ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ :ಭೂಕಂಪದಿಂದ ಕನಕನಕಿಂಡಿ ಸೃಷ್ಟಿ

ಉಡುಪಿ :ಭೂಕಂಪದಿಂದ ಕನಕನಕಿಂಡಿ ಸೃಷ್ಟಿ

Mon, 02 Nov 2009 03:02:00  Office Staff   S.O. News Service
ಉಡುಪಿ, ನ.1: ಕನಕದಾಸರು ಉಡುಪಿ ಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುತ್ತಿದ್ದ ವೇಳೆ ಸಣ್ಣ ಭೂಕಂಪವಾಗಿ ಈಗಿರುವ ಕನಕನ ಕಿಂಡಿಯ ಗೋಡೆಯಲ್ಲಿ ಬಿರುಕು ಕಂಡಿತು. ಅದನ್ನು ಆಗಿನ ಜನ ಪವಾಡ ಎಂದು ನಂಬಿದರು. ಬಳಿಕ ವಾದಿರಾಜರು ಬಿರುಕು ಬಿಟ್ಟ ಗೋಡೆಯ ಜಾಗಕ್ಕೆ ಕನಕನ ಕಿಂಡಿ ಎಂಬುದಾಗಿ ನಾಮಕರಣ ಮಾಡಿದರು ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾ ಚಾರ್ಯ ತಿಳಿಸಿದ್ದಾರೆ. 

ಉಡುಪಿ ಶ್ರೀಕೃಷ್ಣಮಠದ ರಾಜಾಂ ಗಣದಲ್ಲಿ ರವಿವಾರ ನಡೆದ ಕನಕ ಜಯಂತಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಶ್ರೀಕೃಷ್ಣಮಠದೊಳಗೆ ಆ ಕಾಲದಲ್ಲಿ ಕನಕದಾಸರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರಲಿಲ್ಲ. ವಾದಿರಾಜರು ಕನಕದಾಸ ರನ್ನು ತುಂಬಾ ಇಷ್ಟ ಪಡುತ್ತಿದ್ದ ಹಿನ್ನೆಲೆಯಲ್ಲಿ ಇತರರು ಅವರನ್ನು ದೂಷಿಸಲು ಅವಕಾಶವೇ ಇರಲಿಲ್ಲ. ಇದು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗಳು ಸೃಷ್ಟಿಸಿರುವ ಬಾಲಿಶ ಕತೆ ಎಂದು ಅವರು ಹೇಳಿದರು.

ಕನಕದಾಸರ ಇತಿಹಾಸದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅದು ಇನ್ನು ಖಚಿತ ಪಟ್ಟಿಲ್ಲ. ಎಂದು ಅವರು ಹೇಳಿದರು.

ಉತ್ಸವವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ದರು. ಭೀಮನಕಟ್ಟೆ ಮಠದ ಶ್ರೀರಘುಮಾನ್ಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪಿ.ಹೇಮಲತಾ, ಉಡುಪಿ ಜಿಲ್ಲಾ ಕುರುಬ ಸಂಘದ ಕಾಪು ನರಸಿಂಹ ಸದಾನಂದ ಭಾಗವಹಿಸಿದ್ದರು.  ಕನಕದಾಸ ಅಧ್ಯ ಯನ ಸಂಶೋಧನ ಪೀಠದ ನಿರ್ದೇಶಕ ಪ್ರೊ.ಹೇರಂಜೆ ಕೃಷ್ಣಭಟ್ ಸ್ವಾಗತಿಸಿದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನಾ ಕನಕ ಕೀರ್ತನೆ ಭಜನೆ ಗಳೊಂದಿಗೆ ಸಂಸ್ಕೃತ ಕಾಲೇಜಿನಿಂದ ರಾಜಾಂಗಣದ ವರೆಗೆ ಮೆರವಣಿಗೆ ನಡೆಯಿತು. 

ಪರ್ಯಾಯ ಪುತ್ತಿಗೆ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ, ಉಡುಪಿ ಕನಕದಾಸ ಅಧ್ಯಯನ ಸಂಶೋಧನ ಪೀಠ, ಎಂಜಿ‌ಎಂ ಕಾಲೇಜು ಹಾಗೂ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Share: