ಬಂಟ್ವಾಳ, ಜನವರಿ 8: ಮಕ್ಕಳ ಬೇಡಿಕೆಗಳಿಗೆ , ಆಶಯಗಳಿಗೆ ಸ್ಥಳಿಯಾಡಳಿತಗಳು ಯಾವ ರೀತಿಯ ಸ್ಪಂದನ ನೀಡುತ್ತದೆ ಎಂಬುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ...ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಇದು ಮಾತ್ರ ಸತ್ಯ..
ತಾಲೂಕಿನ ಕೆದಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಯಾರ ಶಾಲೆ ಹಾಗೂ ಅಂಗನವಾಡಿ ಕೆಂದ್ರದ ಬಳಿಯಲ್ಲಿಯೇ ಮೆಸ್ಕಾಂ ವಿದ್ಯುತ್ ಗೋಪುರವನ್ನು ನಿರ್ಮಿಸಿ ಭಯ ಹುಟ್ಟಿಸಿದ ವಿದ್ಯಮಾನ ಇನ್ನೂ ಹಾಗೆಯೇ ಉಳಿದಿರುವಂತೆಯೇ ಸ್ಥಳೀಯ ಕಡೇಶ್ವಾಲ್ಯ ಗ್ರಾಮಪಂಚಾಯತ್ ಪೆರ್ಲಾಪು ಎಂಬಲ್ಲಿನ ವಿದ್ಯುತ್ ಗೋಪುರದ ಅಡಿಯಲ್ಲಿಯೇ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಸ್ಥಳೀಯವಾಗಿ ಆತಂಕ ಹುಟ್ಟಿಸಿದೆ.
ಜಿಲ್ಲಾ ಪಂಚಾಯತ್ ನ ಸ್ವರ್ಣ ಗ್ರಾಮ ಯೋಜನೆಯಡಿ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುವ ೪ ಅಂಗನವಾಡಿ ಕೆಂದ್ರಗಳ ಪೈಕಿ ಇದೂ ಒಂದು.ಗ್ರಾಮಪಂಚಾಯತ್ ಸೂಚಿಸಲ್ಪಟ್ಟ ಪೆರ್ಲಾಪುವಿನ ಈ ಸ್ಥಳದಲ್ಲಿ ಕೆಲ ಗ್ರಾಮ ಪಂಚಾಯತ್ ಸದಸ್ಯರ ವಿರೋಧದ ಮಧ್ಯೆಯೂ ಅಂಗನವಾಡಿ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಹೇಳಿ ಕೆಳಿ ಇದು ಡಿಸಿ ಮನ್ನಾ ಜಮೀನು..ಸಮೀಪದ ಶಾಲೆಯೂ ಸೇರಿ ಗ್ರಾಮ ಪಂಚಾಯತ್ ಕಟ್ಟಡ ಹಾಗೂ ಇಲ್ಲಿನ ಬಹುತೇಕ ಸರ್ಕಾರಿ ಕಟ್ಟಡಗಳು ಡಿಸಿ ಮನ್ನಾ ಜಮೀನಿನಲ್ಲಿದೆ. ಹಾಗೆಂದು ಇಲ್ಲಿನ ಪೆರ್ಲಾಪು ಶಾಲಾ ಬಳಿಯ ಸ.ನಂ.೧೬೪/೧ಎ೩ ಯಲ್ಲಿ ಅಂಗನವಾಡಿ ಕಟ್ಟಡಕ್ಕೆಂದೇ ೫ ಸೆಂಟ್ಸ್ ಜಮೀನನ್ನು ಸುಮಾರು ಹತ್ತು ವರ್ಷಗಳ ಹಿಂದೆಯೇಪಂಚಾಯತ್ ನಿಗದಿ ಪಡಿಸಿತ್ತು ಎಂದು ಇಲ್ಲಿನ ಪಂಚಾಯತ್ ಸದಸ್ಯರೇ ಹೇಳುತ್ತಾರೆ. ಈ ಬಗ್ಗೆ ವಿವರ ನೀಡಿದ ಸದಸ್ಯ ಈಶ್ವರ ಪೂಜಾರಿಯವರು ಟವರ್ ಕೆಳಗೆ ಅಂಗನವಾಡಿ ನಿರ್ಮಾಣ ಬೇಡ ವೆಂದು ತಾನು ಇಲಾಖೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ತನ್ನ ಬೇಡಿಕೆಯನ್ನು ಕಿವಿಗೆ ಹಾಕಿಕೊಂಡಿಲ್ಲ ಎಂದು ನಿರಾಶೆ ವ್ಯಕ್ತಪಡಿಸುತ್ತಾರೆ.
ಇಲ್ಲಿ ಏನಿಲ್ಲಾ.. ಎಲ್ಲಾ ರಾಜಕೀಯ..
ಕಡೇಶ್ವಾಲ್ಯ ಗ್ರಾಮಪಂಚಾಯತ್ ವ್ಯಾಪ್ತಿಯ ಈ ಪೆರ್ಲಾಪುವಿನಲ್ಲಿ ಟವರ್ ಕೆಳಗೆ ಅಂಗನವಾಡಿ ನಿರ್ಮಿಸಬೇಕೆನ್ನುವ ದುರುದ್ದೇಶ ಇಲ್ಲಿನ ಪಂಚಾಯತ್ ಆಡಳಿತಕ್ಕೆ ಇರಲಿಲ್ಲ.. ಆದರೆ ಪಂಚಾಯತ್ ಸದಸ್ಯರೊಳಗಿರುವ ಪಕ್ಷ ರಾಜಕೀಯ ಟವರ್ ಕೆಳಗೆ ಅಂಗನವಾಡಿ ನಿರ್ಮಿಸುವಂತಾ ಸ್ಥಿತಿ ಉಂಟು ಮಾಡಿದ್ದು, ಇವರ ರಾಜಕೀಯ ಮಕ್ಕಳ ಪಾಲಿಗೆ ಆಘಾತ ಉಂಟು ಮಾಡಿದೆ.
ಕಳೆದ ಹಲವು ಸಭೆಗಳಲ್ಲಿ ಈಗ ಅಂ,ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಸ್ಥಳದ ಬಗ್ಗೆ ವಿರೋಧವಿದ್ದು, ಇನ್ನೇನು ಅನುದಾನವೂ ವಾಪಾಸು ಹೋದೀತು ಎಂಬ ಕಾರಣಕ್ಕೆ,ಪಂಚಾಯತ್ ಆಡಳಿತ ವಿರೋಧದ ಮಧ್ಯೆಯೂ ಬಹುಮತದ ನಿರ್ಣಯ ಕೈಗೊಂಡು ಮಕ್ಕಳನ್ನು ಭೀತಿಯೆಡೆಗೆ ತಳ್ಳಿದೆ.
ಪಂಚಾಯತ್ ಅಧ್ಯಕ್ಷ ಮೋಹನ್ ರವರು ಹೇಳುವ ಪ್ರಕಾರ ಟವರ್ ಗಿಂತ ಸಾಕಷ್ಟು ದೂರದಲ್ಲೆ ಕಟ್ಟಡ ನಿರ್ಮಾಣ ವಾಗುತ್ತಿದೆ. ಆರಂಭದಲ್ಲಿ ವಿರೋಧವಿತ್ತು ಆದರೆ ಈಗೆಲ್ಲಾ ಸರಿಯಾಗಿದೆ. ಅನುದಾನ ಲ್ಯಾಪ್ಸ್ ಆಗದಂತೆಯೂ ನಾವು ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿರುವುದಾಗಿ ಅವರು ತಿಳಿಸುತ್ತಾರೆ.
ಇನ್ನು ಕಟ್ಟಡ ಕಾಮಗಾರಿ ನಡೆಸುತ್ತಿರುವ ಜಿ.ಪಂ.ಇಂಜಿನಿಯರ್ ಹೇಳುವ ಮಾತೇ ಬೇರೆ, ಸ್ಥಳದ ಬಗ್ಗೆ ನಮಗೆ ಗೊತ್ತಿಲ್ಲ. ಪಂಚಾಯತ್ ಸೂಚಿಸಿದ ಸ್ಥಳದಲ್ಲಿ ಕಟ್ಟಡ ನಿರ್ಮಿಸುತ್ತಿದ್ದೇವೆ. ಪಂಚಾಯತ್ ವ್ಯಾಪ್ತಿಯಲ್ಲಿ ಇದೊಂದೇ ಅಲ್ಲ. ನಾಲ್ಕು ಅಂಗನವಾಡಿಗಳ ಕೆಲಸ ನಡೆಯುತ್ತಿದೆ. ಜಾಗದ ಬಗೆಗಿನ ವಿವಾದವೆಲ್ಲಾ ಪರಿಹಾರಗೊಂಡಿದೆ ಎಂಬ ಉತ್ತರ ನೀಡುತ್ತಾರೆ. ಕೈ ಯಿಂದ ಕೈಗೆ ಮನವಿ ತಿರುಗಿತು ಕಡೇಶ್ವಾಲ್ಯ ಪಂಚಾಯತ್ ಸದಸ್ಯ ಈಶ್ವರ ಪೂಜಾರಿಯವರು ಸೇರಿ ದಂತೆ ಕೆಲ ಸ್ದಸಯರು ಸದ್ರಿಸ್ಥಳದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನೀಡಿದ ಮನವಿಗಳು ಕೈಯಿಂದ ಕೈಗೆ ತಿರುಗಿತೇ ವಿನಃ ಮನವಿಗೆ ಸರಿಯಾದ ಸ್ಪಂದನ ಸಿಗಲೇ ಇಲ್ಲ...
ಶಾಸಕ ಬಿ.ರಮಾನಾಥ ರೈಯವರಿಗೆ ನೀಡಿದ ದೂರನ್ನು ಅವರು, ತಾಪಂ.ಕಾರ್ಯನಿರ್ವಹಣಾಧಿಕಾರಿಯವರಿಗೆ ಕಳುಹಿಸಿದ್ದು ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ. ತಾ.ಪಂ.ಕಾರ್ಯ ನಿರ್ವಃಹಣಾಧಿಕಾರಿಯವರು ಈ ಮನವಿಯನ್ನು ಶಿಶುಅಭಿವೃದ್ದಿ ಇಲಾಖಾಧಿಕಾರಿಗೆ ಕಳುಹಿಸಿ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದಾರೆ. ಸಿಡಿಪಿಐ ರವರೂ ಅಷ್ಟೇ ಮಾಡಿದ್ದು... ಸದ್ರಿ ಸ್ಥಳದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಆಕ್ಷೇಪಗಳಿದೆ ಎಂದು ಪಂಚಾಯತ್ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಪಂಚಾಯತ್ನಲ್ಲಿನ ರಾಜಕೀಯ ಮೇಲಾಟ ಇವರನ್ನು ಆ ಪ್ರಕರಣದ ಒಳ ಹೊಕ್ಕಲೂ ಅವಕಾಶ ನೀಡುತ್ತಿಲ್ಲ. ಅರ್ಥಾತ್ ಆ ರಿಸ್ಕ್ ತೆಗೆದುಕೊಳ್ಳಲು ಇವರ ಧೈರ್ಯ ಸಾಲುತ್ತಿಲ್ಲ.
ಒಟ್ಟನಲ್ಲಿ ಕಡೇಶ್ವಾಲ್ಯ ಗ್ರಾಮಪಂಚಾಯತ್ ಸದ್ಯದ ಮಟ್ಟಗೆ ಕೈಗೊಂಡಿರುವ ಈ ನಿಲುವು ಮಕ್ಕಳ ಪಾಲಿಗೆ ಭಯದ ವಾತಾವರಣ ನಿರ್ಮಿಸಿದೆ. ಈಗಾಗಲೇ ಅಂಗನವಾಡಿ ನಡೆಯುತ್ತಿರುವ ಪೆರ್ಲಾಪು ಶಾಲಾ ಬಳಿಯೇ ಪಂಚಾಯತ್ ನಿಗದಿ ಮಾಡಿದ ಸ್ಥಳದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿದರೆ ಒಳಿತು.ಎನ್ನುವ ಸ್ಥಳೀಯರು ಟವರ್ ಬಳಿಯ ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಬಗ್ಗೆ ಹಿಂದೇಟು ಹಾಕಿದ್ದಾರೆ.


ಹತ್ತಿರದ ಕೆದಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಯಾರ ಶಾಲೆ ಹಾಗೂ ಅಂಗನವಾಡಿ ಪಕ್ಕವೇ ಟವರ್ ನಿರ್ಮಿಸಿದ ಮೆಸ್ಕಾಂ ಸ್ಥಳೀಯರ ಹಿಡಿಶಾಪಕ್ಕೆ ಗುರಿಯಾಗಿದೆ. ಈ ಸಂದರ್ಭದಲ್ಲೆ ಟವರ್ ಕೆಳಗೇ ಅಂಗನವಾಡಿ ಕಟ್ಟಡ ನಿರ್ಮಿಸುತ್ತಿರುವ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ನ ಕಾರ್ಯ ವೈಖರಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಪಂಚಾಯತ್ ಸದಸ್ಯರೊಳಗಿನ ರಾಜಕೀಯ ಕಿತ್ತಟ ನಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ..?
ಇದು ಕೇವಲ ಪಂಚಾಯತ್ ನಿರ್ಲಕ್ಷ್ಯಕ್ಕೆ ಸಾಕ್ಷಿಯಲ್ಲ. ಈ ರೀತಿಯ ಅವಸ್ಥೆ ಎದುರಾದರೂ.. ಎಲ್ಲವನ್ನೂ ತಿಳಿದಿರುವ ಗ್ರಾಮಸ್ಥರು, ರಾಜಕೀಯ ಪಕ್ಷಗಳು,ಶಾಸಕರು,ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳು,ಶಾಸಕರು,ಸ್ಥಳೀಯ ಜನಪ್ರತಿನಿಧಿಗಳು ,ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ಸುಮ್ಮನಿರುವುದೂ ಕೂಡ ಅವರ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.