ಭಟ್ಕಳ: ಭಟ್ಕಳದ ಶಹರ ಠಾಣೆಯಲ್ಲಿ ನಿನ್ನೆ ಮಧ್ಯಾಹ್ನ ಅಂತರಾಷ್ಟ್ರೀಯ ಕರ್ಕಷ ಶಬ್ದ ರಹಿತ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ ಪಿ ಐ ಗುರು ಮತ್ತೂರು ಪ್ರಸ್ತುತ ದಿನಗಳಲ್ಲಿ ಶಬ್ದ ಮಾಲಿನ್ಯವೂ ಒಂದು ಸಮಸ್ಯೆಯಾಗಿದ್ದು, ಅದನ್ನು ಹೋಗಲಾಡಿಸುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಮಿತಿಗಿಂತ ಹೆಚ್ಚು ಶಬ್ದ ಉಂಟು ಮಾಡುವುದು ಸರಿಯಲ್ಲ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದ ಅವರು ಸಾರ್ವಜನಿಕರು ಲೌಡ್ಸ ಸ್ಪೀಕರಗಳನ್ನು ಉಪಯೋಗಿಸುವಾಗ ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಉಪಯೋಗಿಸಬೇಕು. ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಬಾರದು. ವಾಹನಗಳ ಚಾಲಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಆದಷ್ಟು ಶಬ್ದ ಮಾಲಿನ್ಯವನ್ನು ಕಡಿಮೆಗೊಳಿಸಲು ಪ್ರಯತ್ನಿಸಬೇಕು. ದೊಡ್ಡ ಹಾಗೂ ಕರ್ಕಷ ಶಬ್ದಗಳನ್ನು ಮಾಡುವ ಹಾರ್ನಗಳನ್ನು ವಾಹನಗಳಿಗೆ ಅಳವಡಿಸುವುದು ನಿಯಂತ್ರಿಸಬೇಕಿದೆ. ಶಬ್ದ ಮಾಲಿನ್ಯದ ಕುರಿತು ಸಾರ್ವಜನಿಕರು ಸೇರಿದಂತೆ ಶಾಲಾ,ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಲಾಗಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಉಪಸ್ಥಿತರಿದ್ದ ರಿಕ್ಷಾ ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ಕೆಲವು ವಾಹನಗಳಿಗೆ ಪೋಕಸ್ ಲೈಟುಗಳನ್ನು ಹಾಕಿಕೊಂಡ ಓಡಿಸುವುದರಿಂದ ತೊಂದರೆಯಾಗುತ್ತಿದೆ. ಯಾವುದೇ ವಾಹನಗಳಿಗೂ ಹೆಚ್ಚು ಪೋಕಸ್ ನೀಡುವ ಲೈಟುಗಳನ್ನು ಅಳವಡಿಸಲು ಅವಕಾಶ ನೀಡಬಾರದು ಎಂದ ಅವರು ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ವಾಹನಗಳು ಸಂಚರಿಸುವುದೇ ಕಷ್ಟವೆನಿಸಿದೆ. ಮಳೆಗಾಲದಲ್ಲಿ ರಸ್ತೆ ಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ರಿಪೇರಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ನಾವು ಸಾರ್ವಜನಿಕರ ಒಡಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಿಕ್ಷಾ ಸಂಘದ ಉಪಾಧ್ಯಕ್ಷ ನಾಯ್ಕ ಮಾತನಾಡಿ ಮೀನುಲಾರಿಗಳು ಮೀನು ನೀರನ್ನು ರಸ್ತೆಯ ಮೇಲೆ ಚೆಲ್ಲುವುದರಿಂದ ದುರ್ವಾಸನೆ ಬೀರಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಂಜೀಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್ ಜೆ ಖಾಲೀದ್, ರಿಕ್ಷಾ ಸಂಘದ ಅಧ್ಯಕ್ಷ ನಾಗರಾಜ ಹೆಗಡೆ, ರಿಕ್ಷಾ ಸಂಘದ ಪದಾಧಿಕಾರಿಗಳು, ಟೆಂಪೋ ಚಾಲಕರ ಮಾಲಕರ ಸಂಘದವರು, ಟ್ಯಾಕ್ಸಿ ಚಾಲಕ ಮಾಲಕರ ಸಂಘದವರು ಉಪಸ್ಥಿತರಿದ್ದರು. ಶಹರ ಠಾಣೆಯ ಅಪರಾಧ ಎಸೈ ಉಮೇಶ ಕಾಂಬಳೆ ಸ್ವಾಗತಿಸಿದರೆ, ಎಸೈ ಕೆ ಪಿ ಕರ್ನಿಂಗ್ ವಂದಿಸಿದರು.