ಜನವರಿ 2010 ರಂದು ನಡುರಾತ್ರಿಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲೆ ಅದರ ಕಿಟಕಿ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಗಟ್ಟಿ ಭಯಭೀತಿ ಹಿಟ್ಟಿಸಿ ತರುವಾಯ ಇದರಿಂದಾಗಿ ಸಮಾಜದ ಶಾಂತಿ ಕೆಡಿಸುವ ಹುನ್ನಾರವನ್ನು ಮಂಗಳೂರು ತಾಲ್ಲೂಕಿನ ಉಳ್ಳಾಲ ವಲಯದ ಕುಂಡಲ ಎಂಬಲ್ಲಿ ನಡೆಸಲಾಗಿದೆ.ಇತ್ತೀಚೆಗೆ ಬೃಹತ್ ಹಿಂದು ಯುವ ಸಮಾಜೋತ್ಸವ ಎಂಬ ಹೆಸರನ್ನು ನೀಡಿ ಜಿಲ್ಲೆಯಾದ್ಯಂತ ಕೇಸರಿ ಬಾವುಟ , ಬಂಟಿಂಕ್ಸ್, ಉಗ್ರ ಘೋಷಣೆಗಳುಳ್ಳ ಬಂಟಿಂಗ್ಸಗಳನ್ನು ಹಾಕಿ ನಗರದಾದ್ಯಂತ ಪ್ರದರ್ಶನ ನಡೆಸಿ ಉಗ್ರ ಭಾಷಣದೊಂದಿಗೆ ಯುವಕರನ್ನು ಪ್ರಚೋದಿಸುವ ಸಭೆಯೊಂದು ನಡೆದ ತರುವಾಯ ಈ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ರಾಜ್ಯದ ಬಿಜೆಪಿ ಸರಕಾರದ ಗೃಹ ಸಚಿವ ವಿ.ಎಸ್.ಆಚಾರ್ಯರವರ `ಎಲ್ಲ ಯಾವುದೇ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ" ಎಂಬ ಹೇಳಿಕೆಯು ಕೂಡಾ ಈ ಎಲ್ಲಾ ಕೃತ್ಯಗಳು ನಡೆಯಲು ಪ್ರಚೋದನೆ ನೀಡುತ್ತಿದೆ ಎಂದರೆ ತಪ್ಪಾಗಲಾರದು.ಉಳ್ಳಾಲ ತೊಕ್ಕೊಟ್ಟು ಬಳಿಯಿಂದ ತುಸು ದೂರದಲ್ಲಿರುವ ಹೈವೇ ಪಕ್ಕದಲ್ಲಿರುವ ಒಂದು ಮಸೀದಿ ಹಾಗೂ ಕುಂಡಲ ಒಳರಸ್ತೆಯಲ್ಲಿರುವ ಒಂದು ಮಸೀದಿ ಹಾಗೂ ಒಂದು ಯತೀಂ ಖಾನದ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿಯ ಕನ್ನಡಿಗಳನ್ನು ಒಡೆದಿರುತ್ತಾರೆ. ಯತೀಂಖಾನದ ಒಳಗೆ ಮಲಗಿರುವ 81 ವಿದ್ಯಾರ್ಥಿಗಳಲ್ಲಿ ಒಬ್ಬ 12 ವರ್ಷದ ಬಾಲಕನ ಕಾಲಿಗೆ ಗಂಭೀರವಾದ ಗಾಯವಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯಿಂದ ಅಲ್ಪಸಂಖ್ಯಾತ ಮುಸ್ಲಿಮರ ಮಧ್ಯೆ ಒಂದು ಬದಿಯಲ್ಲಿ ಮಾನಸಿಕ ನೋವು, ಇನ್ನೊಂದು ಬದಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ ಸಿಗುತ್ತದೆ ಎಂಬ ಖಾತರಿಯೇ ಇಲ್ಲವಾಗಿದೆ. ಹಾಗಿದ್ದರೂ ಮಸೀದಿಯ ಆಡಳಿತ ಸಮಿತಿಯ ಮುಖಾಂತರ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಿಪಿಐ(ಎಂ) ಮಧ್ಯಪ್ರವೇಶ : ಸಿಪಿಐ(ಎಂ) ಪಕ್ಷದ ಉನ್ನತ ಮಟ್ಟದ ನಿಯೋಗವು ಎರಡು ಮಸೀದಿ ಹಾಗೂ ಯತೀಂಖಾನೆಗೆ ಭೇಟಿ ನೀಡಿ ನಡೆದಿರುವ ಘಟನೆಯ ಕುರಿತು ಪರಿಶೀಲಿಸಿ ಈ ಬಗ್ಗೆ ಮಾಧ್ಯಮಗಳಿಗೆ ವರದಿಯನ್ನು ನೀಡಲಾಗಿದ್ದು ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟಲು ಒತ್ತಾಯಿಸಲಾಗಿತ್ತು. ನಿಯೋಗದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ, ಜಿಲ್ಲಾ ಸಮಿತಿ ಸದಸ್ಯರುಗಳಾದ ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಉಳ್ಳಾಲ ವಲಯ ಸಮಿತಿ ಮಟ್ಟದ ಮುಂದಾಳುಗಳಾದ ಜಯಂತ ನಾಯಕ್, ಸುಂದರ ಕುಂಡಲ, ಕೌನ್ಸಿಲರ್ ಬೇಬಿ, ಅರುಣ್‌ಕುಮಾರ್, ಕೃಷ್ಣ, ಬಾಬುಯಿಲಾರ್ ಮುಂತಾದವರು ಉಪಸ್ಥಿತರಿದ್ದರು.
ಬಂಧನ :ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳಕ್ಕೆ ಸೇರಿದ ನ್ಯಾಯವಾದಿಯೊಬ್ಬ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯವಾದಿ ಸುಮೇಶ್ ಸಂದೀಪ್ ಹಾಗೂ ತರುಣ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ ಕುಂಪಲದಲ್ಲಿರುವ ಬಜರಂಗದಳದ ಕಾರ್ಯಕರ್ತರ ಮಧ್ಯೆ ಇತ್ತೀಚೆಗೆ ಒಡಕುಂಟಾಗಿದ್ದು, ಸಂಘಟನೆಯಿಂದ ಹೊರಗೆ ಹೋದ ಪಕ್ಕು ಯಾನೆ ಪ್ರಕಾಶ್, ಕುಂಟ ಗಣೇಶ ವಿಕ್ರಮ್ ಮತ್ತಿತರರು ಸೇರಿಕೊಂಡು ಹಿಂದೂ ಜಾಗತಿಕ ವೇದಿಕೆ ಆರಂಭಿಸಲು ಮುಂದಾಗಿದ್ದರು. ಇದನ್ನು ವಿರೋಧಿಸಿದ್ದ ನ್ಯಾಯವಾದಿ ಸುಮೇಶ್, ಮಸೀದಿಗೆ ಕಲ್ಲು ತೂರಾಟ ನಡೆಸಿ ಬಳಿಕ ಅಶಾಂತಿ ಉಂಟು ಮಾಡಿ ವೇದಿಕೆ ಆರಂಭವಾಗದಂತೆ ಮಾಡಲು ಸಂಚು ರೂಪಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸುಮೇಶ್, ತರುಣ್ ಹಾಗೂ ಸಂದೀಪ್ ಶನಿವಾರ ರಾತ್ರಿ ಕುಂಡಲದ ಮಸೀದಿಗಳಿಗೆ ಹಾಗೂ ಯತೀಂಖಾನಕ್ಕೆ ಕಲ್ಲು ತೂರಾಟ ನಡೆಸಿದ್ದರು. ಬಳಿಕ ಅಲ್ಲಿಂದ ಅವರು ಪರಾರಿಯಾಗಿದ್ದರು. ಈ ಕೃತ್ಯವನ್ನು ಪಕ್ಕು ತಂಡದವರೇ ನಡೆಸಿದರು ಎಂದು ಸುಮೇಶ್ ಗಾಳಿ ಸುದ್ದಿ ಹಬ್ಬಿಸಿದ್ದ. ಪೊಲೀಸರು ಪಕ್ಕು ಹಾಗೂ ಇತರರನ್ನು ವಿಚಾರಣೆಗೊಳಪಡಿಸಿದರು. ಆನಂತರ ತರುಣ್ ಹಾಗೂ ಸಂದೀಪರನ್ನು ತನಿಖೆಗೊಳಪಡಿಸಿದಾಗ ಅವರು ಈ ಕೃತ್ಯದ ಸೂತ್ರದಾರ ಸುಮೇಶ್ ಎಂದು ತಿಳಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
-ವಸಂತ ಆಚಾರಿ
ಸೌಜನ್ಯ: ಜನಶಕ್ತಿ
