ನವದೆಹಲಿ, ನ 17. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಸ್ವಚ್ಛಂದ’ ಕಾರ್ಯವೈಖರಿಗೆ ಮೂಗು ದಾರ ತೊಡಿಸಲೆಂದು ರೆಡ್ಡಿ ಗಣಿಧಣಿಗಳು ಮತ್ತಿತರೆ ಭಿನ್ನಮತೀಯರ ಬೇಡಿಕೆಯ ಪ್ರಕಾರ ಭಾರತೀಯ ಜನತಾ ಪಾರ್ಟಿಯ ವರಿಷ್ಠ ಮಂಡಳಿ ಹದಿನಾಲ್ಕು ಮಂದಿ ಸದಸ್ಯರ ಸಮನ್ವಯ ಸಮಿತಿಯೊಂದನ್ನು ನೇಮಕ ಮಾಡಿದೆ.
ಬಿಜೆಪಿಯ ದಿಲ್ಲಿಯ ಅತಿರಥ ಮಹಾರಥರು ಅಪ್ರತ್ಯಕ್ಷವಾಗಿ ಮೂಗು ತೂರಿಸಲು ಅವಕಾಶ ಇರುವ ಈ ಸಮಿತಿಯ ಕಾರ್ಯವ್ಯಾಪ್ತಿ ಯಡಿಯೂರಪ್ಪ ಸರ್ಕಾರದ ನೀತಿ ನಿರ್ಧಾರಗಳ ವಿಮರ್ಶೆ ಪರಾಮರ್ಶೆಗೆ ಸೀಮಿತ ಅಲ್ಲ ಎಂಬುದು ಇದೀಗ ಸಾಮಾನ್ಯ ಜ್ಞಾನ.
ಕರುಣಾಕರರೆಡ್ಡಿ, ಅನಂತಕುಮಾರ್, ಈಶ್ವರಪ್ಪ ಹಾಗೂ ಶೆಟ್ಟರ್ ಅವರ ಹದ್ದಿನ ಕಣ್ಣುಗಳಡಿ ಕಾರ್ಯನಿರ್ವಹಿಸಬೇಕಿರುವ ಯಡಿಯೂರಪ್ಪ ತಮ್ಮ ಕಟ್ಟಾ ಬೆಂಬಲಿಗ ಬಸವರಾಜ ಬೊಮ್ಮಾಯಿ ಅವರನ್ನು ಸಮಿತಿಯೊಳಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಾರೆ.
ಹಿರಿಯ ಸಚಿವರಲ್ಲಿ ಒಬ್ಬರಾದ ಡಾ.ವಿ.ಎಸ್. ಆಚಾರ್ಯ ಇತ್ತೀಚಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಅಗತ್ಯ ಇಲ್ಲ ಎಂಬ ನಿಲವು ತಳೆದಿದ್ದವರು. ಬೆಂಗಳೂರು ನಗರದ ಸಚಿವ ಜೋಡಿ ಆರ್. ಅಶೋಕ್ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಮಗೆ ಮುಖ್ಯಮಂತ್ರಿಯ ಮುಲಾಜು ಯಾವುದೂ ಇಲ್ಲ ಎನ್ನುವ ಧೋರಣೆಯವರು.
ಉಳಿದಂತೆ ಪಕ್ಷದ ಹಿತವೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿಲವು ತಳೆಯುವ ಸಚಿವರು ಎನ್ನಲಾದ ಸುರೇಶ್‌ಕುಮಾರ್ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸಮಿತಿಯಲ್ಲಿದ್ದಾರೆ. ಸರ್ಕಾರಕ್ಕೆ ಹೊರಗಿನವರಾದ ಇಬ್ಬರು ಆರೆಸ್ಸೆಸ್ ಪ್ರತಿನಿಧಿಗಳು ವಿ.ಸತೀಶ್ ಮತ್ತು ಸಂತೋಷ್ ಅವರು ಸಮಿತಿಗೆ ವಿಶೇಷ ಆಹ್ವಾನಿತರು.
ಸಕ್ರಿಯ ಆಗಿಲ್ಲದೆ ಹೋದರೂ ಹೆಸರಿಗೆಂದು ಈಗಾಗಲೆ ಸಮನ್ವಯ ಸಮಿತಿಯೊಂದು ಅಸ್ತಿತ್ವದಲ್ಲಿತ್ತು. ಸದಾನಂದಗೌಡ ಅಧ್ಯಕ್ಷತೆಯ ಈ ಸಮಿತಿಯ ಸದಸ್ಯರು ಯಡಿಯೂರಪ್ಪ, ಅನಂತಕುಮಾರ್, ವಿ. ಸತೀಶ್, ಸಂತೋಷ್.
ಈಶ್ವರಪ್ಪ, ಶೆಟ್ಟರ್, ರೆಡ್ಡಿ ಸೋದರರ ಪೈಕಿ ಒಬ್ಬರನ್ನು ತೆಗೆದುಕೊಂಡು ಈ ಸಮಿತಿಯ ವಿಸ್ತರಣೆಗೆ ತಾವು ಸಿದ್ಧ ಎಂದು ಯಡಿಯೂರಪ್ಪ ಅವರು ತಮ್ಮ ಪಕ್ಷದ ಹೈಕಮಾಂಡ್ ಜೊತೆ ನಡೆಸಿದ್ದ ದಿಲ್ಲಿ ಸಂಧಾನದ ಸಂದರ್ಭದಲ್ಲಿ ಹೇಳಿದ್ದುಂಟು.
ಸಮನ್ವಯ ಸಮಿತಿಯ ಪರಿಧಿಯೊಳಗೆ ಏನೇನು ಬರಬೇಕು ಎಂಬುದನ್ನು ಸ್ವಾಭಾವಿಕವಾಗಿಯೇ ವರಿಷ್ಠರು ನಿರ್ದಿಷ್ಟವಾಗಿ ನಿಗದಿ ಮಾಡದೆ ಅಸ್ಪಷ್ಟವಾಗಿ ಉಳಿಸಿದ್ದಾರೆ.
’ಕರ್ನಾಟಕ ವಿದ್ಯಮಾನಗಳಿಗೆಂದು (ಫಾರ್ ಕರ್ನಾಟಕ ಅಫೇರ್ಸ್) ಪಕ್ಷದ ಅಧ್ಯಕ್ಷ ರಾಜನಾಥ್‌ಸಿಂಗ್ ಸಮನ್ವಯ ಸಮಿತಿಯೊಂದನ್ನು ರಚಿಸಿದ್ದಾರೆ’ ಎಂದು ಪಕ್ಷದ ಕೇಂದ್ರ ಕಚೇರಿ ಮಂಗಳವಾರ ಸಂಜೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ೧೪ ಮಂದಿ ಸದಸ್ಯರ ಈ ಸಮಿತಿಯಲ್ಲಿ ಎಲ್ಲರೂ ಸದಸ್ಯರೇ. ಅಧ್ಯಕ್ಷರ್ಯಾರೂ ಇಲ್ಲ. ಪಟ್ಟಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಡಿ.ವಿ. ಸದಾನಂದಗೌಡ ಅವರ ಹೆಸರು ಮೊದಲನೆಯದು.
ನಂತರದ್ದು ಮುಖ್ಯಮಂತ್ರಿ ಮತ್ತು ಮೂರನೆಯದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರದು. ವಿಶೇಷ ಅತಿಥಿಗಳು ಆರೆಸ್ಸೆಸ್‌ನ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರತಿನಿಧಿಗಳಾದ ವಿ. ಸತೀಶ್ ಮತ್ತು ಸಂತೋಷ್ ಅವರು. ಇತ್ತೀಚಿನ ರೆಡ್ಡಿ ಸೋದರರ ಬಂಡಾಯದ ನಂತರ ರಾಜ್ಯ ಬಿಜೆಪಿ ಸರ್ಕಾರದ ಅಧಿಕಾರದ ತಕ್ಕಡಿಯ ಸಮೀಕರಣ ಭಾರೀ ಪಲ್ಲಟ ಕಂಡಿರುವುದು ವಾಸ್ತವ. ಮುಖ್ಯಮಂತ್ರಿ ಯಡಿಯೂರಪ್ಪ ಈಗ ಮೊದಲಿನಷ್ಟು ಶಕ್ತರಲ್ಲ.
ರೆಡ್ಡಿ ಸೋದರರ ಪೈಕಿ ಅಗ್ರಜ ಕಂದಾಯ ಸಚಿವ ಗಾಲಿ ಕರುಣಾಕರರೆಡ್ಡಿ, ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಂಡಾಯದ ಬಾವುಟ ಹಾರಿಸುತ್ತಲೇ ಬಂದಿರುವ ಸಚಿವ ಕೆ.ಎಸ್.ಈಶ್ವರಪ್ಪ, ಸಾರ್ವಜನಿಕವಾಗಿ ಮೌನ ಧರಿಸಿದ್ದರೂ ರೆಡ್ಡಿ ಸೋದರರಿಗೆ ಬೆಂಬಲವಾಗಿ ನಿಂತಿದ್ದು, ಇದೀಗ ಸಚಿವ ಸಂಪುಟ ಸೇರಿರುವ ಜಗದೀಶ್ ಶೆಟ್ಟರ್ ಹಾಗೂ ರಾಷ್ಟ್ರೀಯ ನಾಯಕ ಅನಂತಕುಮಾರ್ ಹೊಸ ಹುರುಪಿನಿಂದ ನಡೆಸುವ ದಾಳಿಯನ್ನು ಶಕ್ತಿ ಕುಂದಿರುವ ಯಡಿಯೂರಪ್ಪ ಹೇಗೆ ಎದುರಿಸುವರು ಎಂಬುದು ಕಾದು ನೋಡ ಬೇಕಿರುವ ವಿದ್ಯಮಾನ.
ಅನಂತ ಕುಮಾರ್, ಶೆಟ್ಟರ್, ಈಶ್ವರಪ್ಪ ಹಾಗೂ ಕರುಣಾಕರರೆಡ್ಡಿ ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಯಡಿಯೂರಪ್ಪ ಅವರ ನಿಷ್ಠರು. ಈ ನಾಲ್ವರಲ್ಲಿ ತಟಸ್ಥ ನಿಲುವು ಹೊಂದಿದವರೂ ಇದ್ದಾರೆ. ಯಡಿಯೂರಪ್ಪ ಅವರ ನಿಷ್ಠರಲ್ಲಿ ಒಂದಿಬ್ಬರು ರೆಡ್ಡಿ ಬಣದ ಜತೆಗೂ ಗುರುತಿಸಿಕೊಂಡಿದ್ದಾರೆ.
ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗುತ್ತದೆ ಎಂದು ಆರಂಭದಲ್ಲಿ ಕೇಳಿ ಬಂದಿತ್ತು. ರೆಡ್ಡಿಗಳ ಕೈ ಮೇಲಾಗಬಹುದು ಎಂಬ ಕಾರಣಕ್ಕೆ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸ ಬಾರದು ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವ್ಯವಹಾರದಲ್ಲಿ ವರಿಷ್ಠರು ಹಸ್ತಕ್ಷೇಪ ಮಾಡುವುದು ಬೇಡ ಎಂಬ ನಿಲುವಿನಿಂದಲೂ ಸುಷ್ಮಾ ಅವರನ್ನು ಈ ಸಮಿತಿಯಿಂದ ಹೊರಗಿಡಲಾಗಿದೆ.
ಸಮರ್ಥನೆ: ಸಮನ್ವಯ ಸಮಿತಿಯಲ್ಲಿ ಮುಖ್ಯಮಂತ್ರಿ ಅವರ ಕೈ ಮೇಲಾಗಿದೆ ಎಂಬ ಅಂಶವನ್ನು ಯಡಿಯೂರಪ್ಪ ಅವರ ಆಪ್ತ ವಲಯದ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ. ಸಮಿತಿಗೆ ಸಂಬಂಧಿಸಿದಂತೆ ಭಿನ್ನಮತೀಯರ ಒತ್ತಡ ತಂತ್ರಗಳಿಗೆ ಪಕ್ಷದ ವರಿಷ್ಠರು ಮಣಿದಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಲು ಈ ರೀತಿ ವ್ಯವಸ್ಥೆ ಅಗತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
‘ಎಲ್ಲ ಅವರ ಕಡೆಯೇ ಏಕಿರಬೇಕು? ಒತ್ತಡ ತಂತ್ರವನ್ನೇ ಅನುಸರಿಸುತ್ತ ಹೋದರೆ ಹೇಗೆ?’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭಿನ್ನರ ಅಪಸ್ವರ: ಸಮನ್ವಯ ಸಮಿತಿ ಬಗ್ಗೆ ಭಿನ್ನರ ಗುಂಪಿನಲ್ಲಿ ಅಪಸ್ವರ ಎದ್ದಿದ್ದು, ಬೂದಿ ಮುಚ್ಚಿದ ಕೆಂಡದಂತಿರುವ ರಾಜ್ಯ ಬಿಜೆಪಿಯ ಅಂತಃಕಲಹ ಪುನಃ ಉಲ್ಬಣ ಗೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
ಮುಖ್ಯಮಂತ್ರಿ ಸೂಚನೆ ಮೇರೆಗೆ ಸಮಿತಿ ಪುನರ್‌ರಚನೆ ಆಗಿದೆ. 14 ಸದಸ್ಯ ಬಲದ ಸಮಿತಿಯಲ್ಲಿ ಹೆಚ್ಚಿನವರು ಅವರ ಪರ ಇರುವವರೇ ಇದ್ದಾರೆ. ಇದಕ್ಕೆ ಒಪ್ಪಲು ಸಾಧ್ಯ ಇಲ್ಲ ಎಂದು ಭಿನ್ನರ ಬಣ ಸ್ಪಷ್ಟವಾಗಿ ತಿಳಿಸಿದೆ. ಸಮಿತಿಯಲ್ಲೇ ಸಮತೋಲನ ಇಲ್ಲದ ಮೇಲೆ ಸಮನ್ವಯ ಸಾಧಿಸುವುದು ಎಲ್ಲಿಯ ಮಾತು. ಯಾರನ್ನು ಕೇಳಿ ಸಮಿತಿಗೆ ಸದಸ್ಯರನ್ನು ನೇಮಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರನ್ನು ಸಂಪುಟದಿಂದಲೇ ಕೈಬಿಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಈಗ ಅವರೇ ಸಮನ್ವಯ ಸಮಿತಿ ಸದಸ್ಯರಾದರೆ ಹೇಗೆ ಎಂದು ಭಿನ್ನರು ಪ್ರಶ್ನಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಪುನರ್‌ರಚಿತ ಸಮಿತಿಯನ್ನು ಮತ್ತೊಮ್ಮೆ ಪುನರ್‌ರಚಿಸಬೇಕು. ರಚನೆಗೂ ಮುನ್ನ ಎರಡೂ ಬಣಗಳ ಜತೆ ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕೆನ್ನುವ ಒತ್ತಾಯವನ್ನೂ ಭಿನ್ನರ ಬಣ ಮುಂದೊಡ್ಡಿದೆ.
ಒಂದು ವೇಳೆ ಇದೇ ಸಮಿತಿ ಇಟ್ಟುಕೊಂಡು ಕೆಲಸ ಮಾಡಿ ಎನ್ನುವ ಸೂಚನೆ ಬಂದರೆ ಅದಕ್ಕೆ ಒಪ್ಪದಿರಲು ಮತ್ತು ಭಿನ್ನಮತೀಯ ಚಟುವಟಿಕೆಗಳನ್ನು ಮುಂದುವರಿಸಲು ಭಿನ್ನರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪಕ್ಷದ ರಾಷ್ಟ್ರೀಯ ಮುಖಂಡರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸೇರಿದಂತೆ ಇತರರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಜನಾರ್ದನ ರೆಡ್ಡಿ ಅವರು ತಮ್ಮ ಆಪ್ತ ಶಾಸಕರ ಜತೆ ರಾತ್ರಿ ಮಾತನಾಡಿದ್ದು, ಸಂಯಮ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೆಡ್ಡಿ ಮನೆಯಲ್ಲಿ ಸಭೆ: ಈ ನಡುವೆ ಕೆಲ ಸಚಿವರನ್ನು ಕೈಬಿಡಬೇಕೆನ್ನುವ ಕೂಗು ಮತ್ತೊಮ್ಮೆ ಕೇಳಿಬಂದಿದ್ದು, ಈ ಸಲುವಾಗಿ ಪಕ್ಷದ ಮೇಲೆ ಒತ್ತಡ ಹೇರಲು ಭಿನ್ನರ ಬಣ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ.
ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಅಧಿಕೃತ ನಿವಾಸದಲ್ಲಿ ಕೆಲ ಸಚಿವರು ಮತ್ತು ಶಾಸಕರು ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹೋಟೆಲ್‌ನಲ್ಲಿ ಸಭೆ: ಇದಕ್ಕೂ ಮುನ್ನ ಅತೃಪ್ತ ಕೆಲ ಶಾಸಕರು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಸಭೆ ಸೇರಿ, ನಿಷ್ಠಾವಂತರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆ ನ್ನುವ ಒತ್ತಡ ಹೇರಲು ತೀರ್ಮಾನಿಸಿದರು.
ಶಾಸಕರಾದ ಎಂ.ಪಿ. ರೇಣು ಕಾಚಾರ್ಯ, ಬೇಳೂರು ಗೋಪಾ ಲಕೃಷ್ಣ, ಎಸ್.ಕೆ.ಬೆಳ್ಳುಬ್ಬಿ, ದೊಡ್ಡನ ಗೌಡ ಪಾಟೀಲ್, ಸಾರ್ವಭೌಮ ಬಗಲಿ, ಕಳಕಪ್ಪ ಬಂಡಿ, ನೆಲಮಂಗಲ ನಾಗರಾಜ್ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಹಾಜರಿದ್ದರು ಎನ್ನಲಾಗಿದೆ.
ಯಾರನ್ನು ಸಂಪುಟದಿಂದ ಕೈಬಿಡ ಬೇಕು ಎನ್ನುವ ಪ್ರಶ್ನೆಗೆ ‘ಆ ಬಗ್ಗೆ ನಾವೇನೂ ಹೇಳುವುದಿಲ್ಲ. ವರಿಷ್ಠರೇ ನಿರ್ಧಾರ ತೆಗೆದುಕೊಂಡು ಹೊಸ ಬರಿಗೆ ಅವಕಾಶ ನೀಡಬೇಕು’ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.
ಇದಲ್ಲದೆ, ನಿಗಮ ಮಂಡಳಿಗಳಿಗೆ ಬೇಕಾಬಿಟ್ಟಿ ನೇಮಕ ಮಾಡಿದ್ದು, ಎಲ್ಲವನ್ನೂ ಮರು ಹಂಚಿಕೆ ಮಾಡ ಬೇಕು. ಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು ಎಂದೂ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸೌಜನ್ಯ: ಕನ್ನಡಪ್ರಭ