ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿ ವಿವರ ಬಹಿರಂಗ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿ ವಿವರ ಬಹಿರಂಗ

Tue, 03 Nov 2009 03:18:00  Office Staff   S.O. News Service
ಹೊಸದಿಲ್ಲಿ, ನ.೨: ತೀವ್ರ ಸಾರ್ವಜನಿಕ ಒತ್ತಡಕ್ಕೆ ಮಣಿದಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹಾಗೂ ಅವರೆಲ್ಲ ೨೧ ಮಂದಿ ಸಹೋದ್ಯೋಗಿಗಳು ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ಅದು ಅಧಿಕೃತ ವೆಬ್‌ಸೈಟ್‌ನಲ್ಲಿ  ಪ್ರಕಟಿಸಿದೆ.

ಒಂದೆರಡು ದಿನಗಳೊಳಗಾಗಿ ವೆಬ್‌ಸೈಟ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿ ವಿವರ ಲಭಿಸಿದೆಯೆಂದು ಉನ್ನತ ಮೂಲಗಳು ತಿಳಿಸಿವೆ.

ದಸರಾ ಹಾಗೂ ದೀಪಾವಳಿ ಸಮಯದಲ್ಲಿ ಬಾಲಕೃಷ್ಣನ್ ಹಾಗೂ ಇತರ ನ್ಯಾಯಾಧೀಶರು ತಮ್ಮ ಆಸ್ತಿ ವಿವರವನ್ನು ಅಂತಿಮಗೊಳಿಸಿದ ಬಳಿಕ, ಕಳೆದ ವಾರ ಅದನ್ನು ಪ್ರಕಟಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವು ನ್ಯಾಯಮೂರ್ತಿಗಳು ಇದಕ್ಕಾಗಿ ವೃತ್ತಿಪರ ಲೆಕ್ಕ ಪರಿಶೋಧಕರ ಸಹಾಯವನ್ನು ಪಡೆದಿದ್ದಾರೆ.

ಅಪರಾಧಿಗಳನ್ನು ಗಲ್ಲಿಗೇರಿಸುವ ಅಧಿಕಾರವನ್ನೂ ಪಡೆದಿರುವ ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿ ವಿವರ ಬಹಿರಂಗ ಪಡಿಸಿ, ಪಾರದರ್ಶಕತೆ ಮೆರೆಯುವಲ್ಲಿ ಹಿಂದೆ ಬೀಳಬಾರದು ಎಂದು ನ್ಯಾಯಾಂಗ ಪರಿಣತರು ಹಾಗೂ ಸಾರ್ವಜನಿಕರು ತೀವ್ರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

೧೯೯೭ರ ನಿರ್ಣಯದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆಯೇ ಎಂಬ ಕುರಿತು ಮಾಹಿತಿ ಕೇಳಿ ಸುಭಾಷ್ ಅಗರ್ವಾಲ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ್ದರು.

ಅವರಿಗೆ ಆ ಮಾಹಿತಿ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗವು ಸುಪ್ರೀಂ ಕೋರ್ಟ್‌ಗೆ ನಿರ್ದೇಶನ ನೀಡಿತ್ತು. ಚಾರಿತ್ರಿಕ ತೀರ್ಪೊಂದರಲ್ಲಿ ಅದನ್ನು ದಿಲ್ಲಿ ಹೈಕೋರ್ಟ್ ಸೆ.೨ರಂದು ಹಿಡಿದಿತ್ತು.

Share: