ್  ಲೀಡರ್ ಆದಂತಹ ಡಾ.ಮದನ್ ಕುಲಕರ್ಣಿಯವರು ತಿಳಿಸುತ್ತಾರೆ.

 

 ಇಲ್ಲಿ ಸುಮಾರು ಏಳೆಂಟು   ವೈದ್ಯರಿದ್ದು,   ನಾಲ್ಕು  ಸಿಸ್ಟರ್‌ಗಳಿದ್ದಾರೆ.  ಜೌಷಧಿಗಳು ಉಚಿತ.   ಐದು ಅಂಬ್ಯುಲೆನ್ಸ್‌ಗಳು  ಕಾರ್ಯನಿರತವಾಗಿವೆ. ಇದೊಂದು ಉತ್ತಮ ಅವಕಾಶವಾಗಿದೆ. ಹಾಗೆಯೇ  ಅಧಿಕ  ಸಂಖ್ಯೆಯ  ಜನರನ್ನು ಕಂಡು ಸಂತೋಷವಾಗುತ್ತಿದೆ. ಯಾವ ಹೊತ್ತಿಗೆ  ಬಂದರೂ ಕೂಡಾ ಉಚಿತ ಚಿಕಿತ್ಸೆ ನೀಡುತ್ತೇವೆ  ಎಂದು ಹೇಳುತ್ತಾರೆ  ಮದನ್‌ರವರು. 
 ಸಮ್ಮೇಳನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಇವರು ಸಮ್ಮೇಳನವು ಉತ್ಕಮ ರೀತಿಯಲ್ಲಿದೆ. ಜೀವನದಲ್ಲಿ ಇಲ್ಲಿಯವರೆಗೂ ಯಾವತ್ತೂ ಇಂತಹ ಕಾರ್ಯಕ್ರಮವನ್ನಾಗಲೀ, ಇಷ್ಟು ಸಂಖ್ಯೆಯ ಜನರನ್ನಾಗಲೀ ಹಿಂದೆಂದೂ ನೋಡಿಲ್ಲ. ಮುಂದೆಂದಬ  ನೋಡಲು ಸಾಧ್ಯವಿಲ್ಲವೆಂದು ಖುಷಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

{ -ಪುಷ್ಪಾ ಬಿ.ಎಂ.}

 ವಿವಿಧ ಕೇತ್ರಗಳಲ್ಲಿ ಕೈಯಾಡಿಸುತ್ತಿರುವ ತುಳುವರು

15694_1.jpg

ತುಳುನಾಡ ಸಿರಿದೊಂಪ ಉಜಿರೆ:  ತುಳುನಾಡಿನ ಅಭಿವೃದ್ಧಿಗೆ ಮಂಗಳೂರಿಗೆ ಅಂತಾರಾಷ್ಟ್ರೀಯ ಸ್ಥಾನಮಾನ ದೊರಕಬೇಕಾದರೆ ವಿಶೇಷ ಆರ್ಥಿಕ ವಲಯ ಅಗತ್ಯವಾಗಿದೆ ಎಂದು ಮಂಗಳೂರಿನ ಎಂ.ಗಿರಿಧರ ಪ್ರಭು ಹೇಳಿದರು.

 ವಿಶ್ವ ತುಳು ಸಮ್ಮೇಳನದ ವೇದಿಕೆಯಲ್ಲಿ  ತುಳುನಾಡಿನ ಅಭಿವೃದ್ಧಿಯ ಅವಕಾಶಗಳು ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸುತ್ತಾ ಅವರು   ಜಿಲ್ಲೆಯಲ್ಲಿ ಆಧುನಿಕತೆಯ ಚಿಂತನೆ ನಡೆಯ ಬೇಕಾದ ಅಗತ್ಯವಿದೆ ಎಂದು  ಹೇಳಿದರು. ಉಳಿದಂತೆ ತುಳುನಾಡಿನ ಸಾಮಾನ್ಯ ಜನರ ಅಭಿವೃದ್ಧಿಯ ಬಗೆಗಿನ ಕನಿಷ್ಠ ಚಿಂತನೆಗಳೂ ಅವರಿಂದ ಬರಲೇ ಇಲ್ಲ. ತುಳುನಾಡಿನ  ಬಗ್ಗೆ ಅತ್ಯಂತ ಗಮನಾರ್ಹ ಚರ್ಚೆ ನಡೆಯಬೇಕಾದ ಗೋಷ್ಠಿ ಅತ್ಯಂತ ನೀರಸವಾಗಿತ್ತು.

15694_3.jpg

 ವಿದೇಶದಲ್ಲಿ ಹಾಗೂ ತುಳುನಾಡಿನಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ ಮುಂಬಯಿಯ ಸ್ವಾತಿಕ್.ಆರ್.ಶೆಟ್ಟಿರವರು ಮಾತನಾಡಿದರು. ಗೋಷ್ಠಿಯಲ್ಲಿ ಯಾವುದೇ ಮಹತ್ವದ ವಿಚಾರಗಳು ಹೊರಬರಲೇ ಇಲ್ಲ ಎಂಬುದು ವಿಶೇಷ. ತುಳುನಾಡಿನ ಮುಂದಿರುವ ಸವಾಲುಗಳ  ಬಗ್ಗೆ ಪ್ರಬಂಧ ಮಂಡಿಸಿದ  ಡಾ.ಶಶಿಕಲಾ  ಶೆಟ್ಟಿರವರು ತುಳುನಾಡಿನಲ್ಲಿ ಆರ್ಥಿಕ ಪ್ರಗತಿಯಾಗಿದೆ. ಆದರೆ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ.  ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ  ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತುಳುವರು ಇಂದು ವಿವಿಧ  ಕ್ಷೇತ್ರಗಳಲ್ಲಿ  ಉತ್ತಮವಾದ ಸೇವೆಯನ್ನು ನೀಡುತ್ತಿದ್ದಾರೆ. ಆದರೆ ತುಳು ಭಾಷೆಯಲ್ಲಿ  ಇತರ ಭಾಷೆಗಳ ಶಬ್ದ ಪ್ರಯೋಗಗಳು ಹೆಚ್ಚಾಗುತ್ತಿದೆ.  ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.ಯದುಪತಿ ಗೌಡ ಕಾರ್ಯಕ್ರಮ ನಿರೂಪಿಸಿದರು.

ಮಾತೃ ಭಾಷೆಯನ್ನು ಮರೆಯದಿರಿ:  ಮಾರ್ಗರೆಟ್ ಆಳ್ವ 

15694_2.jpg

ಬೆಳ್ತಂಗಡಿ,(ತುಳುನಾಡ ಸಿರಿದೊಂಪ ಉಜಿರೆ), : ಇಂದು ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆ ನಮ್ಮ ಚಿಂತನೆ ಶೈಲಿಯನ್ನೇ ಬದಲಿಸುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಾತೃ ಭಾಷೆಯನ್ನು ಎಲ್ಲಿಯೂ ಮರೆಯದೆ ಎಂದೆಂದಿಗೂ ಉಳಿಸಿ ಕೊಳ್ಳುವ ಪ್ರಯತ್ನ್ನ ನqಸಿ ಎಂದು  ಉತ್ತರಾಂಚಲ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಕರೆ ನೀಡಿದರು.

15694_12.jpg

ಉಜಿರೆಯ ವಿಶ್ವ ತುಳು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

15683_31.jpg

ಯಾವುದೇ ಒಂದು ಭಾಷೆ ಸಂಸ್ಕೃತಿ ಉಳಿಯಬೇಕಾದರೆ, ಬೆಳೆಯಬೇಕಾದರೆ ಅದು ಮನೆಯ ಭಾಷೆಯಾಗಿ ರೂಪು ಗೊಳ್ಳಬೇಕಾದ ಅಗತ್ಯವಿದೆ ಎಂದು ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆಯಾ ಗುವ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡು ವುದಾಗಿ ಭರವಸೆ ನೀಡಿದ ಅವರು, ತುಳುನಾಡಿನ ಗ್ರಾಮೀಣ ಮಹಿಳೆಯರು ತಮ್ಮ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡು ಹೋಗುವ ಶಕ್ತಿಯಿರುವವರು. ಅವರು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ತೋರಿಸಲು ಸಾಧ್ಯವಾಗಿದೆ ಎಂದರು.

15683_23.jpg

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ರೆಂದ್ರ ಹೆಗ್ಗಡೆ ಮಾತನಾಡಿ, ಇದು ತುಳುವರ ವಿಶ್ವರೂಪ ದರ್ಶನವಾಗಿದೆ. ಈ ಸಮ್ಮೇಳನ ಒಂದು ಬೀಜವಾಗಿದ್ದು, ಅದಕ್ಕೆ ಗೊಬ್ಬರ ನೀರು ಹಾಕಿ ಅದನ್ನು ಬೆಳೆಸುವ ಕಾರ್ಯವನ್ನು ತುಳುನಾಡಿನ ಸಮಸ್ತ ಜನತೆ  ಸೇರಿ ಮಾಡಬೇಕಾಗಿದೆ. ಅದು ಸಾಧ್ಯವಾದರೆ ವಿಶ್ವ ತುಳು ಸಮ್ಮೇಳನ ಯಶಸ್ವಿಯಾದಂತಾಗುತ್ತದೆ ಎಂದರು.

ತುಳು ಭಾಷೆಯ ಹೆಸರಿನಲ್ಲಿ ತುಳು ನಾಡಿನ ಸಮಸ್ತ ಜನರು ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡಿ ದ್ದಾರೆ. ಎಲ್ಲರ ಸಹಕಾರದಿಂದ ಮಾತ್ರ ಇಂತಹ ಕಾರ್ಯಗಳು ನಡೆಯಲು ಸಾಧ್ಯವಿದೆ. ಸಮ್ಮೇಳನ ಕೆಲವೊಂದು ಮಹತ್ವದ ನಿರ್ಣಯಗಳನ್ನು ತೆಗೆದು ಕೊಂಡಿದೆ. ಈ ನಿರ್ಣಯಗಳು ಇಲ್ಲಿಗೆ ನಿಲ್ಲುವುದಿಲ್ಲ ಎಂದ ಅವರು,  ಸಮಿತಿಯೊಂದನ್ನು ರಚಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಬೆನ್ನು ಹಿಡಿದು ನಿರ್ಣಯಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

15683_27.jpg

ಸುಮಾರು ಎಂಟು ಲಕ್ಷ ಮಂದಿ ಜಾತಿ-ಧರ್ಮಗಳ ಭೇದಗಳನ್ನು ಮರೆತು ತುಳುವಿನ ಹೆಸರಿನಲ್ಲಿ ಒಂದುಗೂಡಿದ್ದಾರೆ. ಇದು ನಮ್ಮ ಸೌಹಾರ್ದವನ್ನು ಬೆಳೆಸಲು ಅತ್ಯಂತ ಸಹಕಾರಿಯಾಗಿದ್ದು, ಮಂಗಳೂರಿನಲ್ಲಿ ನಡೆಯುವ ಸಣ್ಣ ಘರ್ಷಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸುವವರು ಇದನ್ನು ಗಮನಿಸಬೇಕಾಗಿದೆ ಎಂದು ಸಲಹೆ ನೀಡಿದರು,

15683_28.jpg

ಡಿಸೆಂಬರ್ ತಿಂಗಳನ್ನು ತುಳು ತಿಂಗಳೆಂದು ತುಳು ಕ್ರೀಡೆ, ತುಳುವಿಗೆ ಸಂಬಂಧಿಸಿದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಮೂಲಕ ತುಳು ಸಮ್ಮೇಳನದ ನೆನಪನ್ನು ಚಿರಸ್ಥಾಯಿ ಯಾಗಿ ಉಳಿಸಲು ಪ್ರಯತ್ನಿಸುವಂತೆ ಅವರು ಸೂಚಿಸಿದರು.

15683_52.jpg

ಮುಖ್ಯ ಅತಿಥಿಯಾಗಿ ಆಗಮಿಸಿದ ಅನಿವಾಸಿ ಉದ್ಯಮಿ  ಬಿ.ಆರ್.ಶೆಟ್ಟಿ  ಶುಭ ಹಾರೈಸಿದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

15683_53.jpg

ವೇದಿಕೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರು, ಸ್ವಾಗತ ಸಮತಿಯ ಉಪಾಧ್ಯಕ್ಷರು ಉಪಸ್ಥಿತರಿದ್ದರು.


Share: