ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ತಂದೆಯ ಅಂತಿಮ ಇಚ್ಛೆ ಈಡೇರಿಸಲು ಈದ್ದಾಕ್ಕೆ ಜಮೀನು ದಾನ ಮಾಡಿದ ಸೋದರಿಯರು

ತಂದೆಯ ಅಂತಿಮ ಇಚ್ಛೆ ಈಡೇರಿಸಲು ಈದ್ದಾಕ್ಕೆ ಜಮೀನು ದಾನ ಮಾಡಿದ ಸೋದರಿಯರು

Fri, 06 May 2022 15:18:08  Office Staff   Vb
ಡೆಹ್ರಾಡೂನ್: ಧಾರ್ಮಿಕ ಸೌಹಾರ್ದಕ್ಕೆ ಉಜ್ವಲ ನಿದರ್ಶನವಾಗಿ, ಪವಿತ್ರ ಈದುಲ್ ಫಿತ್ರ್ ಹಬ್ಬಕ್ಕೆ ಕೆಲವೇ ದಿನಗಳ ಮೊದಲು ಇಬ್ಬರು ಸೋದರಿಯರಾದ ಅನಿತಾ (62) ಹಾಗೂ ಸರೋಜಾ (57) ಅವರು 2.1 ಎಕರೆ ಜಮೀನನ್ನು (1.2 ಕೋಟಿ ರೂ.), ಉತ್ತರಾಖಂಡದ ಕಾಶಿಪುರದ ಈದ್ಗಾವೊಂದಕ್ಕೆ ದಾನವಾಗಿ ನೀಡಿದ್ದಾರೆ. ಕೃಷಿಕರಾದ ತಮ್ಮ ತಂದೆ ಲಾಲಾ ಬ್ರಜ್‌ನಂದನ್ ರಸ್ತೆಗಿ ಅವರ ಕೊನೆಯ ಇಚ್ಛೆಯನ್ನು ಈಡೇರಿಸಲು 2003ರಲ್ಲಿ ಅವರು ಈ ಜಮೀನನ್ನು ಈದ್ಗಾಕ್ಕೆ ನೀಡಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ಅನಿತಾ ಅವರು ಪ್ರಸ್ತುತ ದಿಲ್ಲಿಯಲ್ಲಿ ವಾಸವಾಗಿದ್ದರೆ, ಸರೋಜಾ ಮೀರತ್‌ನಲ್ಲಿ ನೆಲೆಸಿದ್ದಾರೆ.
 
ರಸ್ತೆಗಿ ಅವರ ನಿಧನದ ಬಳಿಕ, ಅವರ ಕೆಲವು ಬಂಧುಗಳು ಈ ಇಬ್ಬರು ಸಹೋದರಿಯರಿಗೆ ಅವರ ತಂದೆ ತನ್ನ ಜಮೀನನ್ನು ಮುಸ್ಲಿಮ್ ಬಾಂಧವರಿಗೆ ನೀಡಲು ಬಯಸಿದ್ದರೆಂಬ ವಿಷಯವನ್ನು ತಿಳಿಸಿದ್ದಾರೆ.
 
ಈದುಲ್ ಫಿತರ್ ಗೆ ಎರಡು ದಿನ ಮೊದಲು ಅನಿತಾ ಹಾಗೂ ಸರೋಜ್ ಅವರು ಈದ್ಗಾಕ್ಕೆ ಜಮೀನು ಹಸ್ತಾಂತರದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಈಗಲೂ ಕಾಶಿಪುರದಲ್ಲಿ ವಾಸಿಸುತ್ತಿರುವ ತಮ್ಮ ಸಹೋದರ ರಾಕೇಶ್ ನಿಂದ ಅವರ ನೆರವನ್ನು ಪಡೆದಿದ್ದರು.
 
“ನನ್ನ ತಂದೆ ಕೋಮು ಸೌಹಾರ್ದದಲ್ಲಿ ಗಾಢವಾದ ನಂಬಿಕೆಯನ್ನಿರಿಸಿದ್ದರು. ಈದುಲ್ ಫಿತ್ರ ನಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿ ನ ಸಂಖ್ಯೆಯಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುವುದಕ್ಕೆ ಅನುಕೂಲವಾಗಲು ಅವರು ತನ್ನ ಜಮೀನನ್ನು ದೇಣಿಗೆಯಾಗಿ ನೀಡಲು ಬಯಸಿದ್ದರು. ನನ್ನ ಸಹೋದರಿಯರು ಅವರ ಈ ಇಚ್ಛೆಯನ್ನು ಈಡೇರಿಸಿದ್ದಾರೆ' ಎಂದು ರಾಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
 
ಕಾಶೀಪುರ ಈದ್ಗಾ ಸಮಿತಿ ಅಧ್ಯಕ್ಷ ಹಸೀನ್ ಖಾನ್ ಅವರು ರಸ್ತೋಗಿ ಪುತ್ರಿಯರ ಔದಾರ್ಯವನ್ನು ಶ್ಲಾಘಿಸಿದ್ದಾರೆ. ''ರಸ್ತೆಗಿ ಅವರು ಜೀವಂತ ವಿದ್ದಾಗ ಎಲ್ಲಾ ಮುಖ್ಯ ಸಂದರ್ಭಗಳಲ್ಲಿ ನಾವು ಅವರಿಂದಲೇ ಮೊತ್ತ ಮೊದಲಿಗೆ ದೇಣಿಗೆಯನ್ನು ಪಡೆಯುತ್ತಿದ್ದೆವು. ಅವರು ಯಾವಾಗಲೂ ಉದಾರವಾಗಿ ಹಣವನ್ನು ನೀಡುತ್ತಿದ್ದರು. ಮುಸ್ಲಿಮ್ ಶ್ರದ್ಧಾಳುಗಳಿಗೆ ಅವರು ಹಣ್ಣುಗಳನ್ನು ಹಾಗೂ ಸಿಹಿತಿಂಡಿಗಳನ್ನು ಹಂಚುತ್ತಿದ್ದರು. ರಸ್ತೆಗಿಯವರ ನಿಧನದ ಬಳಿಕ ಅವರ ಪುತ್ರ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಮೊದಲಿಗರಾಗಿದ್ದಾರೆ. ಲಾಲಾ ಹಾಗೂ ತಂದೆ ಮುಹಮ್ಮದ್ ರಝಾ ಖಾನ್ ಅವರು ಸುಮಾರು 50 ವರ್ಷಗಳಿಂದ ಮಿತ್ರರಾಗಿ ದ್ದರು. ಅವರಿಬ್ಬರೂ ಈಗಿಲ್ಲ. ಆದರೆ ಅವರ ಭ್ರಾತೃತ್ವದ ನಂಬಿಕೆಯು ನಮಗೆ ಬಹಳಷ್ಟನ್ನು ಕಲಿಸಿಕೊಟ್ಟಿದೆ' ಎಂದರು.
 
ಖಾನ್ ಮಾತ್ರವಲ್ಲದೆ, ಕಾಶಿಪುರದ ಮುಸ್ಲಿಮರೆಲ್ಲರೂ ರಸ್ತೆಗಿಯವರನ್ನು ಗೌರವಿಸುತ್ತಿದ್ದರು ಹಾಗೂ ಈದ್ ದಿನದಂದು ಅವರಿಂದ ಆಶೀರ್ವಾದಗಳನ್ನು ಕೋರುತ್ತಿದ್ದರು. ಕಾಶೀಪುರ ನಗರದಲ್ಲಿ ಕೋಮು ಸೌಹಾರ್ದ ಹಾಗೂ ಸಹೋದರತೆಯ ಭಾವನೆ ನೆಲೆಸಿದೆ. ಪ್ರತಿಯೊಂದು ಧರ್ಮದವರೂ ಇನ್ನೊಂದು ಧರ್ಮದವರ ಜೊತೆ ಸಹಿಷ್ಣುತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಖಾನ್ ಹೇಳುತ್ತಾರೆ.

Share: