ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಹಜ್ ಯಾತ್ರೆ ಸಬ್ಸಿಡಿ - ನಿಜಕ್ಕೂ ಲಾಭವಾಗುತ್ತಿರುವುದು ಯಾರಿಗೆ?

ಹೊಸದಿಲ್ಲಿ: ಹಜ್ ಯಾತ್ರೆ ಸಬ್ಸಿಡಿ - ನಿಜಕ್ಕೂ ಲಾಭವಾಗುತ್ತಿರುವುದು ಯಾರಿಗೆ?

Mon, 05 Oct 2009 02:46:00  Office Staff   S.O. News Service
ಹೊಸದಿಲ್ಲಿ, ಅ.4: ನಿಜಕ್ಕೂ ಹಜ್ಜ್ ಯಾತ್ರೆಗಾಗಿ ಮುಸ್ಲಿಂ ಯಾತ್ರಾರ್ಥಿಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದೆಯೇ? ಇಂತಹದೊಂದು ಪ್ರಶ್ನೆ ಈಗ ಮಹತ್ವವನ್ನು ಪಡೆದಿದೆ.

ಸರಕಾರ ವಾಸ್ತವದಲ್ಲಿ ಸಬ್ಸಿಡಿ ನೀಡುತ್ತಿರುವುದು ಏರ್‌ಇಂಡಿಯಾಕ್ಕೆ ಹೊರತು, ವೈಯಕ್ತಿಕವಾಗಿ ಹಜ್ಜ್ ಯಾತ್ರಿಕನಿಗಲ್ಲ ಎನ್ನುವುದು ಹಿರಿಯ ನಾಯಕರ ಅಭಿಪ್ರಾಯವಾಗಿದೆ. ೧೯೭೫ರಲ್ಲಿ ಹಜ್ಜ್ ಯಾತ್ರೆಯ ಏಕಸ್ವಾಮ್ಯತೆಯನ್ನು ಏರ್‌ಇಂಡಿಯಾ ಪಡೆದುಕೊಂಡಿದ್ದು, ತೈಲ ಬಿಕ್ಕಟ್ಟಿನಿಂದ ಹಡಗು ಪ್ರಯಾಣ ವಿಮಾನಕ್ಕಿಂತ ದುಬಾರಿಯಾದ ಹಿನ್ನೆಲೆಯಲ್ಲಿ ಸರಕಾರ ಏರ್‌ಇಂಡಿಯಾಕ್ಕೆ ಸಬ್ಸಿಡಿಯನ್ನು ನೀಡಿತು. ಇಂದಿಗೂ ಸಬ್ಸಿಡಿಯನ್ನು ಹಿಂದೆಗೆಯಲು ತೊಡಕಾಗಿರುವುದು ಏರ್‌ಇಂಡಿಯಾ ಆಗಿದೆ ಎನ್ನುವುದು ಈ ನಾಯಕರ ಅಭಿಪ್ರಾಯ.

ಮುಸ್ಲಿಂ ಶ್ರದ್ಧಾಳುಗಳನ್ನು ಹಜ್ಜ್ ಯಾತ್ರೆಗೆ ಕಳುಹಿಸುತ್ತಿರುವ ೧೦ ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ೧೯೬೦ರ ಆರಂಭದಲ್ಲಿ ಜಿದ್ದಾ ಆಗಿನ ಬಾಂಬೆಯೊಂದಿಗೆ ನೇರ ವಿಮಾನ ಸಂಪರ್ಕ ಹೊಂದಿದ್ದ ಕಾಲದಲ್ಲಿ, ಹೆಚ್ಚಿನ ಯಾತ್ರಿಕರು ಬ್ರಿಟಿಶ್ ನಿಯಂತ್ರಿತ ಮೊಗುಲ್ ಲೈನ್ ಲಿ. ಸಂಸ್ಥೆಯ ಹಡಗುಗಳಲ್ಲಿ ಮಕ್ಕಾ ಯಾತ್ರೆಗೆ ಹೋಗುತ್ತಿದ್ದರು. ೧೯೭೫ರಲ್ಲಿ ಭಾರತದ ನೌಕಾ ನಿಗಮವು ಈ ಸಂಸ್ಥೆಯ ಒಡೆತನ ಪಡೆಯಿತು. ೧೯೭೦ರ ಆರಂಭದ ತೈಲ ಬಿಕ್ಕಟ್ಟಿನಿಂದಾಗಿ ಹಡಗು ಪ್ರಯಾಣವು ವಿಮಾನಕ್ಕಿಂತಲೂ ದುಬಾರಿಯಾಯಿತು. ಆದುದರಿಂದ ಹಡಗುಗಳ ಪ್ರಯಾಣ ರದ್ದಾಯಿತು. ಅದರ ಬದಲು ಭಾರತ ಸರಕಾರವು ೧೯೭೫ರಲ್ಲಿ ಏರ್ ಇಂಡಿಯಾಕ್ಕೆ ಹಜ್ಜ್ ಯಾತ್ರೆಯ ಏಕಸ್ವಾಮ್ಯವನ್ನು ನೀಡಿತು. ಮುಂದುವರಿದ ತೈಲ ಬಿಕ್ಕಟ್ಟು ಹಜ್ಜ್ ಯಾತ್ರೆ ಯನ್ನು ಇನ್ನಷ್ಟು ದುಬಾರಿ ಗೊಳಿಸಿದ ಕಾರಣ ಸರಕಾರವು ಏರ್ ಇಂಡಿ ಯಾಕ್ಕೆ ‘ಹಜ್ಜ್ ಸಬ್ಸಿಡಿ’ ನೀಡತೊಡಗಿತು.

ಇದು ಏರ್ ಇಂಡಿಯಾಕ್ಕೆ ಹೊರತು ಹಜ್ಜ್ ಯಾತ್ರಿಕನಿಗೆ ವೈಯಕ್ತಿಕವಾಗಿಯಲ್ಲ. ಸರಕಾರ ಏರ್ ಇಂಡಿಯಾಕ್ಕೆ ನೀಡಿರುವ ಏಕಸ್ವಾಮ್ಯವನ್ನು ರದ್ದುಪಡಿಸಿ, ಕೇಂದ್ರೀಯ ಹಜ್ಜ್ ಸಮಿತಿಯ ಮೂಲಕ ದೇಶದ ವಿವಿಧ ವಿಮಾನ ಸಂಸ್ಥೆಗಳಿಂದ ಹಜ್ಜ್ ಯಾತ್ರೆ ಆಯೋಜಿಸಲು ಟೆಂಡರ್ ಆಹ್ವಾನಿಸಿ, ಕಡಿಮೆ ಮೊತ್ತ ನಮೂದಿಸುವ ಸಂಸ್ಥೆ ಯನ್ನು ಹಜ್ಜ್ ಯಾತ್ರಿಕರನ್ನೊಯ್ಯುವ ಅಧಿಕೃತ ಸಂಸ್ಥೆಯೆಂದು ಮಾನ್ಯತೆ ನೀಡ ಬೇಕು ಆಗ ಮಾತ್ರ ಈ ಸಮಸ್ಯೆ ಪರಿಹಾರವಾಗಲು ಸಾಧ್ಯ. ಏರ್ ಇಂಡಿಯಾಕ್ಕೆ ನಿಜವಾಗಿ ಹಜ್ಜ್ ಸಬ್ಸಿಡಿ ನೀಡುತ್ತಿರುವವರು ಯಾರು? ವಿದೇಶಾಂಗ ಸಚಿವಾಲಯವೇ ಅಥವಾ ನಾಗರಿಕ ವಿಮಾನಯಾನ ಸಚಿವಾಲಯವೇ? ಅದರ ನಿರ್ದಿಷ್ಟ ಮೊತ್ತವೆಷ್ಟು? ಅದು ಪ್ರತಿ ವರ್ಷ ಬದಲಾಗುತ್ತದೆಯೇ? ಇದು ವಿವರಣೆಯ ವಿಚಾರವಾಗಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಕೇಂದ್ರ ಸರಕಾರವು ಮುಸ್ಲಿಮರಿಗೆ ಹಜ್ಜ್ ಯಾತ್ರೆ ಕೈಗೊಳ್ಳಲು ನೀಡುತ್ತಿರುವ ಅಸಂಬದ್ಧ ಸಹಾಯ ಧನವು ಈಗಾಗಲೇ ದಮನಿತ ಮತ್ತು ತುಷ್ಟೀಕರಣ ಆರೋಪವನ್ನು ಎದುರಿಸುತ್ತಿರುವ ಸಮುದಾಯಕ್ಕೆ ಇನ್ನಷ್ಟು ಹಾನಿಯನ್ನು ಮಾಡಿದೆ. 

ಸೈಯದ್ ಶಹಾಬುದ್ದೀನ್‌ರಂತಹ ಹಿರಿಯ ಮುಸ್ಲಿಂ ನಾಯಕ ಹಾಗೂ ಹೈದರಾಬಾದ್‌ನ ಯುವ ಲೋಕಸಭಾ ಸದಸ್ಯ ಅಸಾದುದ್ದೀನ್ ಉವೈಸಿ ಈ ಸಬ್ಸಿಡಿಯನ್ನು ರದ್ದುಪಡಿಸಬೇಕೆಂಬ ಸಮುದಾಯದ ಅಭಿಪ್ರಾಯವನ್ನು ಪ್ರಕಟಪಡಿಸಿದ್ದಾರೆ. ಹಜ್ಜ್ ಸಬ್ಸಿಡಿಯನ್ನು ರದ್ದುಪಡಿಸುವಲ್ಲಿ ಸಂಪೂರ್ಣ ತೊಡಕು ಏರ್ ಇಂಡಿಯಾದಿಂದಾಗುತ್ತಿದೆ. ಭಾರತ ಸರಕಾರ ಮುಸ್ಲಿಂ ಯಾತ್ರೆಯಲ್ಲಿ ಒಳಗೊಂಡಿರುವ ಇನ್ನೊಂದು ವಿಷಯವೆಂದರೆ ‘ಹಜ್ಜ್ ಸ್ನೇಹ ನಿಯೋಗ’. ಇದು ೧೯೬೫ರ ಪಾಕಿಸ್ತಾನ ಯುದ್ಧದ ಬಳಿಕ ಆರಂಭವಾಗಿದೆ. ಹಜ್ಜ್ ಯಾತ್ರೆಯ ಸಂದರ್ಭವನ್ನು ಪಾಕಿಸ್ತಾನದ ಪ್ರತಿನಿಧಿಗಳು ಕಾಶ್ಮೀರ ಬಿಕ್ಕಟ್ಟಿನ ಕುರಿತಾದ ತಮ್ಮ ಅಭಿಪ್ರಾಯವನ್ನು ಅಂತಾರಾಷ್ಟ್ರೀಯ ಮುಸ್ಲಿಂ ಸಮುದಾಯದ ಮುಂದಿಡಲು ಬಳಸಿಕೊಂಡರು. ಭಾರತದ ವಿದೇಶಾಂಗ ಸಚಿವಾಲಯವು ‘ಹಜ್ಜ್ ಸ್ನೇಹ ನಿಯೋಗವನ್ನು’ ಸರಕಾರದ ಖರ್ಚಿನಲ್ಲಿ ಮಕ್ಕಾಕ್ಕೆ ಕಳುಹಿಸುವ ಮೂಲಕ ಪಾಕಿಸ್ತಾನದ ಈ ಪ್ರಯತ್ನವನ್ನು ತಡೆಯಲು ನಿರ್ಧರಿಸಿತು. ೧೯೬೬ರಲ್ಲಿ ಆರಂಭವಾದ ಈ ನಿಯೋಗದ ನೇತೃತ್ವವನ್ನು ಕೇಂದ್ರ ಸಚಿವರೊಬ್ಬರು ವಹಿಸುತ್ತಿದ್ದು, ಅವರಿಂದ ಈ ನಿಯೋಗ ಸಂಪೂರ್ಣ ದುರುಪಯೋಗವಾಗುತ್ತಿದೆ ಎನ್ನುವುದು ಆರೋಪವಾಗಿದೆ. ಅವರು ತನ್ನ ಸೌದಿ ಸೋದ್ಯೋಗಿ ಮತ್ತಿತರರನ್ನು ಭೇಟಿಯಾಗಲು ಈ ಸ್ನೇಹ ನಿಯೋಗವನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.

ಸ್ನೇಹ ಉದಿಸಲೇ ಇಲ್ಲ: ಈ ಸ್ನೇಹನಿಯೋಗದಲ್ಲಿ ಐವರು ಸದಸ್ಯರಿದ್ದರು. ಆದರೆ ಈಗ ಅವರ ಸಂಖ್ಯೆ ಸದಸ್ಯರ ಹೆಂಡಂದಿರು ಸೇರಿ ೭೦ಕ್ಕೇ ತಲುಪುತ್ತದೆ. ಅಧಿಕಾರ ಶಾಹಿಗಳು, ಸಂಸದರು ಹಾಗೂ ಸಚಿವರೇ ಈ ಹಜ್ಜ್ ನಿಯೋಗದ ಆಕಾಂಕ್ಷಿಗಳಲ್ಲಿ ಸೇರಿರುತ್ತಾರೆ. ಇವರಲ್ಲಿ ಹೆಚ್ಚಿನವರು ಸ್ವಘೋಷಿತ ರಾಜಕೀಯ ಪುಢಾರಿಗಳು, ಪ್ರಭಾವಿಗಳು ಇದ್ದು, ತೆರಿಗೆದಾರರ ಹಣದಲ್ಲಿ ಪುಕ್ಕಟೆ ಯಾತ್ರೆ ಮಾಡಲು ಬಯಸುವವರಾಗಿರುತ್ತಾರೆ. ಈ ವರ್ಷ ಸರಕಾರವು ಈ ನಿಯೋಗದ ಪ್ರಯಾಣ, ವಾಸ್ತವ್ಯ ಹಾಗೂ ಆಕಸ್ಮಿಕ ಖರ್ಚು ಗಳಿಗಾಗಿ ರೂ. ೬ ಕೋಟಿಯನ್ನು ತೆಗೆದಿರಿಸಿದೆ. ಈ ಅಧಿಕೃತ ಹಜ್ಜ್ ನಿಯೋಗವು ಜಿದ್ದಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹೊರೆಯಾಗಿದ್ದು, ಹಜ್ಜ್ ಯಾತ್ರಿಕರ ಸುಖ-ಕಷ್ಟ ವಿಚಾರಿಸುವ ಪ್ರಾಥಮಿಕ ಹೊಣೆಯೊಂದಿಗೆ ನಿಯೋಗದ ಬೇಕು-ಬೇಡಗಳನ್ನೂ ಗಮನಿಸಬೇಕಾಗುತ್ತದೆ. ಮುಸ್ಲಿಂ ನಾಯಕರೆಮದು ಪೋಸು ಕೊಡುವ ಈ ಪ್ರಬಲ ರಾಜಕಾರಣಿಗಳನ್ನು ನಿಭಾಯಿಸುವುದೇ ರಾಯಭಾರ ಕಚೇರಿಗೆ ತಲೆ ನೋವಿನ ಸಂಗತಿಯಾಗಿದ್ದು, ಅದು ಈ ಹಜ್ಜ್ ಸ್ನೇಹ ನಿಯೋಗವನ್ನು ರದ್ದುಪಡಿಸಬೇಕೆಂದು ಆಗ್ರಹಿಸುತ್ತಿದೆ. ಕಾಶ್ಮೀರ ಬಿಕ್ಕಟ್ಟಿನ ಕುರಿತ ಪಾಕಿಸ್ತಾನದ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ಎದುರಿಸಲು ಬೇರೆ ಪರಿಣಾಮಕಾರಿ  ದಾರಿಯನ್ನರಸಬೇಕಾಗಿದೆ. ಸ್ನೇಹ ನಿಯೋಗವು ಭಾರತೀಯ ಮುಸ್ಲಿಮರಿಗೆ ಸ್ನೇಹ ನಿಯೋಗವಾಗಿ ಉಳಿದಿಲ


Share: