ಬಹುಸಂಸ್ಕೃತಿಯ ಮೇಲೆ ಏಕಸಂಸ್ಕೃತಿ ಹೇರುವ ಹುನ್ನಾರ: ಡಾ.ರಹಮತ್ ತರೀಕೆರೆ
‘ಕರಾವಳಿ ಸಂಸ್ಕೃತಿ: ಸಂಶೋಧನೆಯ ಸಾಧ್ಯತೆಗಳು’ ವಿಚಾರ ಸಂಕಿರಣದ ಸಮಾರೋಪ
ಉಡುಪಿ, ಮೇ 2: ಕರಾವಳಿಯಲ್ಲಿರುವ ಬಹುಸಂಸ್ಕೃತಿಯ ಮೇಲೆ ಏಕಸಂಸ್ಕೃತಿಯನ್ನು ಹೇರುವ ಹುನ್ನಾರ ನಡೆಯುತ್ತಿದ್ದು, ಇದನ್ನು ಪ್ರತಿಯೊಬ್ಬರು ವಿರೋಧಿಸಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಬ್ರಹ್ಮಗಿರಿಯ ಡಾ.ಎ.ವಿ.ಬಾಳಿಗಾ ಸ್ಮಾರಕ ಐಎಂಎ ಭವನದಲ್ಲಿ ರವಿವಾರ ನಡೆದ ಎರಡು ದಿನಗಳ ‘ಕರಾವಳಿ ಸಂಸ್ಕೃತಿ: ಸಂಶೋಧನೆಯ ಸಾಧ್ಯತೆಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಈ ಕರಾವಳಿ ಪ್ರದೇಶ ಸಂಶೋಧನೆಗೆ ಸೂಕ್ತ ಸ್ಥಳವಾಗಿದೆ. ಇಲ್ಲಿನ ಸಂಸ್ಕೃತಿ, ಭಾಷೆ, ಜನ ಅವುಗಳ ಮುಖಾಮುಖಿ, ಸಂಘರ್ಷಗಳು ಸಂಶೋಧನೆಗೆ ವಿಫುಲ ಅವಕಾಶ ಒದಗಿಸಿ ಕೊಡುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ರೂಪಾಂತರ ಕ್ರಿಯೆ ಇಲ್ಲಿ ಬಹಳಷ್ಟು ನಡೆದಿದೆ. ಆದುದರಿಂದ ಇಲ್ಲಿ ರಾಜಕೀಯ, ಸಾಮಾಜಿಕ ಮೇಲಾಟಗಳನ್ನು ಬಿಟ್ಟು ಸಂಶೋಧನೆ ಮಾಡುವುದು ಅಸಾಧ್ಯ ಎಂದರು.
ಗತಕಾಲದ ಬಗ್ಗೆ ಇಂದು ಅಸ್ಪಷ್ಟತೆ ಮೂಡಿದೆ. ಆ ನಿಟ್ಟಿನಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಸ್ಪಷ್ಟ ಪಡಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಸಂಶೋಧನೆ ಆಕರಗಳ ಬಗ್ಗೆ ನಾವು ಸರಿಯಾದ ಅಧ್ಯಯನ ನಡೆಸುತ್ತಿಲ್ಲ. ಅವುಗಳಿಗೆ ಸರಿಯಾದ ವ್ಯಾಖ್ಯಾನ ನೀಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ವಿಶ್ವವಿದ್ಯಾನಿಲಯಗಳಲ್ಲಿ ಇಂದು ವಿದ್ವತ್ ಪರಂಪರೆ ನಶಿಸಿಹೋಗುತ್ತಿದೆ ಎಂದು ಅವರು ತಿಳಿಸಿದರು.
ಸಾಂಪ್ರದಾಯಿಕ ಸಂಶೋಧನಾ ವಿಧಾನ ದಿಂದ ಹೊರಬರಬೇಕಾಗಿದೆ. ಬದುಕಿನ ಜೊತೆ ಗಿನ ಸಂಬಂಧವು ಸಂಶೋಧನೆಯ ಮುಖ್ಯ ದಷ್ಠಿಕೋನವಾಗಿರಬೇಕು. ಸಂಶೋಧನೆಯು ಜ್ಞಾನ ಶಿಸ್ತಿನಿಂದ ಕೂಡಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿಮರ್ಶೆ ಹಾಗೂ ಸಂಶೋಧನೆ ನಡೆಸುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಆ ನಿಟ್ಟಿನಲ್ಲಿ ಹೊಸ ತಲೆಮಾರಿನ ಸಂಶೋಧಕರ ತಂಡವನ್ನು ರೂಪಿಸಬೇಕಾಗಿದೆ. ಇವರಿಗೆ ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಸ್ಥಾನಮಾನ ಪ್ರೇರಣೆ ನೀಡಲಿದೆ. ವಿವಿಗಳ ದಂತ ಗೋಪುರಗಳಿಂದ ಹೊರ ಬಂದು ಸಂಶೋಧನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಭಾಷೆ, ಜನಭಾಷೆ, ಬೆಳಕಿಗೆ ಬಾರದ ಅನೇಕ ಸಾಹಿತಿಗಳ, ಪಂಥಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕು. ಈಗಾಗಲೇ ನಡೆಸಿರುವ ಸಂಶೋಧನೆಗಳ ಬಗ್ಗೆಯೇ ನಾವು ಮತ್ತೆ ಮತ್ತೆ ಸಂಶೋಧನೆ ನಡೆಸುತ್ತಿದ್ದೇವೆ. ಅವುಗಳಿಂದ ಹೊರಬರಬೇಕಾಗಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ.ಕೆ. ವಿ.ಕೋದಂಡರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಸಿ.ಟಿ.ಈರಣ್ಣ, ಕನಕ ಕೋದಂಡರಾಮಯ್ಯ, ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಯೋಗಾನಂದ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗೋಪಾಲಕಷ್ಣ ಎಂ.ಗಾಂವ್ಕರ್ ಸ್ವಾಗತಿಸಿದರು. ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ನಿಕೇತನ ವಂದಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.