ನವದೆಹಲಿ, ಏಪ್ರಿಲ್ 30: ಯಾವಾಗಲೂ ಸುದ್ದಿಯಲ್ಲಿರುತ್ತಿದ್ದ, ಆಮೂಲಕ ಯುಪಿಎ ಗೆ ಮುಜುಗರ ಉಂಟು ಮಾಡುತ್ತಿದ್ದ ಯುಪಿಎ-2 ಮಂತ್ರಿ ಮಂಡಲದ `ವಿಭಿನ್ನ ಮಾದರಿ‘ಯ ಸದಸ್ಯ ಶಶಿ ತರೂರ್ ಕೊನೆಗೂ ಯುಪಿಎ ಸಂಪುಟಕ್ಕೆ ಭಾರವೆನಿಸಿದರು. ರಾಜೀನಾಮೆಯ ಒತ್ತಡ ಹೆಚ್ಚಾದಾಗಲೂ ಜಪ್ಪೆನ್ನದ ತರೂರ್ರಿಂದ ಪ್ರಧಾನಿಗಳು ರಾಜೀನಾಮೆ ಪಡೆದು ಯಥಾಪ್ರಕಾರ ತಡವಾಗಿ `ಕಾಂಗ್ರೆಸಿನ ಉನ್ನತ ಪರಂಪರೆ‘ಯನ್ನು ಎತ್ತಿ ಹಿಡಿದರು! ತನ್ನ ರಾಜ್ಯಕ್ಕೆ ಒಂದು ಐಪಿಎಲ್ ಕ್ರಿಕೆಟ್ ತಂಡವನ್ನು ಕೊಡಿಸಲು ತಾನು ಪ್ರಯತ್ನಿಸಿದ್ದು ತಪ್ಪೇನು ಎಂದು ಶಶಿ ತರೂರ್ ಸಂಸತ್ತಿನಲ್ಲಿ ಮಂತ್ರಿ ಪದವಿಗೆ ರಾಜೀನಾಮೆಯ ಮೊದಲು ಮತ್ತು ನಂತರ ಹೇಳಿಕೆಗಳ ಮೂಲಕ ಹಾಗೂ ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಾ. ತಾನು ಅಮಾಯಕನೆಂಬ ಪ್ರದರ್ಶನ ನಡೆಸಿದರು.
ಆದರೆ ಅವರ ಈ ಹೇಳಿಕೆಗಳೇ ಅವರು ಹೇಳಿಕೊಳ್ಳುವಷ್ಟು ಅಮಾಯಕರಂತೂ ಅಲ್ಲ ಎಂಬ ಬಲವಾದ ಸಂದೇಹ ಉಂಟು ಮಾಡುತ್ತವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಈತ ಮಧ್ಯಮ ವರ್ಗದ `ಕಣ್ಮಣಿ‘, ನಿಂತ ನೀರಾಗಿದ್ದ ಭಾರತದ ರಾಜಕಾರಣವನ್ನು ಸ್ವಚ್ಛಗೊಳಿಸಲು ಬಂದ ಹೊಸ ನೀರಿನ ಪ್ರತಿನಿಧಿಗೆ ಹೀಗಾಗಬಾರದಿತ್ತು ಎಂದೆಲ್ಲಾ ಮಾಧ್ಯಮಗಳಲ್ಲಿ ಚಿತ್ರಿಸಲಾಗುತ್ತಿದೆ; ಇಂಟರ್ನೆಟ್ಟಿನಲ್ಲಿ ಆತನಿಗೆ ಬೆಂಬಲದ ಮಹಾಪೂರವೇ ಹರಿದು ಬಂದಿದೆಯಂತೆ. ಅದರೆ `ಟ್ವಿಟರ್‘ನಲ್ಲಿ `ಟಾಪ್ ಟೆನ್‘ನಲ್ಲಿ ಐಪಿಎಲ್ ಬಂದರೂ ಅವರ ರಾಜೀನಾಮೆ ಇದುವರೆಗೂ ಆ ಮಟ್ಟಕ್ಕೆ ಬಂದಿಲ್ಲವಲ್ಲ ಎಂದೂ ಅವರ ಇಂಟರ್ನೆಟ್ ಬೆಂಬಲಿಗರಿಗೆ ಸ್ವಲ್ಪ ನಿರಾಸೆಯೂ ಆಗಿದೆಯಂತೆ.
ಶಶಿ ತರೂರ್ ಹೋದರೂ, ಐಪಿಎಲ್ ಹುಯಿಲು ನಿಂತಿಲ್ಲ. ಬದಲಾಗಿ ಅದರ ಸದ್ದು ಇನ್ನಷ್ಟು ಹೆಚ್ಚಾಗಿದೆ. `ತನ್ನ ರಾಜ್ಯ‘ಕ್ಕೂ ಐಪಿಎಲ್ ತಂಡವನ್ನು ಕೊಡಿಸುವ `ಆಸೆ ಹೊತ್ತ‘ ಐಪಿಎಲ್ ಕಮಿಶನರ್ ಲಲಿತ್ ಮೋದಿಯದ್ದು ಮುಂದಿನ ಬಲಿ ಎನ್ನಲಾಗುತ್ತಿದೆ. ಇನ್ನೂ ಒಂದೆರಡು ಯುಪಿಎ ಮಂತ್ರಿಗಳ, ಮುಖ್ಯ ಮಂತ್ರಿಗಳ, ಬಹುಶಃ ರಾಜ್ಯಪಾಲರುಗಳ ಹೆಸರುಗಳೂ ಬಯಲಾಗಬಹುದು ಎಂದೂ ಹೇಳಲಾಗುತ್ತಿದೆ. ಎಲ್ಲಾ ಐಪಿಎಲ್ ತಂಡಗಳ ಮಾಲಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತನಿಖೆ ಅಋಂಭಿಸಲಾಗಿದೆ. ವಾಸ್ತವವಾಗಿ ಇದು ಯಾವ ರಾಜ್ಯದ ಬಗ್ಗೆಯೂ ಪ್ರೇಮದ ಪ್ರಶ್ನೆಯಲ್ಲ, ಕ್ರಿಕೆಟ್ ಬಗ್ಗೆ ಭಾರತೀಯರ ಹುಚ್ಚು ಪ್ರೀತಿಯ ಸಂಪೂರ್ಣ ವ್ಯಾಪಾರೀ ಲಾಭ ದೋಚಲೆಂದೇ ಸೃಷ್ಟಿಯಾದ ಒಂದು ಹೊಲಸು ವ್ಯವಸ್ಥೆ ಮಾತ್ರ ಎಂಬುದು ಹೆಚ್ಚೆಚ್ಚು ಬಯಲಾಗುತ್ತಿದೆ
ಸಾವಿರಾರು ಕೋಟಿ ರೂ.ಗಳ ಲಾಭ ಮಾಡಿದ್ದರೂ ಕಳೆದೆರಡು ವರ್ಷಗಳಿಂದ ಐಪಿಎಲ್ ಆದಾಯ ತೆರಿಗೆ ಪಾವತಿ ಮಾಡಿಲ್ಲವಂತೆ. ಅದು ಏಕೆ ತೆರಿಗೆ ರಿಟನ್ಸರ್ ಸಲ್ಲಿಸಿಲ್ಲ, ಅದಕ್ಕೆ ಮನರಂಜನಾ ತೆರಿಗೆಯಿಂದ ವಿನಾಯ್ತಿ ಏಕೆ ಕೊಡಲಾಗಿದೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಆಗ್ರಹಿಸಿದ್ದಾರೆ. ಹಿಂದೆ ಶೇರು ಹಗರಣದ ಜೆಪಿಸಿ(ಜಂಟಿ ಸಂಸದೀಯ ಸಮಿತಿ) ತನಿಖೆ ನಡೆಸಿದಂತೆ ಈ ಹಗರಣದ ಜೆಪಿಸಿ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಮಾರಿಶಸ್ನೊಂದಿಗೆ ಡಬಲ್ ತೆರಿಗೆ ತಪ್ಪಿಸುವ ಒಪ್ಪಂದದ ಲಾಭ ಪಡೆದು ಕಪ್ಪು ಹಣವನ್ನು ಬಿಳಿ ಮಾಡಲಾಗುತ್ತಿದೆ. ಆದ್ದರಿಂದ ಈ ಒಪ್ಪಂದದ ಮರುಪರಿಶೀಲನೆ ನಡೆಸಬೇಕೆಂಬ ದೀರ್ಘಕಾಲದ ಆಗ್ರಹವನ್ನೂ ಅವರು ಪುನರುಚ್ಚರಿಸಿದ್ದಾರೆ.
ಭಾರತದಲ್ಲಿ ಕ್ರೋನಿ ಕ್ಯಾಪಿಟಲಿಸಂ(ಚಮಚಾ ಬಂಡವಾಳಶಾಹಿ) ಸಾಧ್ಯವಾಗದು ‘ ಎಂದು ಪ್ರಧಾನ ಮಂತ್ರಿಗಳ ಹೇಳಿಕೆಯನ್ನು ಉದ್ಧರಿಸುತ್ತಾ ಅವರು ಐಪಿಎಲ್ ಈ ಚಮಚಾ ಬಂಡವಾಳಶಾಹಿಯ ಹೊಲಸು ಪ್ರದರ್ಶನವಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.
ಸೌಜನ್ಯ: ಜನಶಕ್ತಿ