ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದ್ವೇಷಭಾಷಣ ತಡೆಯಬೇಕಾಗಿದೆ: ಕೇಂದ್ರಕ್ಕೆ ಸುಪ್ರೀಂ ಆದೇಶ

ದ್ವೇಷಭಾಷಣ ತಡೆಯಬೇಕಾಗಿದೆ: ಕೇಂದ್ರಕ್ಕೆ ಸುಪ್ರೀಂ ಆದೇಶ

Sat, 12 Aug 2023 15:32:21  Office Staff   Vb

ಹೊಸದಿಲ್ಲಿ: ದೇಶಾದ್ಯಂತ ದ್ವೇಷಭಾಷಣದ ಪ್ರಕರಣಗಳ ಪರಿಶೀಲನೆಗೆ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ.

ಕಳೆದ ವಾರ ಆರು ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಕೋಮುಗಲಭೆ ಸಂಭವಿಸಿದ ಹರ್ಯಾಣದ ನೂಹ್ ಸೇರಿದಂತೆ ದೇಶಾದ್ಯಂತ ಒಂದು ಸಮುದಾಯದ ಸದಸ್ಯರ ಹತ್ಯೆಗೆ ಕರೆ ನೀಡುವ ಹಾಗೂ ಅವರ ವಿರುದ್ಧ ಆರ್ಥಿಕ, ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡುವಂತಹ ದ್ವೇಷಭಾಷಣಗಳನ್ನು ಮಟ್ಟಹಾಕುವಂತೆ ಕೋರಿ ಪತ್ರಕರ್ತ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ವಿಭಿನ್ನ ಸಮುದಾಯಗಳ ನಡುವೆ ಸೌಹಾರ್ದ ಹಾಗೂ ಸದ್ಭಾವನೆಯಿರಬೇಕೆಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್. ಭಟ್ಟ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

“ಶಾಂತಿ, ಸೌಹಾರ್ದ ಸ್ಥಾಪನೆಗೆ ಎಲ್ಲಾ ಸಮುದಾಯಗಳು ಹೊಣೆಗಾರರಾಗಿವೆ. ದ್ವೇಷಭಾಷಣವು ಒಳ್ಳೆಯದಲ್ಲ ಹಾಗೂ ಅದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಸುಪ್ರೀಂಕೋರ್ಟ್ ತಿಳಿಸಿತು. ದ್ವೇಷಭಾಷಣಗಳ ಪರಿಶೀಲನೆಗೆ ಸಮಿತಿ ರಚನೆಯ ಬಗ್ಗೆ ಆಗಸ್ಟ್ 18ರೊಳಗೆ ಉತ್ತರಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ತಿಳಿಸಿತು.


Share: