ಭಟ್ಕಳ: ಒಂದು ವರ್ಷದ ಅವಧಿಗೆ ಟೆಂಡರ್ ಕರೆದು, ನಿರ್ವಹಿಸಲಾಗುವ ಭಟ್ಕಳ ಪುರಸಭಾ ವ್ಯಾಪ್ತಿಯ ಬೀದಿದೀಪ ನಿರ್ವಹಣೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವು ಸದಸ್ಯರ ಅಸಮಾಧಾನದ ನಡುವೆಯೂ, ಟೆಂಡರ್ ಅವಧಿಯನ್ನು ಮತ್ತೆ 2 ತಿಂಗಳು ಅವಧಿಗೆ ವಿಸ್ತರಣೆ ಮಾಡುವ ಬಗ್ಗೆ ಗುರುವಾರದ ಪುರಸಭಾ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ, ಕೃಷ್ಣಾನಂದ ಪೈ, ಶ್ರೀಕಾಂತ ನಾಯ್ಕ, ಶ್ರೀಪಾದ ಕಂಚುಗಾರ ಮತ್ತಿತರರು, ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿದೀಪ ಸೌಕರ್ಯ ಬಹಳ ಹದಗೆಟ್ಟಿದೆ. ಟೈಮರ್ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದ ಪುರಸಭೆಯಲ್ಲಿ ಕನಿಷ್ಠ ಒಂದು ಸ್ವಿಚ್ ಹಾಕಲೂ ಸಾಧ್ಯವಾಗುತ್ತಿಲ್ಲ. ವಿದ್ಯುತ್ ನಿರ್ವಹಣೆ ಕಾಮಗಾರಿಯ ಗುತ್ತಿಗೆ ಪಡೆದಿರುವವರು, ಪುರಸಭೆಯ ಯಾವುದೇ ಸದಸ್ಯರ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಅಭಿಯಂತರ ಉಮೇಶ ಮಡಿವಾಳ, ಪುರಸಭಾ ಬೀದಿದೀಪ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸದಾಗಿ ಟೆಂಡರ್ ಕರೆಯಲಾಗಿದ್ದು, ಮೂವರು ಬಿಡ್ ಸಲ್ಲಿಸಿದ್ದಾರೆ. ಇವರಲ್ಲಿ ಇಬ್ಬರು ಅನರ್ಹರಾಗಿದ್ದು, ಅರ್ಹ ಗುತ್ತಿಗೆದಾರರಿಗೆ ಟೆಂಡರ್ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಬಗ್ಗೆ ಮಾತನಾಡಲು ಎದ್ದು ನಿಂತ ಉಪಾಧ್ಯಕ್ಷ ಕೈಸರ್ ಮೊತೇಶಮ್, ಇಲ್ಲಿಯವರೆಗೆ ಬೀದಿದೀಪ ನಿರ್ವಹಣೆ ಕಾಮಗಾರಿಯನ್ನು ನಡೆಸಿಕೊಂಡು ಬಂದ ಗುತ್ತಿಗೆದಾರರಿಗೆ ಪುರಸಭೆಯಿಂದ ನಿಗದಿತ ಕಾಲಾವಧಿಯಲ್ಲಿ ಬಿಲ್ ಪಾವತಿಯಾಗಿಲ್ಲ. ಕಳೆದ 4-5 ತಿಂಗಳಿನಿಂದ ಬಿಲ್ ಬಾಕಿ ಇರಿಸಿಕೊಳ್ಳಲಾಗಿದೆ. ಇದರಿಂದ ಗುತ್ತಿಗೆದಾರರಿಗೆ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದೇ ಗುತ್ತಿಗೆದಾರರು ಮತ್ತೆ ಹೊಸ ಟೆಂಡರ್ನಲ್ಲಿ ಭಾಗವಹಿಸಿದ್ದು, ಈಗಾಗಲೇ ನಿರ್ವಹಿಸಿದ ಕಾಮಗಾರಿಯ ಒಟ್ಟೂ ಮೊತ್ತವನ್ನು ಆಧರಿಸಿ ಈಗಿನ ಟೆಂಡರ್ಗೆ ಅನರ್ಹ ಎಂದು ತಿರಸ್ಕರಿಸಲಾಗಿದೆ. ಆದರೆ ಇಲ್ಲಿಯವರೆಗೆ ಮಾಡಿದ ಕಾಮಗಾರಿಯ ಒಟ್ಟೂ ಬಿಲ್ ಪಾವತಿಸಿದರೆ ಟೆಂಡರ್ ನಿಯಮದಂತೆ ಅವರು ಅರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ.
ಆದ್ದರಿಂದ ಬಾಕಿ ಇರುವ ಬಿಲ್ ಅನ್ನು ಪಾವತಿಸಿ ಮತ್ತೆ 3 ತಿಂಗಳು ಟೆಂಡರ್ ಅವಧಿಯನ್ನು ಅದೇ ಗುತ್ತಿಗೆದಾರರಿಗೆ ವಿಸ್ತರಿಸಿ ನೀಡಬೇಕು ಎಂದು ಗುತ್ತಿಗೆದಾರರ ಪರ ಸಮರ್ಥನೆಗೆ ನಿಂತರು.
ಈ ನಡುವೆ ಸದಸ್ಯ ಫಾಸ್ಕಲ್, ಒಂದು ಬಲ್ಬ್ ಅಳವಡಿಸಬೇಕಾಗಿದ್ದರೂ ಅಧ್ಯಕ್ಷರನ್ನು ಕೇಳಿ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಕೆಲ ಸದಸ್ಯರು ದನಿಗೂಡಿಸಿದರು.
ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಅಧ್ಯಕ್ಷ ಫರ್ವೇಜ್ ಕಾಶೀಮ್ಜಿ, ಈ ಹಿಂದೆ ಬೀದಿ ದೀಪ ಟೆಂಡರ್ ಪಡೆದ ಗುತ್ತಿಗೆದಾರರು, ಇಂದೇ ಕಾಮಗಾರಿಯ ಬಗ್ಗೆ ಬಿಲ್ ದಾಖಲೆಗಳನ್ನು ಪುರಸಭೆಗೆ ಒದಗಿಸಿದ್ದಾರೆ. ಬಿಲ್ ನೀಡಿದ ಒಂದೆರಡು ಗಂಟೆಗಳಲ್ಲಿ ಪರಿಶೀಲಿಸಿ ಹಣ ಪಾವತಿಸಲು ಸಾಧ್ಯವೇ, ಸಾಲದೆಂಬಂತೆ ಬಲ್ಬ್, ಸ್ವಿಚ್ ಕೇಳಿದರೂ ಅಧ್ಯಕ್ಷರ ಹೆಸರನ್ನು ಹೇಳಿಕೊಂಡು ತಿರುಗುತ್ತಿದ್ದಾರೆ.
ಬಲ್ಬ್ ಹಾಕಲು ಅಧ್ಯಕ್ಷರ ಅನುಮತಿ ಏಕೆ, ಇದು ಕೇವಲ ಪುರಸಭೆ ಹಾಗೂ ಅಧ್ಯಕ್ಷರ ಹೆಸರನ್ನು ಹಾಳು ಮಾಡುವ ಕುತಂತ್ರವಾಗಿದೆ. ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಪುರಸಭಾ ಸದಸ್ಯರ ಸಲಹೆಯಂತೆ ಸದರಿ ಗುತ್ತಿಗೆದಾರರಿಗೆ 2 ತಿಂಗಳ ಅವಧಿಗೆ ವಿಸ್ತರಣೆ ಮಾಡಿಕೊಡಲಾಗುವುದು, ಈ ರಿಯಾಯಿತಿ ಉಳಿದ ಯಾವುದೇ ನಿರ್ವಹಣಾ ಕಾಮಗಾರಿಯ ಟೆಂಡರ್ಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.
ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಇಮ್ಶಾದ್, ಪ್ರಭಾರ ಮುಖ್ಯಾಧಿಕಾರಿ ದಯಾನಂದ ದೇಸಾಯಿ, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ಉಪಸ್ಥಿತರಿದ್ದರು.