ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಚಾಮರಾಜಪೇಟೆ ಈದ್ಗಾ ಮೈದಾನದದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಆದೇಶ ಹೊರಡಿಸಿದೆ.
ಈದ್ಗಾ ಮೈದಾನದ ಮಾಲಕತ್ವ ಕುರಿತು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ವಿಭಾಗಿಯ ನ್ಯಾಯಪೀಠ, ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ.
ಅಲ್ಲದೆ, ಗಣೇಶೋತ್ಸವ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರವನ್ನು ರಾಜ್ಯ ಸರಕಾರದ ವಿವೇಚನೆಗೆ ಬಿಟ್ಟಿದೆ. ಆ.31ರಿಂದ ನಿರ್ದಿಷ್ಟ ಅವಧಿಗೆ ಹೈಕೋರ್ಟ್ ಅನುಮತಿ ನೀಡಿದೆ. ಆ.25ರಂದೇ ಈ ಕೇಸ್ನ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವದ ವೇಳೆ ರಾಷ್ಟ್ರ ಧ್ವಜಾರೋಹಣ, ಮಕ್ಕಳ ಆಟಕ್ಕೆ ಅವಕಾಶ, ಮುಸ್ಲಿಮ್ ಹಬ್ಬಗಳ ವೇಳೆ ಪ್ರಾರ್ಥನೆಗೆ ಅವಕಾಶವನ್ನಷ್ಟೇ ನೀಡಲು ಆದೇಶಿಸಿದ್ದರು.
ಕೆಲವು ದಿನಗಳ ಹಿಂದಷ್ಟೇ ಚಾಮರಾಜಪೇಟೆ ಈದ್ಗಾ ಮೈದಾನದ ಆಸ್ತಿ ವಿವಾದ ಬಗೆಹರಿದಿತ್ತು. ರಾಜ್ಯ ವಕ್ಸ್ ಬೋರ್ಡ್ಗೆ ಸೇರಿದ ಆಸ್ತಿ ಎಂಬ ವಾದ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿದ ಬಿಬಿಎಂಪಿ, ಈ ಆಸ್ತಿಯು ಕಂದಾಯ ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿತ್ತು. ಈ ನಡುವೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಈದ್ಗಾ ಮೈದಾನದಲ್ಲಿ ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವಕ್ಕೆ ಮಾತ್ರ ಅವಕಾಶ ನೀಡುವುದಾಗಿ ಹೇಳಿದ್ದರು.