ಭಟ್ಕಳ: ಪುರಸಭೆಯಲ್ಲಿ ಇರುವ ಹೆಚ್ಚಿನ ಸದಸ್ಯರೆಲ್ಲರೂ ಕೂಡಾ ತಂಜೀಮ್ ಸಂಸ್ಥೆಯಿಂದ ಸೂಚಿಸಲ್ಪಟ್ಟು ಅವಿರೋಧ ಆಯ್ಕೆಯಾದವರಾಗಿದ್ದು ತಂಜೀಮ್ ಸಂಸ್ಥೆಯ ಕೃಪಾಕಟಾಕ್ಷ ಇವರೆಲ್ಲರ ಮೇಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು ನಿಚ್ಚಲಮಕ್ಕಿ ದೇವಸ್ಥಾನದ ಮಹದ್ವಾರದ ವಿಷಯದಲ್ಲಿ ತಾವು ಹಸ್ತಕ್ಷೇಪ ಮಾಡಿಲ್ಲ ಎಂದರೆ ಹಾಸ್ಯಾಸ್ಪದ ವಿಷಯ ಎಂದು ತಂಜೀಂಮ್ ಮುಖಂಡರಿಗೆ ಬಿ.ಜೆ.ಪಿ. ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಮಗಾರಿಯನ್ನು ನಿಲ್ಲಿಸುವಂತೆ ಎರಡು ಬಾರಿ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪುರಸಭಾ ಸದಸ್ಯರೆಲ್ಲರೂ ಕೂಡಾ ತಂಜೀಮ್ ಆಯ್ಕೆ ಮಾಡಿದ ಅಭ್ಯರ್ಥಿಗಳೇ ಇದ್ದು ಇಂದಿಗೂ ಅವರು ತಂಜೀಮ್ ಹಿಡಿತದಲ್ಲಿರುವವರಾಗಿದ್ದಾರೆ. ಸೌಹಾರ್ಧಯುತವಾಗಿ ಭಟ್ಕಳದ ಎಲ್ಲಾ ಕೋಮಿನವರು ಇರುವಾಗ ಪುರಸಭಾ ಸದಸ್ಯರುಗಳು ಉದ್ದೇಶ ಪೂರ್ವಕವಾಗಿ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಪರವಾನಿಗೆ ಪಡೆದಿಲ್ಲ ಎನ್ನುವ ಸಬೂಬು ಹೇಳಿ ಗೊಂದಲ ಸೃಷ್ಟಿ ಮಾಡಲು ಕಾರಣರಾಗಿದ್ದು ಇದಕ್ಕೆ ತಂಜೀಂ ಕಾರಣವಲ್ಲ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ತಮ್ಮದೇ ಕೃಪಾಕಟಾಕ್ಷದಿಂದ ಆಯ್ಕೆಯಾದ ಅವರ ಈ ಕೃತ್ಯ ನಿಮಗೆ ಸಮ್ಮತವೇ ಎಂದು ಕೇಳಿದ್ದಾರೆ.
ಶಾಸಕ ಸುನೀಲ ನಾಯ್ಕರ ಬಗ್ಗೆ ಮಜ್ಲಿಸೆ ಇಸ್ಲಾಹ ವ ತಂಝೀಂ ಸಂಸ್ಥೆಯ ಆರೋಪ ಸತ್ಯಕ್ಕೆ ದೂರವಾಗಿದ್ದು ಕೇವಲ ಗೊಂದಲ ಸೃಷ್ಟಿಸುವ ಹೇಳಿಕೆಯಾಗಿದೆ ಎಂದೂ ಹೇಳಿದರು. ಶಾಸಕ ಸುನೀಲ ನಾಯ್ಕ ಅವರು ತಮ್ಮ ವಯಕ್ತಿಕ ಖರ್ಚಿನಲ್ಲಿ ಕ್ಷೇತ್ರದ ಕೆಲವು ದೇವಸ್ಥಾನಗಳಿಗೆ ಮಹಾದ್ವಾರ ನಿರ್ಮಿಸಿಕೊಟ್ಟಿದ್ದು, ಇದೀಗ ಪಟ್ಟಣದ ಆಸರಕೇರಿ ವೆಂಕಟ್ರಮಣ ದೇವಸ್ಥಾನಕ್ಕೂ ಮಹಾದ್ವಾರ ನಿರ್ಮಿಸಿಕೊಡುತ್ತಿದ್ದಾರೆ. ಮಹಾದ್ವಾರ ನಿರ್ಮಿಸುವಾಗ ಎಲ್ಲೂ ಇಲ್ಲದ ವಿರೋಧ ಆಸರಕೇರಿಯಲ್ಲಿ ಮಹಾದ್ವಾರ ಅರ್ಧ ಕಾಮಗಾರಿ ಆಗುತ್ತಿರುವ ಸಂದರ್ಭದಲ್ಲಿ ಮಾತ್ರ ಉಂಟಾಗಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು ತಂಝೀಂ ಸಂಸ್ಥೆಯವರು ಆಸರಕೇರಿ ಮಹಾದ್ವಾರ ನಿರ್ಮಾಣಕ್ಕೆ ನಾವು ವಿರೋಧ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು ಒಂದು ಹಾಸ್ಯಾಸ್ಪದ ಹೇಳಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಮ, ಮುಖಂಡರಾದ ದಿನೇಶ ನಾಯ್ಕ, ಮೋಹನ ನಾಯ್ಕ, ಶ್ರೀಕಾಂತ ನಾಯ್ಕ, ಪಾಂಡುರಂಗ ನಾಯ್ಕ, ಮಂಜುನಾಥ ನಾಯ್ಕ ಶಿರಾಲಿ ಮುಂತಾದವರಿದ್ದರು.