ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದ್ವೇಷ ಭಾಷಣ ಪ್ರಕರಣ: ಆರೋಪ ಪಟ್ಟಿ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸುಪ್ರೀಂ ನಿರ್ದೇಶ

ದ್ವೇಷ ಭಾಷಣ ಪ್ರಕರಣ: ಆರೋಪ ಪಟ್ಟಿ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸುಪ್ರೀಂ ನಿರ್ದೇಶ

Tue, 21 Feb 2023 16:15:31  Office Staff   Vb

ಹೊಸದಿಲ್ಲಿ: ಹೊಸದಿಲ್ಲಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಮಾಡಿದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಪಟ್ಟಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದೆ.

ಪೊಲೀಸರ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ಧ್ವನಿ ಮಾದರಿಗಳ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ಹೇಳಿದರು. ಆನಂತರ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನಟರಾಜ್ ಅವರಿಗೆ ಈ ನಿರ್ದೇಶನ ನೀಡಿದರು.

ಈ ವಿಷಯದ ಕುರಿತಂತೆ ಪೊಲೀಸರು ಶೀಘ್ರದಲ್ಲಿ ಆರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ನಟರಾಜ್ ಅವರು ತಿಳಿಸಿದರು.

ದ್ವೇಷ ಭಾಷಣದ ಕುರಿತು ಕ್ರಮ ತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾದ ಮನವಿಯ ಗುಚ್ಛವನ್ನು ಪೀಠ ವಿಚಾರಣೆ ನಡೆಸಿತು. ಗುಂಪು ಹಿಂಸಾಚಾರದ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ತೆಲ್ಸನ್ ಪೂನಾವಾಲ ತೀರ್ಪಿನಲ್ಲಿ ನೀಡಲಾದ ನಿರ್ದೇಶನಗಳನ್ನು ದಿಲ್ಲಿ ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ತುಷಾರ್ ಗಾಂಧಿ ಅವರು ಪ್ರಸಕ್ತ ಅರ್ಜಿ ಸಲ್ಲಿಸಿದ್ದಾರೆ.


Share: