ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದ್ವಿತೀಯ ಪಿಯುಸಿ ಪಠ್ಯ ಚಕ್ರತೀರ್ಥ ಸಮಿತಿಯ ಪರಿಷ್ಕರಣೆ ಅಳವಡಿಸುವುದಿಲ್ಲ: ನಾಗೇಶ್

ದ್ವಿತೀಯ ಪಿಯುಸಿ ಪಠ್ಯ ಚಕ್ರತೀರ್ಥ ಸಮಿತಿಯ ಪರಿಷ್ಕರಣೆ ಅಳವಡಿಸುವುದಿಲ್ಲ: ನಾಗೇಶ್

Thu, 09 Jun 2022 16:38:05  Office Staff   Vb

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ವಿಸರ್ಜನೆ ಹಿನ್ನೆಲೆಯಲ್ಲಿ ಆ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಸಂಬಂಧ ಯಾವುದೇ ವರದಿಯನ್ನು ಪಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಅಧ್ಯಾಯ 4.2ರಲ್ಲಿನ 'ಹೊಸ ಧರ್ಮಗಳ ಉದಯ' ಪಠ್ಯವನ್ನು ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ಸೂಚಿಸಲಾಗಿತ್ತು. ಆದರೆ, ಇದೀಗ ಆ ಸಮಿತಿಯನ್ನು ಮುಖ್ಯಮಂತ್ರಿಯವರೇ ವಿಸರ್ಜನೆ ಮಾಡಿರುವುದರಿಂದ, ಅವರಿಂದ ಪಿಯುಸಿ ಪಠ್ಯ ಪರಿಷ್ಕರಣೆ ವರದಿ ಪಡೆಯುವ ಪ್ರಶ್ನೆಯೇ ಉದ್ದವಿಸುವುದಿಲ್ಲ ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರಿಯಲಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪಠ್ಯ ಸೇರಿದಂತೆ ಇತರ ಪಠ್ಯಗಳಲ್ಲಿನ ಲೋಪದೋಷಗಳನ್ನೂ ಸರಿಪಡಿಸುತ್ತೇವೆ ಎಂದ ಸಚಿವ ನಾಗೇಶ್‌, ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ: ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಸಾರ್ವಜನಿಕರ ಚರ್ಚೆಗೆ ಇಡುತ್ತೇವೆ. ಒಂದು ವೇಳೆ ಏನಾದರೂ ಲೋಪದೋಷಗಳಿವೆ ಎಂದು ಜನರು ತಿಳಿಸಿದರೆ ಅದನ್ನು ಸರಿಪಡಿಸುತ್ತೇವೆ ಎಂದು ಸಿಎಂ ನಿವಾಸದ ಬಳಿ ಸ್ಪಷ್ಟಪಡಿಸಿದ ಸಚಿವನಾಗೇಶ್, ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ವೆಬ್‌ಸೈಟ್‌ನಲ್ಲಿ ಪಠ್ಯ ಪರಿಸ್ಕೃತ ಹಾಗೂ ಹಳೆಯ ಪಠ್ಯದ ವಿವರ ಹಾಕುತ್ತೇವೆ ಎಂದು ತಿಳಿಸಿದರು.

ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಈ ಹಿಂದೆ ಹಲವು ಪಠ್ಯ ತೆಗೆದಿದ್ದಾರೆ. ಸಿದ್ದರಾಮಯ್ಯ ಇದರ ಬಗ್ಗೆ ಉತ್ತರ ಕೊಡಬೇಕಿತ್ತು. ಅದರ ವಿಚಾರಕ್ಕೆ ಸಿದ್ದರಾಮಯ್ಯ ಹೋಗಲೇ ಇಲ್ಲ. ನಾಡು-ನುಡಿ ಮೇಲೆ ಅಭಿಮಾನ ಹುಟ್ಟುವ ಪಾಠಗಳನ್ನೇ ಬರಗೂರು ಅವರು ಪಠ್ಯದಿಂದ ತೆಗೆದಿದ್ದರು ಎಂದು ನಾಗೇಶ್ ಆರೋಪಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಪರಿಷ್ಕೃತ ಪಠ್ಯದಲ್ಲಿ ಏನು ಕೈಬಿಟ್ಟಿದ್ದರು, ಈಗ ನಾವೇನು ಸೇರಿಸಿದ್ದೇವೆ ಎಲ್ಲವನ್ನೂ ಜನರ ಮುಂದಿಡುತ್ತೇವೆ. ಜನರು ತಪ್ಪಿದೆ ಎಂದು ಹೇಳಿದರೆ ಅದನ್ನು ಬದಲಾಯಿಸುವ ಮನಸ್ಸಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗಿ ಆಕ್ಷೇಪಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಅವರು ತಿಳಿಸಿದರು.


Share: