ಬೆಂಗಳೂರು,ಫೆಬ್ರವರಿ 23: ಮಳೆಗಾಲ ಪ್ರಾರಂಭಕ್ಕೆ ಮುನ್ನ ನೆರೆ ಪೀಡಿತಗ್ರಾಮಗಳ ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಾನಿಗಳನ್ನು ಕೋರಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನೆರೆ ಗ್ರಾಮಗಳ ಸಂತ್ರಸ್ಥರಿಗೆ ಮನೆ ನಿರ್ಮಿಸಲು ಮುಂದಾಗಿರುವ ದಾನಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಂತರ ಮಾತನಾಡಿದ ಮುಖ್ಯಮಂತ್ರಿಗಳು ಸುಮಾರು ೧೩,೫೦೦ ಮನೆ ನಿರ್ಮಾಣ ಕೆಲಸ ಈಗಾಗಲೆ ಪ್ರಾರಂಭವಾಗಿದೆ. ಮನೆ ನಿರ್ಮಿಸಿಕೊಡಲು ಮುಂದಾಗಿರುವ ದಾನಿಗಳೂ ಜೂನ್ ತಿಂಗಳ ಒಳಗಾಗಿ ಪೂರ್ಣಪ್ರಮಾಣದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ನೆರೆ ಸಂತ್ರಸ್ಥರು ವಾಸಮಾಡಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಮನೆ ನಿರ್ಮಾಣದ ವೇಳೆ ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ಆಯಾ ಜಿಲ್ಲಾ ಆಡಳಿತದ ಜೊತೆ ಮಾತನಾಡಿದಲ್ಲಿ ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತವೆ ಎಂದ ಮುಖ್ಯಮಂತ್ರಿಗಳು ಅವರು ಬಡವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಧಾನಿಗಳಿಗೆ ತಿಳಿಸಿದರು.
ಮಾರ್ಚ್ ತಿಂಗಳ ೩೧ ರ ನಂತರ ನೆರೆ ಪೀಡಿತ ಜಿಲ್ಲೆಗಳಲ್ಲಿ ತಾವು ಪ್ರವಾಸ ಕೈಗೊಂಡು ಅಲ್ಲಿಯೇ ವಾಸ್ತವ್ಯ ಮಾಡಲಿರುವುದಾಗಿ ತಿಳಿಸಿ, ದೇಶದ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆ ನಿರ್ಮಿಸಿಕೊಡಲು ಕೈಗಾರಿಕೋದ್ಯಮಿಗಳು, ಮಠಮಾನ್ಯಗಳು ಹಾಗೂ ದಾನಿಗಳು ಮುಂದಾಗಿರುವ ಉದಾಹರಣೆ ಇಲ್ಲವೆಂದು ತಿಳಿಸಿದ ಈ ಇಚ್ಚಾ ಶಕ್ತಿಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮನೆ ನಿಮಿಸಿಕೊಡಲು ಮುಂದಾಗಿರುವ ವಿವಿಧ ಸಂಸ್ಥೆಗಳ ಧಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.