ಪಡುಬಿದ್ರಿ, ಡಿಸೆಂಬರ್ 12: ಇಲ್ಲಿನ ಬೀಡು ಶಾಲೆಯ ಬಳಿ ಟ್ಯಾಂಕರ್ ಹಾಗೂ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಹಾಗೂ ಮಣಿಪಾಲದ ಹೊಟೇಲ್ ಉದ್ಯಮಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುವನ್ನು ಕಾರು ಚಾಲಕ ಜಿತೇಶ್ ಹಾಗೂ ಮಣಿಪಾಲದ ಹೊಟೇಲ್ ಉದ್ಯಮಿ ಜಯರಾಜ್ ಹೆಗ್ಡೆ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕಾರು ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಪಡುಬಿದ್ರಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ತೀವೃತೆಗೆ ಇನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ಗೆ ಸ್ಥಳೀಯರು ಕರೆ ಮಾಡಿದರೂ ಆಂಬುಲೆನ್ಸ್ ಬಾರದಿರುವುದು ಸ್ಥಳೀಯರು ಆಕ್ರೋಶಿತರಾಗಿದ್ದರು. ಇದೇ ವೇಳೆ ಉಡುಪಿಯ ಕಾರ್ಯಕ್ರಮಕ್ಕೆ ತನ್ನ ಕಾರಿನಲ್ಲಿ ತರಳುತ್ತಿದ್ದ ಮಾಜಿ ಸಂಸದ ವಿನಯ ಕುಮಾರ್ ಸೊರಕೆಯವರು ಕಾರಿನಲ್ಲಿಯೇ ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.