ಉಡುಪಿ : ಎಲ್ಲರಿಗೂ ರೇಷನ್ ಯಾಕೆ ಸಾಧ್ಯವಾಗುತ್ತಿಲ್ಲ
ಬೆಲೆ ಏರಿಕೆ ವಿರುದ್ಧ ಆಹಾರದ ಹಕ್ಕಿಗಾಗಿ ಜನವರಿ 21 ಮತ್ತು 22 ರಂದು ಉಡುಪಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹೋರಾಟ ನಡೆಸಲಾಯಿತು. ಈ ಮುತ್ತಿಗೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಬಂಧನಕ್ಕೊಳಗಾದರು. ಮುತ್ತಿಗೆಯಲ್ಲಿ ಭಾಗವಹಿಸಿದ ಪಕ್ಷದ ಸದಸ್ಯರು, ಕಾರ್ಮಿಕರು, ಸಾರ್ವಜನಿಕರನ್ನು ಉದ್ದೇಶಿಸಿ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಾಂ.ಕೆ.ಶಂಕರ್, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕಾಂ.ಪಿ.ವಿಶ್ವನಾಥ ರೈ ಮತ್ತು ಅದಮಾರು ಶ್ರೀಪತಿ ಆಚಾರ್ಯ ಇವರು ಮಾತನಾಡುತ್ತಾ ಭಾರತ ಮತ್ತು ಚೀನಾ ದೇಶಗಳಲ್ಲಿ ಜನರು ಮಿತಿಮೀರಿ ಆಹಾರ ತಿನ್ನುವುದರಿಂದ ಪ್ರಪಂಚದಲ್ಲಿ ಆಹಾರದ ಕೊರತೆ ಉಂಟಾಗಿದೆ ಎಂದು ಅಮೇರಿಕಾದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದರು. ಆದರೆ ಅದೇ ಅಮೇರಿಕಾ ಮತ್ತು ಪಶ್ಚಿಮದ ಶ್ರೀಮಂತ ರಾಷ್ಟ್ರಗಳು ಜನರು ತಿನ್ನುವ ಆಹಾರ ವಸ್ತುಗಳನ್ನೇ ಉಪಯೋಗಿಸಿ ಇಥೇನಾಲ್ ತಯಾರಿಸಿ ಇಂಧನವಾಗಿ ಉಪಯೋಗಿಸುತ್ತಾರೆ. ಆಹಾರ ವಸ್ತುಗಳು ಬೆಳೆಯುವ ಸ್ಥಳದಲ್ಲಿ ಇಂಧನಕ್ಕಾಗಿ ಜತ್ರೋಪ ಎಂಬ ಸಸ್ಯ ಬೆಳೆಸುತ್ತಾರೆ. ವಿಪರೀತ ಮಾಂಸ ಭಕ್ಷಣೆ ಮಾಡುವ ಈ ರಾಷ್ಟ್ರಗಳಲ್ಲಿ ಮಾಂಸದ ಪ್ರಾಣಿಗಳಿಗೆ ಮನುಷ್ಯರು ತಿನ್ನುವ ಆಹಾರ ವಸ್ತುಗಳನ್ನೇ ತಿನ್ನಿಸುತ್ತಾರೆ. ಇದರಿಂದಾಗಿ ಪ್ರಪಂಚದಲ್ಲಿ ಮನುಷ್ಯರು ತಿನ್ನುವ ಆಹಾರಗಳ ಕೊರತೆ ಉಂಟಾಗಿದೆ.
ಭಾರತದಲ್ಲಿ ಹಿಂದಿನ ಎನ್.ಡಿ.ಎ ಸರಕಾರ ಫ್ಯೂಚರ್ ಟ್ರೇಡಿಂಗ್ನಂತಹ ಕಾನೂನು ತಂದುದರಿಂದ ಇದರ ಪ್ರಯೋಜನ ಪಡೆದು ಕೆಲವು ಕಂಪನಿಗಳು ರೈತರು ಬೆಳೆದ ಬೆಳೆಯನ್ನು ಕಟಾವಿಗಿಂತ ಮೊದಲೇ ಕಡಿಮೆ ಬೆಲೆಗೆ ವಿಕ್ರಯಿಸಿ ಸಂಗ್ರಹ ಮಾಡಿ ಬೆಲೆ ಏರುವಂತೆ ಮಾಡುತ್ತಿದ್ದಾರೆ. ಆಹಾರ ಧಾನ್ಯಗಳ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲೀ ಕ್ರಮ ಕೈಗೊಳ್ಳದೆ ಕಾಳಸಂತೆಕೋರರಿಗೆ ಅನುಕೂಲ ಮಾಡಿಕೊಟ್ಟಿದೆ. ಕರ್ನಾಟಕದ ಸುತ್ತ ಇರುವ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಆಹಾರಧಾನ್ಯಗಳನ್ನು ಅಲ್ಲಿನ ಸರಕಾರಗಳು ಪಡಿತರ ಕಾರ್ಡುಗಳ ಮೂಲಕ ವಿತರಿಸಲು ಸಾಧ್ಯವಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಹೋರಾಟದಲ್ಲಿ ಕೆ.ದಾಸ ಭಂಡಾರಿ, ಮಹಾಬಲ ವಡೇರಹೋಬಳಿ, ಮುತ್ತಯ್ಯ ಕನ್ಯಾಣ, ಚಂದ್ರಶೇಖರ ವಿ., ದೋಗು ಸುವರ್ಣ, ವೆಂಕಟೇಶ ನಾಯಕ್, ರಮೇಶ್ ಮೆಂಡನ್, ಎಚ್.ವಿಠ್ಠಲ ಪೂಜಾರಿ, ಕವಿರಾಜ್, ವಿದ್ಯಾರಾಜ್, ಸಂಜೀವ ನಾಯಕ್, ಕೆ.ಲಕ್ಷ್ಮಣ್, ಬಿಲ್ಕೀಸ್, ಬೇಬಿ ಶೆಟ್ಟಿ, ಪುಷ್ಟ ಮಲ್ಲಾರು, ಗೌರಿ ದೇವಾಡಿಗ, ಗಿರಿಜ ಮೊದಾದವರು ನೇತೃತ್ವ ವಹಿಸಿದ್ದರು.
ಕುಂದಾಪುರದಲ್ಲಿ ಸಾಮೂಹಿಕ ಸತ್ಯಾಗ್ರಹ
ಸಿಪಿಐ(ಎಂ) ಮತ್ತು ಸಾಮೂಹಿಕ ಸಂಘಟನೆಗಳ ನೇತ್ರತ್ವದಲ್ಲಿ ರಾಜ್ಯವ್ಯಾಪಿ ಚಳುವಳಿಯ ಅಂಗವಾಗಿ, ಕುಂದಾಪುರದಲ್ಲಿ 13.01.2010 ತಾಲ್ಲೂಕು ತಹಶೀಲ್ದಾರರವರ ಕಛೇರಿಯಲ್ಲಿ ಸಾಮೂಹಿಕ ಸತ್ಯಾಗ್ರಹ 3ನೇ ದಿವಸ ಮುಂದುವರಿಯಿತು. ಸಾಮೂಹಿಕ ಸತ್ಯಾಗ್ರಹದಲ್ಲಿ ಅಂಗನವಾಡಿ, ಅಕ್ಷರದಾಸೋಹ, ಕ್ಯಾಶ್ಯೂ, ಬೀಡಿ, ಇಟ್ಟಿಗೆ ಕಾಮರ್ಿಕರು ಮತ್ತು ಕಟ್ಟಡ ನಿರ್ಮಾಣ ಕೆಲಸಗಾರರು ಸುಮಾರು 400 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸತ್ಯಾಗ್ರಹದಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಕೆ.ಶಂಕರರವರು ಮಾತನಾಡಿದರು. ಸಿಪಿಐ(ಎಂ) ಮುಖಂಡರಾದ ಮಹಾಬಲ ವಡೇರಹೋಬಳಿ, ಯು.ದಾಸ ಭಂಡಾರಿ, ಚಂದ್ರಶೇಖರ ವಿ., ವೆಂಕಟೇಶ ಕೋಣಿ, ಸುರೇಶ ಕಲ್ಲಾಗರ, ಮುತ್ತಯ್ಯ ಕನ್ಯಾನ ಮತ್ತು ರಾಜೀವ ಪಡುಕೋಣೆ ಚಳುವಳಿಯ ನೇತೃತ್ವ ವಹಿಸಿದರು
ಕೋಲಾರದಲ್ಲಿ ಜಿಲ್ಲಾಡಳಿತದೊಂದಿಗೆ ಚಕಮಕಿ
ಕಳೆದ 21ರಂದು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಅಕ್ಷರಃ ರಣರಂಗವಾಗಿತ್ತು. ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಅಂದು ಆಹಾರದ ಹಕ್ಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಯಬೇಕು ಮತ್ತು ಎಲ್ಲ ಅರ್ಹ ಬಡವರಿಗೆ ರೇಷನ್ ಕಾರ್ಡುಗಳನ್ನು ವಿತರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಸಂಘಟಿಸಲಾಗಿತ್ತು. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಜನ ಅಪಾರ ಸಂಖ್ಯೆಯಲ್ಲಿ ಹಾಜರಾಗಿದ್ದರು. ಮಹಿಳೆಯರೇ ಇವರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವು ಮಹಿಳೆಯರು ಮಕ್ಕಳನ್ನೂ ಹೊತ್ತು ತಂದಿದ್ದರು.
ಪ್ರತಿಭಟನೆ ಕುರಿತು ಜಿಲ್ಲಾಕಾರಿಗಳಿಗೆ ಮೊದಲೇ ಮಾಹಿತಿ ನೀಡಿ ಅಂದು ಉಪಸ್ಥಿತರಿದ್ದರು. ಪ್ರತಿಭಟನಕಾರರ ಬೇಡಿಕೆಗಳನ್ನು ಆಲಿಸಿ ಸ್ಪಂದಿಸಲು ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾಕಾರಿ ಎನ್. ಪ್ರಭಾಕರ್ ಅವರು ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು ಆ ದಿನ ಕಚೇರಿಯಲ್ಲಿ ಇರಲಿಲ್ಲ. ತಮ್ಮ ಬೇಡಿಕೆಗಳ ಕುರಿತಂತೆ ಕೋಲಾರ ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲ ಬಂದ ಪ್ರತಿಭಟನಕಾರರು ಜಿಲ್ಲಾಕಾರಿಗಳ ಕಚೇರಿ ಮುಂದೆ ಜಮಾಯಿಸಿದರು. ಒಂದು ಗಂಟೆ, ಎರಡು ಗಂಟೆ ಮೂರು ಗಂಟೆ.... ಕಾದು ಕುಳಿತರು. ಆದರೆ ಜಿಲ್ಲಾಕಾರಿಗಳು ಬರಲೇ ಇಲ. ಪ್ರತಿಭಟನಕಾರರು ಪಟ್ಟು ಬಿಡಲಿಲ್ಲ. ಜಿಲ್ಲಾಕಾರಿ ಸ್ಥಳಕ್ಕೆ ಆಗಮಿಸುವ ತನಕ ಜಾಗ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅಪಾರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಕಾರಿ ಸ್ಥಳಕ್ಕೆ ಬರಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡ ಪ್ರತಿಭಟನಕಾರರು ಕಚೇರಿಗೆ ಮುತ್ತಿಗೆ ಹಾಕು ಮುಂದಾದರು. ಇದನ್ನು ತಡೆಯಲು ಮುಂದಾದ ಪೊಲೀಸರು ನಾರಾಯಣ ಸ್ವಾಮಿ ಮತ್ತು ಯಲ್ಲಪ್ಪ ಅವರನ್ನು ಬಂಧಿಸಲು ಮುಂದಾದರು. ಇದನ್ನು ವಿರೋಧಿಸಿ ಎಲ್ಲ ಪ್ರತಿಭಟನಾಕಾರರು ತಮ್ಮನ್ನೂ ಬಂಧಿಸಿ ಎಂದು ಮುಂದಾದರು. ಆಗ ವಾತಾವರಣ ಸ್ವಲ್ಪ ವಿಕೋಪಕ್ಕೆ ಹೋಯಿತು. ಪ್ರತಿಭಟನಕಾರರು ಮತ್ತು ಪೊಲೀಸರು ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪ್ರತಿಭಟನಕಾರರ ಬೇಡಿಕೆಗಳು ನ್ಯಾಯಬದ್ಧವಾಗಿದೆ ಎಂದು ಅರಿತುಕೊಂಡು ಪೊಲೀಸರು ಒಂದು ಹಂತದವರೆಗೂ ಸುಮ್ಮನಿದ್ದರೂ ನಂತರ ತಮ್ಮ ಅಧಿಕಾರವನ್ನು ಚಲಾಯಿಸಿದರು. ಪ್ರತಿಭಟನಕಾರರನ್ನು ಬಂಧಿಸಿ ನಂತರ ಸಂಜೆ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮರುದಿನ ಮತ್ತೆ ಪ್ರತಿಭಟನೆ ನಡೆಸಲಾಯಿತು. ಮೊದಲ ದಿನದಷ್ಟೇ ಉತ್ಸಾಹದಿಂದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆ ದಿನ ಜಿಲ್ಲಾಧಿಕಾರಿ ಸ್ಥಳದಲ್ಲೇ ಇದ್ದು ಪ್ರತಿಭಟನಕಾರರ ಮನವಿ ಆಲಿಸಿದ ನಂತರವೇ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಜ್ಯೋತಿ ದಾದಾಗೆ ಶ್ರದ್ಧಾಂಜಲಿ: ಸಿಪಿಎಂ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾಮ್ರೆಡ್ ಜ್ಯೋತಿ ಬಸು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿ ಸಲಾಯಿತು. ಜಿಲ್ಲಾ ಕಾರ್ಯದರ್ಶಿ ಅರ್ಜುನನ್, ಮುಖಂಡರಾದ ಗಾಂಧಿನಗರ ನಾರಾಯಣ ಸ್ವಾಮಿ, ಪಿ.ಆರ್. ಸೂರಿ, ಎ.ಆರ್. ಬಾಬು, ಗೀತಾ ಮತ್ತಿತರರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಸೌಜನ್ಯ: ಜನಶಕ್ತಿ