ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಿಜೆಪಿಯ ನೂಪುರ್ ಶರ್ಮಾಗೆ ಮಹಾರಾಷ್ಣ ಪೊಲೀಸ್ ಸಮನ್ಸ್

ಬಿಜೆಪಿಯ ನೂಪುರ್ ಶರ್ಮಾಗೆ ಮಹಾರಾಷ್ಣ ಪೊಲೀಸ್ ಸಮನ್ಸ್

Thu, 09 Jun 2022 16:12:19  Office Staff   Vb

ಹೊಸದಿಲ್ಲಿ: ಪ್ರವಾದಿ ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿ ಹೇಳಿಕೆ ದಾಖಲಿಸಲು ಜೂನ್ 22ರಂದು ತಮ್ಮ ಮುಂದೆ ಹಾಜರಾಗುವಂತೆ ಬಿಜೆಪಿಯ ಅಮಾನತುಗೊಂಡ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮಹಾರಾಷ್ಟ್ರ ಪೊಲೀಸರು ಮಂಗಳವಾರ ಸೂಚಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಕುರಿತ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸರು ಶರ್ಮಾ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ, ಜೂನ್ 22ರಂದು ತನಿಖಾಧಿಕಾರಿಯ ಮುಂದೆ ಹೇಳಿಕೆ ದಾಖಲಿಸಲು ಶರ್ಮಾ ಅವರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 10 ದಿನಗಳ ಹಿಂದೆ ಟಿ.ವಿ.ಯೊಂದರಲ್ಲಿ ನಡೆದ ಚರ್ಚೆಯ ಸಂದರ್ಭ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದು ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡುವ ಟ್ವಿಟರ್ ಟ್ರೆಂಡ್ ಅನ್ನು ಹುಟ್ಟು ಹಾಕಿತ್ತು.

ಶರ್ಮಾ ಅವರ ಹೇಳಿಕೆ ಖಂಡಿಸಿದ ಗಲ್ಫ್ ರಾಷ್ಟ್ರಗಳ ವಿದೇಶಾಂಗ ಸಚಿವಾಲಯಗಳು ತಮ್ಮ ದೇಶದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಿವೆ. ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಸರಕಾರ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ. ಶರ್ಮಾ ಅವರ ಈ ಹೇಳಿಕೆ ವಿರುದ್ಧ ಕಾನುರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಘರ್ಷಣೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ 1,000 ಅಪರಿಚಿತರ ವಿರುದ್ಧ ಪೊಲೀಸರು ಎಫ್‌ ಐಆರ್ ದಾಖಲಿಸಿದ್ದಾರೆ. ಹೆಸರು ಹೇಳಲಾದ ಎಲ್ಲ 55 ಆರೋಪಿಗಳು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು.

ಈ ನಡುವೆ, ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ ಹೇಳಿಕೆ ಕುರಿತಂತೆ ತನಗೆ ಜೀವ ಬೆದರಿಕೆ ಇದೆ ಎಂದು ಶರ್ಮಾ ಅವರು ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ ದಿಲ್ಲಿ ಪೊಲೀಸರು ಶರ್ಮಾ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.


Share: