ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ನಿರ್ಮಿಸಲು ಸ್ಥಳ ಗುರುತಿಸುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಭಿಕ್ಷಾಟನೆ ಸಂಪೂರ್ಣ ನಿಷೇಧಿಸಲಾಗಿದ್ದು ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಜಿಲ್ಲಾ ಮಟ್ಟದಲ್ಲಿ ನಿರ್ಮಿಸಲು ಕ್ರಮ ವಹಿಸಬೇಕು ಹಾಗೂ ಅದಕ್ಕಾಗಿ ಶೀಘ್ರ ಸ್ಥಳ ಗುರುತಿಸುವಂತೆ ಸೂಚಿಸಿದರು.
ಅಲ್ಲದೆ ನಿರಾಶ್ರಿತರ ಕಲ್ಯಾಣ ಸರ್ಕಾರದ ಆದ್ಯತೆಯಾಗಿದ್ದು ನಿಯಮಾನುಸಾರ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಭಿಕ್ಷುಕರ ಉಪಕರ ಕೂಡಲೆ ಬಿಡುಗಡೆಗೊಳಿಸಬೇಕೆಂದು ಸಚಿವರು ಸೂಚಿಸಿದರು.
ಸ್ಮಶಾನ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಸಂಬಂಧ ಈಗಾಗಲೇ ಸರ್ಕಾರ ಸಮುದಾಯದೊಂದಿಗೆ ಸಭೆ ನಡೆಸಿದೆ. ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಇರುವ ಸ್ಮಶಾನ ಹಾಗೂ ಸ್ಮಶಾನ ಕಾರ್ಮಿಕರ ಮಾಹಿತಿ ಪಟ್ಟಿಯನ್ನು ಶೀಘ್ರವೇ ಕಳಿಸುವಂತೆ ಸಚಿವರು ತಿಳಿಸಿದರು.
ಅಲ್ಲದೆ, ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ವಿತರಿಸುವ ಸಂಬಂಧ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಇರುವ ಸೌಲಭ್ಯಗಳನ್ನು ವಿತರಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ಡಾ.ಇ.ವೆಂಕಟಯ್ಯ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯಕ್, ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಆಯುಕ್ತ ಡಾ.ಕೆ.ರಾಕೇಶಕುಮಾರ್ ಮತ್ತಿತರರು ಉಪಸ್ಥಿತರಿದ್ದರು.