ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ವ್ಯಕ್ತಿ ಡಿ ದೇವರಾಜ ಅರಸು : ಸಚಿವ ಮಂಕಾಳ ವೈದ್ಯ

ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ವ್ಯಕ್ತಿ ಡಿ ದೇವರಾಜ ಅರಸು : ಸಚಿವ ಮಂಕಾಳ ವೈದ್ಯ

Mon, 21 Aug 2023 03:50:23  Office Staff   SO News

ಕಾರವಾರ : ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರಿಯಾಗಿಟ್ಟು ಜಾರಿಗೆ ತಂದ ಅನೇಕ ಯೋಜನೆಯಿಂದಾಗಿ‌ ಅರಸು ಅವರು ರಾಜ್ಯದ ಜನರ ಮನಸ್ಸಿನಲ್ಲಿ‌ ಅಚ್ಚಳಿಯದೆ ಉಳಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಪರಿಕಲ್ಪನೆಯನ್ನು ರಾಜ್ಯಕ್ಕೆ ನೀಡಿದ್ದಾರೆ.ಇಂತಹ ಆದರ್ಶ ವ್ಯಕ್ತಿಗಳು ನಮಗೆ ಸ್ಫೂರ್ತಿಯಾಗಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಹೇಳಿದರು.

ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ  ಆಯೋಜಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

ದೇಶ ಮತ್ತು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ದೀನ ದಲಿತರ  ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡು ಬಂದವರು, ಸಾಮಾನ್ಯ ಹಿಂದುಳಿದ ವರ್ಗಗಳಿಗೂ ಸಮಾನ ಶಿಕ್ಷಣವನ್ನು ದೊರಕುವಂತೆ ಮಾಡಿದವರು,  ರಾಜಕೀಯದಲ್ಲಿ, ಶಿಕ್ಷಣದಲ್ಲಿ, ಆರ್ಥಿಕತೆಯಲ್ಲಿ ಕೊರತೆಯಾಗದಂತೆ ಕಾಪಾಡಿಕೊಂಡು ಬಂದವರು. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸಂಪೂರ್ಣ ಸಹಾಯ ಸಹಕಾರ ಸಿಗುತ್ತಿದೆ ಎಂದರೆ ಅದರ ಸೃಷ್ಟಿಕರ್ತ ಡಿ ದೇವರಾಜ ಅರಸು ಎಂದು ಹೇಳಿದರು.

ಸಾಂಸ್ಕೃತಿಕ ಚಳುವಳಿಯ ನಾಯಕರಾಗಿ ಅವರು ಅನುಸರಿಸಿಕೊಂಡು ಬಂದ ಬದ್ಧತೆ ಮತ್ತು ತತ್ವ ಸಿದ್ದಾಂತಗಳು ಅವರನ್ನು ಮೇರು ಮಟ್ಟಕ್ಕೆ ಏರಿಸಿದೆ. ನಾಡು ಕಂಡ ಮತ್ಸದಿ ನಾಯಕ. ಅರಸು ಅವರು ನಾಡಿನ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಅವರು ಹೇಳಿದರು.

ದೇವರಾಜ ಅರಸು ಅವರು ನಾಡಿನ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಯೋಜನೆಗಳ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಸತೀಶ್ ಸೈಲ್ ಅವರು ಮಾತನಾಡಿ,  ಡಿ.ದೇವರಾಜ ಅರಸು ಅವರ‌ ಆದರ್ಶಗಳನ್ನು ಪ್ರತಿಯೊಬ್ಬರು‌ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ‌,    ಡಿ.ದೇವರಾಜ ಅರಸು  ಅವರು ಹಿಂದುಳಿದ, ಅಲ್ಪಸಂಖ್ಯಾತರ,  ದೀನ ದಲಿತರ ಏಳಿಗೆಗಾಗಿ  ತಮ್ಮ‌ ಜೀವನವನ್ನು ಮೂಡಿಪಾಗಿಟ್ಟ  ಧೀಮಂತ  ವ್ಯಕ್ತಿ. ಮೂಕ ಜನರ ಧ್ವನಿಯಾದ ಅವರು‌ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಬಾಳು ಸಮಪಾಲು ಎಂಬಂತೆ ಕಟ್ಟಾ ಕಡೆಯ ಜನರಿಗೂ ನ್ಯಾಯವನ್ನು  ಒದಗಿಸಲು ಹಲವರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ತಂದಿರುವ ಯೋಜನೆಗಳ ಮೂಲಕ ನಮಗೆ ಸಿಕ್ಕಿರುವ ಸೌಲಭ್ಯಗಳನ್ನು ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದು  ಹೇಳಿದರು.

ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿ ಕುಮಾರ ಸೋಮಲಿಂಗ ಬಿ ಬಾಳಿಕಾಯಿ   ಅವರು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ‌ ಮೊದಲು ನಗರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ  ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ  ಜಿಲ್ಲಾಧಿಕಾರಿ‌ ಗಂಗೂಬಾಯಿ‌ ಮಾನಕರ ಅವರು‌ ಚಾಲನೆ ನೀಡಿದರು.  ಮೇರವಣಿಗೆಯಲ್ಲಿ‌ ಡೊಳ್ಳು ಕುಣಿತ, ಸೇರಿದಂತೆ ಐದು ಪ್ರಕಾರದ ಕಲಾ ತಂಡಗಳು‌ ಭಾಗವಹಿಸಿದ್ದರು.


 ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ  ಈಶ್ವರ ಕುಮಾರ ಕಾಂದೂ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ, ತಹಶೀಲ್ದಾರ ನಿಶ್ಚಲ್ ನರೋನಾ, ಕರ್ನಾಟಕ ದಲಿತ ಸಂಘಟನೆ ಸಮಿತಿಯ ಜಿಲ್ಲಾ ಅಧ್ಯಕ್ಷ  ದೀಪಕ ಬಿ ಕುಡಾಳಕರ, ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ, ನಗರಸಭೆ ಸದಸ್ಯ ಹನುಮಂತಪ್ಪ ತಳವಾರ, ಅಂಬಿಗ ಸಮಾಜದ ಮುಖಂಡ ಬಾಲಾಜಿ ಅಂಬಿಗ, ಪ.ಜಾತಿ ಮತ್ತು ಪ. ಪಂಗಡ ನೌಕರ ಸಂಘದ ಅಧ್ಯಕ್ಷ  ಜಿ ಡಿ  ಮನೋಜ್, ವಿದ್ಯಾರ್ಥಿಗಳು ಇತರರು ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಸತೀಶ ಅವರು ಸ್ವಾಗತಿಸಿದರು. ಶ್ರೀಶೈಲ ಅವರು ನಿರೂಪಿಸಿದರು. ವೀಣಾ ನಾಯಕ  ವಂದಿಸಿದರು


Share: