ಬಳ್ಳಾರಿ : ರಾಷ್ಟ್ರೀಯ ಆರೋಗ್ಯ ಅಭಿಯಾನದ ಆಯುಷ್ಮಾನ್ ಭಾರತ್ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ನೀಡುವ ಯೋಜನೆಯಡಿಯಲ್ಲಿ 2021-22 ಸಾಲಿಗೆ ಎರಡು ತ್ರೈಮಾಸಿಕಗಳಲ್ಲಿ ಆರೋಗ್ಯ ಮತ್ತು ಕ್ಷೇಮಕೇಂದ್ರಗಳ ಮೂಲಕ ಕಾರ್ಯಕ್ರಮ ಅನುಷ್ಟಾನಗೊಳಿಸುವಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯು ರಾಷ್ಟ್ರಕ್ಕೆ ಪ್ರಥಮ ಸ್ಧಾನದಲ್ಲಿದೆ.
ಅವಿಭಜಿತ ಬಳ್ಳಾರಿ ಜಿಲ್ಲೆಯು ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿರುವಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕ್ಷೇಮಗಳ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ತುಂಬ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅವಿಭಜಿತ ಬಳ್ಳಾರಿ ಜಿಲ್ಲೆಗೆ 248 ಆರೋಗ್ಯ ಮತ್ತು ಕ್ಷೇಮಕೇಂದ್ರಗಳು ಮಂಜೂರಾಗಿದ್ದು, ಲಭ್ಯವಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಿ 248 ಆರೋಗ್ಯ ಕ್ಷೇಮ ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ತದನಂತರ ಕಾರ್ಯಕ್ರಮದಡಿಯಲ್ಲಿ ಪ್ರಮುಖವಾಗಿ 12 (ಗರ್ಭಿಣಿ ಮತ್ತು ಮಗುವಿನ ಜನನದ ಸಮಯ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ, ಬಾಲ್ಯ ಮತ್ತು ಹದಿ ಹರೆಯದವರ ಸಮಗ್ರ ಆರೋಗ್ಯ, ಕುಟುಂಬ ಕಲ್ಯಾಣ, ಗರ್ಭನಿರೋದಕ, ಸಂತಾನೋತ್ಪತ್ತಿ ಆರೋಗ್ಯ, ರಾಷ್ಟ್ರೀಯ ಆರೋಗ್ಯ ಯೋಜನೆ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಅಸಾಂಕ್ರಾಮಿಕ ರೋಗಗಳು-ಮದುಮೇಹ, ಅಧಿಕ ರಕ್ತದೊತ್ತಡ, ಧೀರ್ಘಾವಧಿ ಶ್ವಾಸಕೋಶ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್ ಬಾಯಿ-ಸ್ತನ-ಗರ್ಭಕಂಠ ತಪಾಸಣೆ, ನೇತ್ರ, ಕಿವಿ, ಮೂಗು, ಗಂಟಲು ವೃದ್ಧಾಪ್ಯ ಹಾರೈಕೆ, ಮಾನಸಿಕ ಆರೋಗ್ಯ, ದಂತ ಆರೋಗ್ಯ, ಅಪಘಾತಗಳು ಮತ್ತು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ) ಸೇವೆಗಳನ್ನು ನಿರಂತರವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆಯ 30,96,512 ಜನಸಂಖ್ಯೆಯಲ್ಲಿ 30 ವರ್ಷ ಮೇಲ್ಪಟ್ಟ 12,92,059 ಸಾರ್ವಜನಿಕರಲ್ಲಿ ಇಲ್ಲಿಯವರೆಗೆ 25,19,675 ಸಾರ್ವಜನಿಕರ ಮಾಹಿತಿಯನ್ನು ಎನ್.ಸಿ.ಡಿ ಪೋರ್ಟಲ್‍ನಲ್ಲಿ ನೋಂದಣಿ ಮಾಡಿದ್ದು, ಒಟ್ಟಾರೆಯಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ 11,37,600 ಜನರಿಗೆ ಹೊರ ರೋಗಿಯ ಸೇವೆಗಳನ್ನು ಒದಗಿಸಲು ಸಾಧ್ಯವಾಗಿರುತ್ತದೆ.
ಮಾಸಿಕ ಸೇವೆ ನೀಡಿದ ವರದಿ, ದಿನ ನಿತ್ಯದ ಸೇವೆ ವರದಿ, ಟೆಲಿ ಕನ್ಸಲ್‍ಟೆನ್ಸ್ ಸೇವೆಗಳ ಕುರಿತು ಪ್ರತಿ ದಿನ ಜಿಲ್ಲಾ ಸರ್ವೇಕ್ಷಣಾ ಘಟಕ ಅಡಿಯಲ್ಲಿ ಬರುವ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಾದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಅಯೋಡಿನ್ ಕಾರ್ಯಕ್ರಮ, ರಾಷ್ಟ್ರೀಯ ಮಧುಮೇಹ, ಕ್ಯಾನ್ಸರ್ ಹೃದಯ ಸಂಬಂಧಿತ ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ, ವೃದ್ದರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ, ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ -ಸಮಗ್ರ ಆರೋಗ್ಯ ರಕ್ಷಣೆ ಐ.ಡಿ.ಎಸ್.ಪಿ ಮತ್ತು ಜಿಲ್ಲಾ ಕಾಲರ ನಿಯಂತ್ರಣ ಕಾರ್ಯಕ್ರಮಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸತತ ಅನುಸರಣೆಯ ಪ್ರತಿ ಫಲವಾಗಿ ಪ್ರಥಮ ಸ್ಧಾನಗಳಿಸಿದ್ದು ಇವರ ಸೇವೆ ಅಮೋಘವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಈ ಕಾರ್ಯಕ್ರಮದ ಉಸ್ತುವಾರಿ ಹಾಗೂ ಮೇಲ್ವಿಚಾರಣೆ ಮಾಡುವ ಜಿಲ್ಲಾ ಆರೋಗ್ಯ ಕೇಂದ್ರ ಸಂಯೋಜಕರ ಹುದ್ದೆಯು ಖಾಲಿಯಿದ್ದರೂ ಸಹ ಎನ್.ಸಿ.ಡಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರವರ ಪ್ರಭಾರದಲ್ಲಿ ಹಾಗೂ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಇವರ ಪಾತ್ರ ಮಹತ್ತರವಾಗಿದೆ ಈ ಯಶಸ್ಸು ಗಳಿಸುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾರ್ಗದರ್ಶನ ಮೂಲಕ ಹಾಗೂ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಅಗತ್ಯ ಸೂಚನೆ, ಸಲಹೆ ಮತ್ತು ಮಾರ್ಗದರ್ಶನ, ಎಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳ ಸಹಕಾರ ತುಂಬ ಮಹತ್ತರವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.