ಬಂಟ್ವಾಳ, ನವೆಂಬರ್ ೨೩: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡಗಳೆರಡು ಹೊಡೆದಾಡಿಕೊಂಡ ಘಟನೆ ರವಿವಾರ ರಾತ್ರಿ ವಿಟ್ಲದಲ್ಲಿ ನಡೆದಿದೆ. ವಿಟ್ಲದ ದಲ್ಲಿ ವ್ಯವಹಾರ ನಡೆಸುತ್ತಿರುವ ಮಹರಾಷ್ಟ್ರ ಮೂಲದ ಶಶಿಕಾಂತ ಸಾಲುಂಕೆ ಎಂಬವರ ಮೇಲೆ ರಾಜೇಶ್,ರವಿ, ಮತ್ತಿತರರ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದ್ದು ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ. ಘಟನೆ ಬಗ್ಗೆ ರವಿಪ್ರಸಾದ ಎಂಬವರು ಪ್ರತಿ ದೂರು ನೀಡಿದ್ದು,,ತನಗೆ ಶಶಿ ಕಾಂತ,ಜಯ ಕೊಟ್ಟಾರಿ, ಮುರಳೀಧರ,ನಾಗೇಶ,ಚಿದಾನಂದ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಇಲ್ಲಿನ ಬಾಕಿಮಾರು ಗದ್ದೆಯಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿ ಚಿನ್ನದ ವ್ಯಾಪಾರಿ ಶಶಿಕಾಂತ ಸಾಲುಂಕೆ ಯವರಿಂದ ೧೬.೪೦ ಲಕ್ಷ ಸಾಲ ಪಡೆದ ವಿಟ್ಲದ ಶಿವರಾಮ ಹಾಗೂ ಸತೀಶ ಎಂಬವರು ಲಕ್ಷಗಟ್ಟಲೆ ಹಣ ವಂಚಿಸಿದ್ದರು. ಈಬಗ್ಗೆ ಶಶಿಕಾಂತ ವಿಟ್ಲ ಪೋಲಿಸರಿಗೆ ದೂರು ನೀಡಿದ್ದರು, ಇದೇ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ವಿಟ್ಲದ ಭಗವತಿ ದೇವಸ್ಥಾನ ಸಮೀಪ ಅಂಗಡಿ ಮುಚ್ಚಿ ತೆರಳುತ್ತಿದ್ದ ಶಶಿಕಾಂತ್ ಮೇಲೆ ರವಿ ಮತ್ತಿತರರಿದ್ದ ತಂಡ ಹಲ್ಲೆ ನಡೆಸಿದ್ದು, ಇದೇ ಸಂದರ್ಭ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಇಬ್ಬರು ಆಸ್ಪತ್ರೆ ಸೇರಿದ್ದಾರೆ. ವಿಟ್ಲ ಪೋಲಿಸರು ಇತ್ತಂಡಗಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.