ಬಂಟ್ವಾಳ, ಡಿಸೆಂಬರ್ 9: ಬಳ್ಳಾರಿ ತಾಲೂಕಿನ ಚಾಗನೂರು ಶಿರಿವಾರ ಪ್ರದೇಶದಲ್ಲಿ ವಿಮಾನ ನಿಲ್ದಾಣ ಯೋಜನೆಯನ್ನು ರಾಜ್ಯ ಸರಕಾರವು ಕೈಗೊಂಡಿದ್ದು, ಫಲವತ್ತಾದ ಕೃಷಿ ಜಮೀನು ಹೊಂದಿರುವ ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಸೂಕ್ತವಾದುದಲ್ಲ. ಇದರಿಂದಾಗಿ ತಕ್ಷಣವೇ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ನ ಜಿಲ್ಲಾ ಮಂಡಳಿ ವತಿಯಿಂದ ಬುಧವಾರ ಕೇಂದ್ರ ಸ್ಥಾನೀಯ ಸಹಾಯಕ ಆಯುಕ್ತ ಪ್ರಭಾಕರ ಶರ್ಮ ಇವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಆ ಪ್ರದೇಶದ ರೈತರು ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದರೂ ಸರ್ಕಾರ ಮತ್ತು ಸ್ಥಳೀಯ ಜಿಲ್ಲಾಡಳಿತವು ಡಿ.೮ರಂದು ನಿಷೇಧಾಜ್ಞೆ ಜಾರಿಗೊಳಿಸಿ ಬಲವಂತದಿಂದ ಸರ್ವೇ ಕಾರ್‍ಯ ಕೈಗೊಂಡಿದೆ.
ಸುಮಾರು ೧,೨೫೦ ಎಕ್ರೆ ಜಮೀನಿನಲ್ಲಿರುವ ಎರಡು ಗ್ರಾಮಗಳಲ್ಲಿ ಒಟ್ಟು ೮೦೦ಕ್ಕೂ ಮಿಕ್ಕಿ ಕುಟುಂಬಗಳು ಈ ಯೋಜನೆಯಿಂದ ಬೀದಿ ಪಾಲಾಗುತ್ತವೆ. ಇದಕ್ಕಾಗಿ ಈ ಯೋಜನೆಯನ್ನು ಕೈಬಿಟ್ಟು,
ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ವಿಮಾನ ನಿಲ್ದಾಣ ಯೋಜನೆ ಕೈಗೊಳ್ಳಬಹುದಾಗಿದೆ ಎಂದು ಪಕ್ಷವು ಸಲಹೆ ನೀಡಿದೆ.
ಇಲ್ಲಿನ ಲಕ್ಷಾಂತರ ಸಂಖ್ಯೆಯ ಜನತೆಯ ಪ್ರತಿರೋಧವನ್ನೂ ಲೆಕ್ಕಿಸದೆ ಸರ್ಕಾರವು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿದ ಜನರನ್ನು ಬಂಧನಕ್ಕೊಳಪಡಿಸಿದೆ. ಈಗಾಗಲೇ ಅಕ್ರಮ ಗಣಿಗಾರಿಕೆಗಾರರನ್ನು ರಕ್ಷಿಸುತ್ತಿರುವ ಆರೋಪವನ್ನು ಎದುರಿಸುತ್ತಿರುವ ರಾಜ್ಯ ಸರಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
ನಿಯೋಗದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ.ಸಂಜೀವ, ರಾಜ್ಯ ಕಾರ್‍ಯಕಾರಿ ಸಮಿತಿ ಸದಸ್ಯ ಬಿ.ಕೆ.ಕೃಷ್ಣಪ್ಪ, ಮಂಗಳೂರು ತಾಲ್ಲೂಕು ಕಾರ್ಯದರ್ಶಿ ವಿ.ಎಸ್.ಬೇರಿಂಜ, ಪ್ರಮುಖರಾದ ಸುರೇಶ್ ಕುಮಾರ್, ಪ್ರಭಾಕರ ರಾವ್, ಶಿವಪ್ಪ ಕೋಟ್ಯಾನ್, ಮಹಾಬಲ ಮತ್ತಿತರರಿದ್ದರು.