ಭಟ್ಕಳ:ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಭಟ್ಕಳ ಬಂದರಿನಲ್ಲಿ ಲಂಗರು ಹಾಕಿದ ಫಿಶಿಂಗ್ ಬೋಟ್ ಒಂದು ಮುಳುಗಿ ನಾಲ್ಕು ಬೋಟ್ಗಳಿಗೆ ಹಾನಿ ಸಂಭವಿಸಿದ್ದು ಮೀನುಗಾರರು ಲಕ್ಷಾಂತರ ರೂ ನಷ್ಟ ಅನುಭವಿಸಿದ್ದಾರೆ. ಇನ್ನುಳಿದ ನೂರಾರು ಮೀನುಗಾರರು ತಮ್ಮ ಬೋಟ್ಗಳ ಸುರಕ್ಷತೆಯ ಕುರಿತು ಆತಂಕಗೊಡಿದ್ದಾರೆ.
ತಾಲೂಕಿನ ಬಂದರಿನಲ್ಲಿ ನಾಗಪ್ಪ ತಿಮ್ಮಪ್ಪ ಖಾರ್ವಿ ಎನ್ನುವವರಿಗೆ ಸೇರಿದ ದುರ್ಗಾಂಬಿಕಾ ಫಿಶಿಂಗ್ ಬೋಟ್ ದಡದಲ್ಲಿ ನಿಂತಲ್ಲಿಯೆ ನೀರಿನಲ್ಲಿ ಮುಳುಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಪ್ರೇಮಾ ರತ್ನಾಕರ ಖಾವಿ ಇವರ ಶ್ರೀ ನಿತ್ಯಾನಂದ ಬೋಟ್ ಕೂಡ ನೀರಿನಲ್ಲಿ ಮುಳಿಗಿದ್ದು, ಸ್ಥಳೀಯ ಮೀನುಗಾರರ ಅವಿರತ ಪರಿಶ್ರಮದಿಂದ ಅದನ್ನು ರಕ್ಷಿಸಲಾಗಿದೆ. ಮಹೇಶ ಖಾರ್ವಿ ಅವರ ಗಗನ ೨ ಎನ್ನುವ ಬೋಟಿಗೂ ಹಾನಿಯಾಗಿದ್ದು ಅವರಿಗೂ ನಷ್ಟ ಉಂಟಾಗಿದೆ. ನೀರಿನಲ್ಲಿ ಮುಳುಗುತ್ತಿರುವ ದುರ್ಗಾಂಬಿಕಾ ಬೋಟ್ ರಕ್ಷಣೆಗೆ ಧಾವಿಸಿದ ರಾಮಚಂದ್ರ ಖಾರ್ವಿ ಅವರ ಜೈನ್ ಜಟಗಾ ಫಿಸಿಂಗ್ ಬೋಟಿಗೂ ಹಾನಿಯಾಗಿದ್ದು ಅದರಲ್ಲೂ ನೀರು ನುಗ್ಗಿತ್ತು. ಬಳಿಕ ಮೀನುಗಾರರ ಹರಸಾಹಸ ಪಟ್ಟು ನೀರನ್ನು ಖಾಲಿ ಮಾಡುವಲ್ಲಿ ಯಶ ಕಂಡಿದ್ದಾರೆ.
ಬಂದರಿನಲ್ಲಿ ಲಂಗರು ಹಾಕಿದ ಬೋಟ್ಗಳು ನೀರಿನಲ್ಲಿ ಮುಳುಗುತ್ತಿರುವಂತೆ ನೂರಾರು ಮೀನುಗಾರರು ಸ್ಥಳಕ್ಕೆ ಜಮಾಯಿಸಿ ಬೋಟ್ ರಕ್ಷಿಸಲು ಹೋರಾಟ ಆರಂಭಿಸಿದ್ದಾರೆ. ಹಲವರು ರೋಪ್ ತಂದು ಬೋಟ್ ಎಳೆಯಲು ಹೆಣಗಾಡಿದರೆ ಇನ್ನು ಕೆಲವರು ಅಕ್ಕಪಕ್ಕದ ಬೋಟ್ಗಳಿಗೆ ಹಗ್ಗ ಕಟ್ಟಿ ಬೋಟ್ ನೀರಿನತ್ತ ವಾಲುವದನ್ನು ತಪ್ಪಿಸಲು ಪರಿಶ್ರಮ ಪಡುತ್ತಿದ್ದರು. ನಸುಕಿನ ಜಾವ ೫ ಗಂಟೆಯಿದ ಬೋಟ್ಗಳನ್ನು ರಕ್ಷಿಸಲು ಮೀನುಗಾರರು ಸತತ ಪ್ರಯತ್ನ ನಡೆಸಿದರು.
ಸುದ್ದಿಯನ್ನು ತಿಳಿದು ತಕ್ಷಣವೇ ಸ್ಥಳಕ್ಕೆ ತಹಸೀಲ್ದಾರ ಸುಮಂತ ಬಿ.ಇ ಬೇಟಿ ಹಾನಿಯಾಗಿದ ಬೋಟಿನ ಬಗ್ಗೆ
ಪರಿಶೀಲನೆ ನಡೆಸಿ ನಡೆಸಿದ್ದಾರೆ.
ಹೂಳು ತುಂಬಿದ ಬಂದರು ಮೀನುಗಾರರಿಗೆ ಆಯ್ತು ತೊಂದರೆ
ಬೋಟ್ಗಳಿಗೆ ಸುರಕ್ಷಿತ ತಾಣವಾಗಬೇಕಿದ್ದ ಬಂದರುಗಳಲ್ಲೆ ಲಂಗರು ಹಾಕಿದ ಬೋಟ್ಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ಇಂತಹ ಘಟನೆಗಳು ನಡೆದಿದೆ.
ಇಷ್ಟು ಬಾರಿ ಬೋಟ್ಗಳಿಗೆ ಬೋಟ್ ತಾಗಿ ಮೀನುಗಾರರು ಹಾನಿ ಅನುಭವಿಸುತ್ತಿದ್ದರು. ಆದರೆ ಈ ಬಾರಿ ಅದು ಬೋಟ್ ಮುಳುಗುವ ಹಂತಕ್ಕೆ ಹೋಗಿರುವದು ಬೋಟ್ ಮಾಲಿಕರ ಆತಂಕ ಹೆಚ್ಚಿಸಿದೆ. ೫ ಕೋಟಿ ವೆಚ್ಚದಲ್ಲಿ ಹೂಳು ತೆಗೆದರೆ ಇಂತಹ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ. ಆದರೆ ಪ್ರತಿ ಬಾರಿ ಇಲ್ಲಿ ಬರುವ ಜನಪ್ರತಿನಿಧಿಗಳು ಬರಿ ಆಶ್ವಾಸನೆ ನೀಡುತ್ತಾರೆ ಹೊರತು ಮೀನುಗಾರರ ಸಂಕಷ್ಟಕ್ಕೆ ಸ್ಪಂದನೆ ನೀಡುತ್ತಿಲ್ಲ. ಎಂದು ಮೀನುಗಾರರು ದೂರಿದ್ದಾರೆ. ಬೋಟ್ ಮುಳುಗಡೆಯಾದ ಮಾಲಿಕರಿಗೆ ಹಾನಿಯಾದ ಬೋಟ್ಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಮೀನುಗಾರರಿಗೂ ಭದ್ರತೆ ನೀಡಬೇಕು ಎನ್ನುವ ಆಗ್ರಹ ಬಲಗೊಂಡಿದೆ.
ಪ್ರತಿಬಾರಿಯೂ ಇಲ್ಲಿ ಬರುವ ಜನಪ್ರತಿನಿಧಿಗಳು ಬರಿಯ ಆಶ್ವಾಸನೆ ನೀಡುತ್ತಾರೆ. ಇಲ್ಲಿಯವರೆಗೂ ಇಲ್ಲಿನ ಹೂಳು ತುಂಬಿದನ್ನು ಸ್ವಚ್ಚ ಮಾಡಿಲ್ಲ. ಪ್ರತಿ ಅಮವಾಸ್ಯೆ, ಹುಣ್ಣಿಮೆಯಂದು ನೀರಿನ ಇಳಿತದಿಂದ ಬೋಟ್ ತಳಕ್ಕೆ ತಗಲಿ ಹಾನಿ ಅನುಭವಿಸುತ್ತಿದೆ. ಈ ಬಾರಿ ಅದು ವಿಕೋಪಕ್ಕೆ ತೆರಳಿ ಬೋಟ್ ಮುಳುಗಡೆಯಾಗುವ ಹಂತಕ್ಕೆ ತಲುಪಿರುವದು ಮೀನುಗಾರರ ಆತಂಕ ಹೆಚ್ಚಿಸಿದೆ. ಕೂಡಲೆ ನಷ್ಟ ಅನುಭವಿಸಿದ ಮೀನುಗಾರರಿಗೆ ಪರಿಹಾರ ಒದಗಿಸಿ ಇಲ್ಲಿನ ಗಂಭೀರತೆಯನ್ನು ಅರಿತು ಮೀನುಗಾರರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕಿದೆ. ಎಂದು ಫಿಶಿಂಗ್ ಬೋಟ್ ಯೂನಿಯನ್ ಅಧ್ಯಕ್ಷ ಮಹೇಶ ಖಾರ್ವಿ ಹೇಳಿದರು.