ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಂತಪಂಕ್ತಿ ಜೋಡಣೆ ಸೌಲಭ್ಯವನ್ನು ತಪ್ಪದೇ ಪಡೆದುಕೊಳ್ಳಿ: ಡಿಎಚ್‍ಒ ಡಾ.ಜನಾರ್ಧನ್

ದಂತಪಂಕ್ತಿ ಜೋಡಣೆ ಸೌಲಭ್ಯವನ್ನು ತಪ್ಪದೇ ಪಡೆದುಕೊಳ್ಳಿ: ಡಿಎಚ್‍ಒ ಡಾ.ಜನಾರ್ಧನ್

Fri, 15 Jul 2022 04:18:25  Office Staff   SO News

ಬಳ್ಳಾರಿ : 45 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೃತಕ ದಂತಪಂಕ್ತಿ ಅಳವಡಿಸುವ ಯೋಜನೆಯು ಈಗಾಗಲೇ ಜಾರಿಯಲ್ಲಿದ್ದು, 3ಕ್ಕಿಂತ ಹೆಚ್ಚು ಹಲ್ಲುಗಳು ಕಳೆದುಕೊಂಡಿರುವ ನಾಗಕರಿಕರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಹೆಚ್. ಎಲ್. ಜನಾರ್ಧನ್ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ದಂತ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶ್ರೀಮತಿ ರುಕ್ಮಿಣಿಯಮ್ಮ ಚೆಂಗಪ್ಪ ಮೆಮೋರಿಯಲ್ ವೃದ್ದಾಶ್ರಮದಲ್ಲ್ಲಿ “ದಂತ ಭಾಗ್ಯ ಸಪ್ತಾಹ” ಅಂಗವಾಗಿ ಗುರುವಾರದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲಾ ಅಂಗಾಂಗಗಳ ಜೊತೆ ದಂತ ಸಂರಕ್ಷಣೆಯು ಅಷ್ಟೇ ಮುಖ್ಯವಾಗಿದ್ದು, ಆಹಾರವನ್ನು ಸರಿಯಾಗಿ ಜಗಿದು ಸೇವಿಸಿ ಸಧೃಡ ಆರೋಗ್ಯ ಹೊಂದಲು ಹಲ್ಲುಗಳ ಅಗತ್ಯತೆ ಅವಶ್ಯವಿದೆ. ದೀರ್ಘಾವಧಿಯವರೆಗೆ ಹಲ್ಲುಗಳ ಸಂರಕ್ಷಣೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಿದ್ದು,ವಯೋಸಹಜವಾಗಿ ಹಲ್ಲುಗಳು ಬಿದ್ದಲ್ಲಿ ಅಥವಾ ಆಕಸ್ಮಿಕವಾಗಿ ಹಲ್ಲುಗಳು ಬಿದ್ದಲ್ಲಿ ಅಂತಹ ಕುಟುಂಬದವರು ತಮ್ಮ ಬಿಪಿಎಲ್ ಕಾರ್ಡ್‍ನೊಂದಿಗೆ ಆಗಮಿಸಿ ಕೃತಕ ಹಲ್ಲುಗಳ ಜೋಡಣೆ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ದಂತ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ ಮಾತನಾಡಿ, ಈ ಸೌಲಭ್ಯವನ್ನು ಪಡೆಯಲು ಅರ್ಹ ನಾಗರಿಕರು ತಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದ್ದು ಕೃತಕ ಹಲ್ಲುಗಳ ಜೋಡಣೆ ಅವಶ್ಯಕ ಇರುವ ಫಲಾನುಭವಿಗಳನ್ನು ನಿರ್ದಿಷ್ಟ ದಿನದಂದು ವಿಮ್ಸ್ ಆವರಣದಲ್ಲಿರುವ ಸರ್ಕಾರಿ ದಂತ ಮಹಾವಿದ್ಯಾಲಯಕ್ಕೆ ಕಳುಹಿಸಿಕೊಡಲಾಗುವುದು. ಇಲ್ಲಿ ಉಚಿತ ಕೃತಕ ದಂತ ಪಂಕ್ತಿಗಳ ಜೋಡಣೆ ಮಾಡುವ ಮೂಲಕ ಬಾಯಿ ಆರೋಗ್ಯ ಕಾಪಾಡಲು ಶ್ರದ್ದೆಯಿಂದ ಕಾರ್ಯನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಭಾರತಿ, ಕೃತಕ ದಂತ ವಿಭಾಗದ ಮುಖ್ಯಸ್ಥ ಡಾ.ಆದರ್ಶ, ಸಾರ್ವಜನಿಕ ಆರೋಗ್ಯ ದಂತ ವೈದ್ಯಶಾಸ್ತ್ರ ಮುಖ್ಯಸ್ಥೆ ಡಾ.ಪೂರ್ಣಿಮಾ, ದಂತ ಭಾಗ್ಯ ಯೋಜನೆಯ ನೋಡಲ್ ಅಧಿಕಾರಿ ಡಾ.ವೀರಾರೆಡ್ಡಿ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ವೃದ್ದಾಶ್ರಮದ ನಿವಾಸಿಗಳು ಉಪಸ್ಥಿತರಿದ್ದರು


Share: