ಬೆಂಗಳೂರು: ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡಿ, ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ, ಎಲ್ಲರೂ ತಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಶನಿವಾರ ಸದಾಶಿವನಗರದ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹಂತಕ್ಕೆ(ಲೆವೆಲ್) ಮಾತನಾಡುವವರ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುತ್ತೇನೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಬೇಕು. ಎಲ್ಲರಿಗೂ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಖಾರವಾಗಿ ತಿರುಗೇಟು ನೀಡಿದರು.
ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ಗೆ ನಾನು ಉತ್ತರ ನೀಡುವುದಿಲ್ಲ. ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ಎಲ್ಲರಿಗೂ ರಕ್ಷಣೆ ನೀಡುತ್ತೇವೆ ಎಂದು ಪ್ರಮಾಣ ಮಾಡಿರುವ ಮುಖ್ಯಮಂತ್ರಿ, ಸಚಿವರು ಈ ಬಗ್ಗೆ ಉತ್ತರ ನೀಡಬೇಕು. ಈ ಎಲ್ಲವನ್ನು ಬಿಜೆಪಿ ಹಾಗೂ ಬಿಜೆಪಿ ಸರಕಾರವೇ ಹೇಳಿಸುತ್ತಿದೆ. ಹಳೇ ಮೈಸೂರು ಸೇರಿದಂತೆ ಅನೇಕ ಭಾಗಗಳಲ್ಲಿ ಅವರು ಈ ರೀತಿ ಪ್ರಚೋದಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಆಮೇಲೆ ಮಾತಾಡುತ್ತೇನೆ. ಈ ವಿಚಾರವಾಗಿ ಮೊದಲು ಸಿಎಂ ಉತ್ತರಿಸಲಿ ಎಂದು ಶಿವಕುಮಾರ್ ಒತ್ತಾಯಿಸಿದರು.