ಕಾರವಾರ : ಡಾ. ಬಿ ಆರ್ ಅಂಬೇಡ್ಕರ್ ರವರು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ. ಈ ಸಂವಿದಾನದ ಮೂಲಭೂತ ಹಕ್ಕಿನ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತಂದಿದ್ದಾರೆ ಎಂದು ಪ್ರದಾನ ಜಿಲ್ಲಾ ಹಾಗೂ ಸತ್ರ ನ್ಯಾಯದೀಶ ಡಿ ಎಸ್ ವಿಜಯಕುಮಾರ್ ಹೇಳಿದರು.
ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 132 ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಜಾತಿಯಿಂದ ರೋಗಗ್ರಸ್ತವಾಗಿದ್ದ ಸಮಾಜಕ್ಕೆ ಮುಕ್ತಿ ನೀಡಲು ಶ್ರಮಿಸಿದರು. ಮೀಸಲಾತಿ, ಸಮಾನತೆಯ ಹಕ್ಕು ನೀಡುವುದರ ಜೊತೆಗೆ ಜಾತಿ ವ್ಯವಸ್ಥೆಯನ್ನು ಮುಕ್ತಮಾಡಿ ಬೆಳಕಾಗಿದ್ದಾರೆ. ಅಂಬೇಡ್ಕರ್ ಅವರ ಅಗತ್ಯತೆ ಹಿಂದಿಗಿಂತಲೂ ಪ್ರಸ್ತುತ ಕಾಲದಲ್ಲಿ ಹೆಚ್ಚಿದೆ. ಅಂಬೇಡ್ಕರ್ ಅವರು ನಿರಂತರ ಅಧ್ಯಯನದ ಮೂಲಕ ಎಲ್ಲ ಕ್ಷೇತ್ರಗಳಲ್ಲಿಯೂ ಅತೀ ಹೆಚ್ಚಿನ ಪ್ರಬುದ್ಧತೆ ಹೊಂದಿದ್ದರು. ಈ ಪ್ರಬುದ್ಧತೆಯ ಆಧಾರದಲ್ಲಿಯೇ ಅಂಬೇಡ್ಕರ್ ಅವರು ತಮ್ಮ ಬರಹಗಳ ಮೂಲಕ ಇಂದಿಗೂ ಜೀವಿಸುತ್ತಿದ್ದಾರೆ.
ಅಂಬೇಡ್ಕರ್ ಅವರು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಮಾನತೆಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧವಾದದ್ದು, ಹೀಗಾಗಿ ಬಸವಣ್ಣನವರು ಸಾಮಜಿಕ ಸುಧಾರಣೆಯ ಕುರಿತು ಜನರಿಗೆ ಅರಿವು ಮೂಡಿಸಿದರು. ಅದರೆ ಅಂಬೇಡ್ಕರ್ ಅವರು ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿವಾರಣೆ ಹಾಗೂ ಸಾಮಾಜಿಕ ಸುಧಾರಣೆಯ ಅಂಶಗಳನ್ನು ತಮ್ಮ ನಿಲುವುಗಳ ಮೂಲಕ ಜಾರಿಗೆ ತಂದು ದಮನಿತರಿಗೆ ನೆರವಾಗಿದ್ದಾರೆ ಎಂದರು.
ಬಳಿಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ಜಯಂತಿಗಳು ವೈಚಾರಿಕತೆಯ ಆಚರಣೆಯಾಗಬೇಕು. ಜೀವನದಲ್ಲಿ ಮಹತ್ವದ ಮೂರು ವ್ಯಕ್ತಿತ್ವಗಳಾದ ಬುದ್ಧ ವೈಚಾರಿಕ ಕ್ರಾಂತಿ, ಬಸವಣ್ಣನವರ ಸಾಮಾಜಿಕ ಕ್ರಾಂತಿ ಹಾಗೂ ಅಂಬೇಡ್ಕರ್ ಅವರ ಸಮಾನತೆಯ ಕ್ರಾಂತಿಯ ತತ್ವಗಳನ್ನ ಅಳವಡಿಸಿಕೊಳ್ಳಬೇಕು.
ಅಂಬೇಡ್ಕರ್ ಅವರು ಶೈಕ್ಷಣಿಕ ಶಕ್ತಿಯಿಂದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ಬುಹುದೊಡ್ಡ ಕ್ರಾಂತಿಯನ್ನ ಮಾಡಿದ್ದಾರೆ. ಹೀಗಾಗಿ ಇಂತಹ ಮಹನಿಯರನ್ನ ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡದೆ ಒಂದೇ ಭಾವನೆಯಿಂದ ಕಾಣುವ ಅಗತ್ಯವಿದೆ. ಅನ್ನ ಹಾಗೂ ಅಕ್ಷರ ಜ್ಞಾನಕ್ಕಾಗಿ ಅತೀ ಹೆಚ್ಚು ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ವೈಯಕ್ತಿಕವಾಗಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿಕೊಂಡಿದ್ದರು. ಈ ಗ್ರಂಥಾಲಯದಂತಹ ಗ್ರಂಥಾಲಯ ಯಾವ ಸರಕಾರಿ ಗ್ರಂಥಾಲಯವೂ ಇಲ್ಲ. ಜೊತೆಗೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮತ ಚಲಾಯಿಸುವ ಹಕ್ಕನ್ನು ನೀಡಿದ್ದು, ಪ್ರಸ್ತುತ ಕರ್ನಾಟಕ ವಿಧಾನಸಭಾ ಚುನಾವಣೆಯಿದ್ದು, ಪ್ರತಿಯೊಬ್ಬರೂ ಮೇ. 10 ರಂದು ತಪ್ಪದೇ ಮತದಾನ ಮಾಡುವ ಮೂಲಕ ಅಂಬೇಡ್ಕರ್ ಆಶಯವನ್ನ ಯಶಸ್ವಿಗೊಳಿಸಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಪ್ರಗತಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಂದ್ರಪ್ಪ ಬಕಾಯಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬುಜಗಜೀವನರಾಮ್ ರವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಡಾ. ಜಗಜೀವನ್ ರಾಮ ರವರ ಭಾವಚಿತ್ರವಿರುವ ರಥ ಯಾತ್ರೆಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ರೇಣುಕಾ ದೇವಿದಾಸ ರಾಯ್ಕರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್. ಎನ್, ಐಎಎಸ್ ಪ್ರೊಬೆಶನರಿ ಅಧಿಕಾರಿ ಜುಬಿನ್ ಮಹಪಾತ್ರ, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಪಿ. ಹೇಮಲತಾ, ತಹಶೀಲ್ದಾರ ಬಿ.ಜಿ. ಶ್ರೀನಿವಾಸ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ. ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.