ಬೆಂಗಳೂರು ಗ್ರಾಮಾಂತರ ಜಿಲ್ಲೆ : ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕೃತಕ ಬಣ್ಣಗಳಿಂದ ತಯಾರಿಸಿರುವ ಗೌರಿ ಹಾಗೂ ಗಣೇಶಮೂರ್ತಿಗಳನ್ನು ಬಳಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವಿಜಯ ರವಿಕುಮಾರ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ "ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸರ್ವ ಧರ್ಮ ಶಾಂತಿ ಸಭೆ"ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೀರು ಕಲುಷಿತವಾಗಿ, ಜಲಚರಗಳಿಗೆ ಹಾನಿಯುಂಟಾಗುವುದರಿಂದ ಹಬ್ಬದ ಆಚರಣೆಗೆ ಬಣ್ಣರಹಿತ ಮಣ್ಣಿನ ಗಣಪನ ಆರಾಧನೆ ಮಾಡುವ ಮೂಲಕ ಪರಿಸರಸ್ನೇಹಿ ಹಬ್ಬ ಆಚರಿಸಬೇಕು ಹಾಗೂ ಎಲ್ಲಾ ಕರೆಗಳಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸೂಚಿಸಲಾಗಿರುವ ನಿರ್ಧಿಷ್ಟ ಕೆರೆಗಳಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಗಣೇಶೋತ್ಸವ ಆಚರಿಸುವ ಸ್ಥಳೀಯರು ಆಯಾ ಗ್ರಾಮ ಪಂಚಾಯಿತಿಯ ಪಿಡಿಓಗಳಿಂದ ಅನುಮತಿ ಪಡೆದು ಗಣೇಶ ಪ್ರತಿಷ್ಠಾಪಿಸಬೇಕೆಂದು ಹೇಳಿದರಲ್ಲದೆ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು, ಗಣೇಶೋತ್ಸವದ ನಿಯಮಗಳನ್ನು ಕಟ್ಟುನಿಟ್ಟಾಗಿ ಸಾರ್ವಜನಿಕರು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪರಿಸರ ಮಾಲಿನ್ಯವನ್ನು ತಡೆಗಟ್ಟಲು ತಪ್ಪಿಸಲು ಜೇಡಿ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಬಾವಿ, ಕೆರೆ ಹಾಗೂ ಹೊಳೆಗಳಲ್ಲಿ ಗಣಪತಿ ವಿಗ್ರಹಗಳನ್ನುವಿಸರ್ಜನೆ ಮಾಡುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆಗಳು ಹಾಳಾಗುತ್ತದೆ. ಆದ್ದರಿಂದ ಬಕೆಟ್ನಲ್ಲಿ ವಿಸರ್ಜಿಸಬೇಕು ಅಥವಾ ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆದು ನಂತರ ಮೂರ್ತಿಯನ್ನು ವಿಸರ್ಜನೆ ಮಾಡಬೇಕೆಂದು ತಿಳಿಸಿದರು.
ಆಗಸ್ಟ್ 30 ರಿಂದ ಗೌರಿ ಗಣೇಶ ಹಬ್ಬವನ್ನು ರಾಜ್ಯದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಉತ್ಸವವನ್ನು ಆಯೋಜಿಸುವ ಆಯೋಜಕರಿಗೆ ಪರವಾನಿಗೆ ನೀಡುವುದು ವಿವಿಧ ಇಲಾಖೆಗಳ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಈ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಪಿಡಿಓಗಳು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ಪರವಾನಿಗೆಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಗಣೇಶೋತ್ಸವ ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ಮೂರು ದಿನಗಳೊಳಗಾಗಿ ನಿಯಮಾನುಸಾರ ಪರವಾನಿಗೆಯನ್ನು ನೀಡಲು ಕ್ರಮ ವಹಿಸಬೇಕು ಎಂದರು.
ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಆಯೋಜಕರಿಂದ ಖಾತರಿಪಡಿಸಿಕೊಳ್ಳುವುದು, ಅಗತ್ಯವಿರುವ ಕಡೆ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಬೇಕು ಎಂದರು.
ಅವಘಡ ಉಂಟಾಗದಂತೆ ತಡೆಯಲು ವಿಶೇಷವಾಗಿ ಹೈಟೆನ್ಸನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂಗಣೇಶ ಮೂರ್ತಿಯನ್ನು ಸ್ಥಾಪಿಸದಂತೆ ಅನುಮತಿ ನಿರ್ಬಂಧಿಸಬೇಕು. ಉತ್ಸವಕ್ಕೆ ಮುಂಚಿತವಾಗಿ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶಾಲಿನಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ತಹಶಿಲ್ದಾರ್ಗಳು ಉಪಸ್ಥಿತರಿದ್ದರು.