ಕಾರವಾರ : ಪರಿಸರ, ಜಲ, ಮಣ್ಣಿನ ಸಂರಕ್ಷಣೆಗೆ ಅಗತ್ಯವಿರುವ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಎರಡು ದಿನ ನಡೆಯುವ ತರಬೇತಿ ಕಾರ್ಯಗಾರದ ಸದುಪಯೋಗ ಪಡೆದುಕೊಂಡು ಎಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ವಿ. ರಾವ್ ಅಭಿಪ್ರಾಯ ಪಟ್ಟರು.
ಜಿಲ್ಲೆಯ ಸಿದ್ದಾಪುರ ತಾಲೂಕು ಪಂಚಾಯತ್ನ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದಡಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳ ಅನುಷ್ಠಾನಗೊಳಿಸಲು ಕೈಗೊಂಡ ತರಬೇತಿ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜಲಸಂಪನ್ಮೂಲಗಳ ರಕ್ಷಣೆಯಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮಾಡಬೇಕಿದೆ ಎಂದರು.
ಈ ವೇಳೆ ಮುಂಡಗೋಡ ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಟಿ ವಾಯ್. ದಾಸನಕೊಪ್ಪ ಮಾತನಾಡಿ, ನೆಲ, ಜಲ, ಹಸಿರು ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ವಿವಿಧ ಅನುಷ್ಠಾನ ಇಲಾಖೆಗಳ ಪಾತ್ರ ಏನಿದೆ ಎಂಬ ವಿಚಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇನ್ನೂ ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಡಿ. ಈ. ದಿನೇಶ ತರಬೇತಿಯಲ್ಲಿ ನೀಡಲಾಗುವ ಅಂಶಗಳನ್ನು ಪ್ರಾಯೋಗಿಕವಾಗಿ ಪ್ರಸ್ತುತ ಪಡಿಸಲು ಗ್ರಾಮ ಪಂಚಾಯತ್ ಗಳು ಸಿದ್ದರಾಗಲು ತಿಳಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ನರೇಗಾ ಸಹಾಯಕ ನಿರ್ದೇಶಕರಾದ ಮಂಜುನಾಥ ಆಗೇರ, ತಾಂತ್ರಿಕ ಸಂಯೋಜಕರಾದ ಮಹೇಶ ಪಟಗಾರ್, ಸುಮಿರ್ ಗಿರಫ್, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.