ಬೈಂದೂರು : ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕಿದ್ದು, ಕಳಪೆ ಕಾಮಗಾರಿ ನಡೆಸಿದ್ದು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಜೆಟ್ಟಿ ಕುಸಿತದಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ ಆದಷ್ಟು ಶೀಘ್ರ ಜೆಟ್ಟಿ ಪುನರ್ ನಿರ್ಮಾಣ ಮಾಡಲು ಸರಕಾರ ಕ್ರಮಕೈಗೊಳ್ಳಲಿದೆ.
ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಬೇರೆ ಬೇರೆ ಯೋಜನೆಗಳು ಬಂದಾಗ ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಂಡ ಬಳಿಕವಷ್ಟೇ ಬೇರೆ ಬೇರೆ ಬಂದರುಗಳಿಗೆ ಅನುದಾನ ನೀಡಲಾಗುತ್ತಿದೆ ಎಂದ ಅವರು, ಪುಣೆಯ ಸಿಡಬ್ಲ್ಯುಪಿಆರ್ಎಸ್ ಸಂಸ್ಥೆಯ ಬದಲು ಬೆಂಗಳೂರಿನ ಖಾಸಗಿ ಸಂಸ್ಥೆಯವರು ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯ ವಿನ್ಯಾಸ ಮಾಡಿದ ಬಗ್ಗೆ ಕೇಳಿ ಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ವಿವಿಧ ಸಂಸ್ಥೆಗಳು ಬೇರೆ ಬೇರೆ ತಾಂತ್ರಿಕತೆ ಬಗ್ಗೆ ವಿನ್ಯಾಸ ನೀಡುತ್ತಿದ್ದು, ವಿನ್ಯಾಸದಲ್ಲಿ ಲೋಪ ಕಂಡು ಬಂದಲ್ಲಿ ಕ್ರಮಕೈಗೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸರಕಾರ ಬದ್ಧ ಎಂದುತ್ತರಿಸಿದರು.
ಗಂಗೊಳ್ಳಿಯಲ್ಲಿ ೧೨ ಕೋ. ರೂ. ವೆಚ್ಚದ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯಲ್ಲಿ ೧೦ ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಯಾವ ಹಂತದಲ್ಲಿ ಎಷ್ಟೆಷ್ಟು ಬಿಲ್ಲು ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಪಡೆದುಕೊಂಡು ಲೋಪವಾಗಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಜೆಟ್ಟಿ ಕುಸಿತವನ್ನು ಲೋಕಾಯುಕ್ತ ತನಿಖೆ ನಡೆಸಬೇಕೆಂಬ ಸ್ಥಳೀಯ ಮೀನುಗಾರರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ಈ ಬಗ್ಗೆ ಇಲಾಖಾಧಿಕಾರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಂಜಿನಿಯರ್ ಶ್ರೀನಿವಾಸ ಮೂರ್ತಿ, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಪಿ.ನಾಗರಾಜ್, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಉದಯಕುಮಾರ್, ಸುಮಲತಾ, ದಿವಾಕರ ಖಾರ್ವಿ, ಉಪನಿರ್ದೇಶಕ ಕುಮಾರಸ್ವಾಮಿ, ಮೀನುಗಾರ ಸಂಘಟನೆಗಳ ಮುಖಂಡರು, ಮೀನುಗಾರರು ಉಪಸ್ಥಿತರಿದ್ದರು.