ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಡುಬಿದ್ರಿ:ನಾಗಾರ್ಜುನ ಬಳಿ ಕಲ್ಲಿದ್ದಲು ಲಾರಿಗೆ ತಡೆ.

ಪಡುಬಿದ್ರಿ:ನಾಗಾರ್ಜುನ ಬಳಿ ಕಲ್ಲಿದ್ದಲು ಲಾರಿಗೆ ತಡೆ.

Thu, 24 Dec 2009 17:51:00  Office Staff   S.O. News Service
ಪಡುಬಿದ್ರಿ, ಡಿಸೆಂಬರ್ 23: ಉಡುಪಿ ಪವರ್ ಕಾರ್ಪ್‌ರೇಶನ್ ಲಿಮಿಟೆಡ್ (ನಾಗಾರ್ಜುನ) ಕಂಪನಿಗಾಗಿ ಕಾನೂನು ಬಾಹಿರವಾಗಿ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ಸ್ಥಳೀಯರು ಅದರಲ್ಲಿದ್ದ ಕಲ್ಲಿದ್ದಲನ್ನು ನಂದಿಕೂರಿನ ರೈಲ್ವೇ ಟ್ರಾಕ್ ಬಳಿ ಖಾಲಿ ಮಾಡಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಕಲ್ಲಿದ್ದಲು ಆಧಾರಿತ ನಾಗಾರ್ಜುನ (ಯುಪಿಸಿ‌ಎಲ್-ಲ್ಯಾಂಕೋ) ಉಷ್ಣವಿದ್ಯುತ್ ಸ್ಥಾವರ ಯೋಜನೆಗಾಗಿ ಹೊರರಾಷ್ಟ್ರದಿಂದ ಆಮದು ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ಕಲ್ಲಿದ್ದಲನ್ನು ಕೇರಳ ಮೂಲದ ಹೆರಿಸನ್ ಮಳಯಾಳಂ ಲಿಮಿಟೆಡ್ ಸಂಸ್ಥೆಯು ಶ್ಯಾಮ್ ಟ್ರಾನ್ಸ್‌ಪೋರ್ಟ್‌ನ ಟಿಪ್ಪರ್‌ಗಳಲ್ಲಿ ನಾಲ್ಕು ದಿನಗಳಿಂದ ಯೋಜನಾ ಪ್ರದೇಶಕ್ಕೆ ಸಾಗಿಸುತ್ತಿತ್ತು. 
ನಾಗಾರ್ಜುನ ಕಂಪೆನಿಗೆ ಲಾರಿಗಳಲ್ಲಿ ಕಲ್ಲಿದ್ದಲು ಸಾಗಾಟಕ್ಕೆ ಅವಕಾಶ ಇಲ್ಲ ಎಂಬ ಆದೇಶ ಇದೆ. ಕಂಪೆನಿಗೆ ಕಲ್ಲಿದ್ದಲನ್ನು ವ್ಯಾಗನಾರ್ ಮೂಲಕ ಅಥವಾ ಗೂಡ್ಸ್ ರೈಲ್ವೇ ಮೂಲಕ ಸಾಗಿಸುವ ಅವಕಾಶ ಇದೆ. ಆದರೆ ಇದರ ಕಾಮಗಾರಿ ಪೂರ್ಣಗೊಳ್ಳದ ಕಾರಣ ಟಿಪ್ಪರ್‌ಗಳಲ್ಲಿ ಕಲ್ಲಿದ್ದಲನ್ನು ಸಾಗಿಸುತ್ತಿರುವುದರಿಂದ ಸಾರ್ವಜನಿಕರು, ಮಕ್ಕಳ ಮೇಲೆ, ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಇವುಗಳ ಸಾಗಾಟವನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ನಾಗಾರ್ಜುನ ವಿರೋಧಿ ಹೋರಾಟ ಸಮಿತಿಯ ಸದಸ್ಯರೊಬ್ಬರಾದ ನಾಗೇಶ್ ರಾವ್ ಪಡುಬಿದ್ರಿ ಪೋಲಿಸ್ ಠಾಣೆಗೆ ದೂರಿತ್ತಿದ್ದರು. ಅಂತೆಯೇ ಉಡುಪಿ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೂ ಈಬಗ್ಗೆ ಮಾಹಿತಿ ನೀಡಿ, ಅಕ್ರಮವಾಗಿ ಕಲ್ಲಿದ್ದಲು ಸಾಗಾಟ ಮಾಡುವುದನ್ನು ತಡೆಯುವಂತೆ ಆಗ್ರಹಿಸಿದ್ದರು. ಈಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಾಗಾರ್ಜುನ ವಿರೋಧಿ ಹೋರಾಟ ಸಮಿತಿ ತಡೆಯುವುದಾಗಿಯೂ ಹೇಳಿದ್ದರು ಎನ್ನಲಾಗಿದೆ.

ಗುರುವಾರ ಬೆಳಿಗ್ಗೆ ಒಂದರ ಹಿಂದೆ ಕಲ್ಲಿದ್ದಲು ತುಂಬಿದ ಲಾರಿಗಳು ನಂದಿಕೂರು ರಸ್ತೆಯಲ್ಲಿ ಸಂಚಾರ ಪ್ರಾರಂಭಿಸಿದಾಗ ನಾಗಾರ್ಜುನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಐದು ಲಾರಿಗಳನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಕಲ್ಲಿದ್ದಲನ್ನು ನಂದಿಕೂರಿನಲ್ಲಿ ಖಾಲಿ ಮಾಡಿಸಿದ್ದಾರೆ. 

ಇದೇ ವೇಳೆ ಹೆರಿಸನ್ ಮಳಿಯಾಳಿ ಲಿಮಿಟೆಡ್ ಸಂಸ್ಥೆಯ ಅಧಿಕಾರಿ ಸುಧೀರ್ ಸ್ಥಳಕ್ಕೆ ಆಗಮಿಸಿದ್ದು, ಅವರಿಗೂ ಸಮಿತಿ ಸದಸ್ಯರಿಗೂ ಕೆಲಕಾಲ ಮಾತಿನ ಚಕಮಕಿ ನಡೆಯಿತು. 
ತಡವಾಗಿ ಬಂದ ಪೋಲೀಸರು: ಅಕ್ರಮವಾಗಿ ಲಾರಿಗಳ ಮೂಲಕ ಕಲ್ಲಿದ್ದಲು ಸಾಗಾಟ ಮಾಡುವುದನ್ನು ತಡೆಯುವುದಾಗಿ ನಾಗಾರ್ಜುನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಪಡುಬಿದ್ರಿ ಪೋಲೀಸರಿಗೆ ತಿಳಿಸಲಾಗಿದ್ದರೂ, ಪೋಲೀಸರು 11 ಗಂಟೆಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಆಗಲೇ ಪ್ರತಿಭಟನಾಕಾರರು ಲಾರಿಯಲ್ಲಿದ್ದ ಕಲ್ಲಿದ್ದಲನ್ನು ರಸ್ತೆಗೆ ಸುರಿಸಿಯಾಗಿತ್ತು. ಆನಂತರ ಖಾಲಿ ಲಾರಿಗಳನ್ನು ಪಡುಬಿದ್ರಿ ಠಾಣೆಗೆ ತರುವಂತೆ ಆದೇಶ ನೀಡಿದರು.
 
ಪ್ರತಿಭಟನೆಯಲ್ಲಿ ಉಡುಪಿ ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ಪಡುಬಿದ್ರಿ ಬಜರಂಗ ದಳದ ಸಂಚಾಲಕ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಗ್ರಾ.ಪಂ. ಮಾಜಿ ಅದ್ಯಕ್ಷ ಸುಧಾಕರ ಕರ್ಕೇರ, ಜಯಂತ್ ಭಟ್ ಮತ್ತಿತರರು ಭಾಗವಹಿಸಿದ್ದರು.

ಚಿತ್ರ, ವರದಿ: ಹಮೀದ್ ಪಡುಬಿದ್ರಿ


Share: