ಕಾರವಾರ : ಮೀನುಗಾರರ ಸಮಸ್ಯೆಗಳನ್ನು ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಮೀನುಗಾರರ ಕುಂದು ಕೊರತೆ ಪರಿಹರಿಸುವ ಸಭೆಯಲ್ಲಿ
ಜಿಲ್ಲೆಯ ಮೀನುಗಾರರ ಸದ್ಯದ ಸಮಸ್ಯೆಗಳನ್ನು ಮೀನುಗಾರರಿಂದಲೇ ಆಲಿಸಿದರು.
ಬಳಿಕ ಮೀನುಗಾರರ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಮೀನುಗಾರ ಸಂಘದ ಅಧ್ಯಕ್ಷ ರಾಜು ತಾಂಡೇಲ, ಸದ್ಯ ಮೀನುಗಾರರಿಗೆ ಮೀನುಗಾರಿಕೆ ಮಾಡಲು ನೌಕ ಪಡೆಯಿಂದ ಸಾಕಷ್ಟು ತೊಂದರೆಯಾಗುತ್ತಿದ್ದೂ ಇದರಿಂದ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಜಿಲ್ಲೆಯ ಮೀನುಗಾರರು ನೌಕ ಪಡೆಯು ಗುರುತಿಸಿದ ಅಪಾಯಕಾರಿ ಪ್ರದೇಶವನ್ನು ಹೊರತು ಪಡಿಸಿ ಮೀನುಗಾರಿಕೆ ಮಾಡುತ್ತಿದ್ದು ಅದಾಗಿಯೂ ನೌಕಾ ಪಡೆಯ ಅಧಿಕಾರಿಗಳು ವಿನಾಕಾರಣ ಮೀನುಗಾರರನ್ನು ಹಿಡಿದು ತೊದರೆ ನೀಡುತ್ತಿರುತ್ತಾರೆ. ಒಂದು ವೇಳೆ ಮೀನುಗಾರರಿಂದ ತಪ್ಪುಗಳು ಆಗಿದ್ದಲ್ಲಿ ಕೋಸ್ಟಲ್ ಪೊಲೀಸ್ ರಿಂದ ಅದನ್ನು ತಡೆಯುವಂತೆ ಆಗಬೇಕು ಹೊರತು ನೌಕಾ ಪಡೆಯ ಅಧಿಕಾರಿಗಳು ಯಾವುದೇ ರೀತಿಯಾಗಿ ತೊಂದರೆಗಳನ್ನು ನೀಡದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಹಾಗೆಯೇ ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ನೀಡುವ ಸಂಕಷ್ಟ ಪರಿಹಾರವು ತ್ವರಿತವಾಗಿ ಸಂಬಂಧ ಪಟ್ಟ ಇಲಾಖೆಯಿಂದ ಸಿಗುವಂತಾಗಬೇಕು, ನಾಡ ಮೀನುಗಾರ ದೋಣಿಗಳಿಗೆ ಸೀಮೆ ಎಣ್ಣೆ ಸರಿಯಾಗಿ ವಿತರಣೆಯಾಗಬೇಕು, ಮೀನುಗಾರ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು, ಸರ್ಕಾರ ಮೀನುಗಾರರಿಗೆ ಜಾರಿ ತಂದಿರುವ ಕಾರ್ಯ ಚಟುವಟಿಕೆಗಳನ್ನು ಜಾರಿಗೊಳಿಸಬೇಕು ಹೀಗೆ ಮುಂತಾದ ಬೇಡಿಕೆಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಬಳಿಕ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ನೌಕಾ ಪಡೆಯ ಅಧಿಕಾರಿಗಳಿಗೆ ಸಭೆಯಲ್ಲೇ ನಿರ್ದೇಶನ ನೀಡಿದರು. ಮೀನುಗಾರರು ಮೀನುಗಾರಿಕೆ ಸಂದರ್ಭದಲ್ಲಿ ನಿಗದಿ ಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡದಂತೆ ತಿಳಿಸಿದರು. ಒಂದು ವೇಳೆ ಮೀನುಗಾರರ ಅರಿವಿಗೆ ಬಾರದೆ ಸರ್ಕಾರ ನೌಕಾ ಪಡೆಗಾಗಿ ನಿಗದಿ ಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡಿದರೆ ಅದನ್ನು ಪರಿಶೀಲಿಸಿ ಅವರಿಗೆ ಮಾಹಿತಿ ನೀಡಿ ಅಲ್ಲಿಂದ ತೆರಳುವಂತೆ ಸೂಚಿಸಬೇಕು. ಹೊರತು ಮೀನುಗಾರರ ಮೇಲೆ ಯಾವುದೇ ರೀತಿ ತೊಂದರೆಗಳನ್ನು ನೀಡದಂತೆ ನೌಕಾ ಪಡೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಸರ್ಕಾರದಿಂದ ಮೀನುಗಾರರಿಗೆ ಜಾರಿಯಾದ ಸಂಕಷ್ಟ ಪರಿಹಾರ ಯೋಜನೆಗಳ ಕುರಿತು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಎಸ್ ಪಿ
ಸಿ.ಟಿ.ಜಯಕುಮಾರ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಕವಿತಾ, ನೌಕಾ ಪಡೆ ಅಧಿಕಾರಿಗಳು ರಾಹುಲ್ ಪನ್ವರ್, ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಹಾಗೂ ಮೀನುಗಾರರು ಉಪಸ್ಥಿತರಿದ್ದರು.