ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ವಿಜ್ಞಾನ ವಸ್ತು ಪ್ರದರ್ಶನ: ಎಂಜಿ‌ಎಂ ಕಾಲೇಜು ಪ್ರಥಮ

ಉಡುಪಿ: ವಿಜ್ಞಾನ ವಸ್ತು ಪ್ರದರ್ಶನ: ಎಂಜಿ‌ಎಂ ಕಾಲೇಜು ಪ್ರಥಮ

Thu, 31 Dec 2009 03:02:00  Office Staff   S.O. News Service
ಉಡುಪಿ, ಡಿ.30: ಉಡುಪಿ ಎಂಜಿ‌ಎಂ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ನಡೆದ ಮಂಗಳೂರು ವಲಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಎಂಜಿ‌ಎಂ ಕಾಲೇಜಿನ ಶರೋನ್ ಕೆರೊಲಿನ್ ಆನಂದ್ ಹಾಗೂ ಅಮೀನ್ ಸೋನಮ್ ಅವರು ರಚಿಸಿದ ‘ಜೀವದ ಉಗಮ ಮತ್ತು ವಿಕಾಸ’ ಮಾದರಿ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ.

ಪುತ್ತೂರು ಸ್ವಾಮಿ ವಿವೇಕನಾಂದ ಕಾಲೇಜಿನ ಶ್ರೀಶ ಹಾಗೂ ಹರಿಪ್ರಸಾದ್ ಅವರು ‘ಇ-ತ್ಯಾಜ್ಯ’ ವಿಷಯದಲ್ಲಿ ದ್ವಿತೀಯ ಬಹುಮಾನ ಹಾಗೂ ಎಂಜಿ‌ಎಂ ಕಾಲೇಜಿನ ಆಚಾರ್ಯ ಸುಮತ್ ಮಾಧವ ಹಾಗೂ ಬಿಪಿನ್ ಶೆಟ್ಟಿ ಅವರು ‘ಉಪಗ್ರಹಗಳ ಅನ್ವಯಿಕತೆ’ ಮಾದರಿ ವಿಷಯದಲ್ಲಿ ತೃತೀಯ ಬಹುಮಾನವನ್ನು ಗಳಿಸಿದರು.

ಸಮಾಧಾನಕಾರ ಬಹುಮಾನವನ್ನು ಪುತ್ತೂರು ಸೈಂಟ್ ಫಿಲೋಮಿನ ಕಾಲೇಜಿನ ನಮೃತಾ ಜಿ.ಎನ್. ಹಾಗೂ ಧನ್ಯಶ್ರೀ(ವಿಷಯ- ಜಾಗತಿಕ ತಾಪ ಏರಿಕೆಯ ಪರಿಣಾಮಗಳು), ಪುತ್ತೂರು ಸ್ವಾಮಿ ವಿವೇಕಾನಂದ ಕಾಲೇಜಿನ ತನ್ಮಯ ಲಕ್ಷ್ಮೀ ಹಾಗೂ ಸ್ಮತಿ ಹೆಬ್ಬಾರ್(ಪರ್ಯಾಯ ವಸ್ತುಗಳು), ಎಂಜಿ‌ಎಂ ಕಾಲೇಜಿನ ಪ್ರಿಯ ಹಾಗೂ ಸುಷ್ಮಾ(ಆಹಾರ ಸಂರಕ್ಷಣೆ), ಸೈಂಟ್ ಫಿಲೋಮಿನಾ ಕಾಲೇಜಿನ ಶ್ರೀದೇವಿ ಹೆಗ್ಡೆ(ಪರಿಸರ ಸ್ನೇಹಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ), ಸ್ವಾಮಿ ವಿವೇಕಾನಂದ ಕಾಲೇಜಿನ ದಿವ್ಯಶ್ರೀ ಹಾಗೂ ರೇಖಾ ಕೆ.ಸಿ.(ನ್ಯಾನೋತಂತ್ರಜ್ಞಾನದ ಅನ್ವಯಿಕತೆ) ಪಡೆದುಕೊಂಡರು.

ಬಹುಮಾನ ವಿತರಣೆ: ಎಂಜಿ‌ಎಂ ಕಾಲೇಜಿನ ನೂತನ ರಂದ್ರ ಮಂಪಟದಲ್ಲಿ ರವಿವಾರ ನಡೆದ ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಗೌರವ ಕಾರ್ಯದರ್ಶಿ ಪ್ರೊ.ಸಿ.ಡಿ.ಪಾಟೀಲ ಬಹುಮಾನಗಳನ್ನು ವಿತರಿಸಿದರು. 

ಮುಖ್ಯ‌ಅತಿಥಿಗಳಾಗಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಪ್ರೊ.ಡಾ.ಎನ್.ಎ.ಮಧ್ಯಸ್ಥ ಭಾಗವಹಿಸಿದ್ದರು. 

ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ವಹಿಸಿದ್ದರು. ಎಂಜಿ‌ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಪಿ.ವೆಂಕಟ್ರಮಣ ಗೌಡ ಸ್ವಾಗತಿಸಿದರು. ಸ್ಪರ್ಧೆಯ ಸಂಚಾಲಕ ಪ್ರೊ.ಡಾ.ಎಂ.ಜಿ.ವಿಜಯ ವಂದಿಸಿದರು. ಮುರಳೀಧರ ನೆಂಪು ಕಾರ್ಯಕ್ರಮ ನಿರೂಪಿಸಿದರು.


ನದಿ ತಿರುವಿನಿಂದ ಸಾಂಸ್ಕೃತಿಕತೆ ನೆಲ ಸಮ: ಡಾ.ಮಧ್ಯಸ್ಥ

ನೇತ್ರಾವತಿ ನದಿಯನ್ನು ಚಿತ್ರದುರ್ಗಕ್ಕೆ ತಿರುಗಿಸುವ ಯೋಜನೆಯಿಂದ ಕರಾವಳಿ ಹಾಗೂ ಚಿತ್ರದುರ್ಗ ಎರಡು ಪ್ರದೇಶಗಳಲ್ಲಿನ ಸಂಸ್ಕೃತಿ ನೆಲಸಮವಾಗುತ್ತದೆ. ಇದರ ಜೊತೆ ಜಾಗತಿಕ ತಾಪಮಾನದ ಏರಿಕೆಯ ಪರಿಣಾಮ ನಮ್ಮನ್ನು ಮತ್ತಷ್ಟು ತಟ್ಟಲಿದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಪ್ರೊ.ಡಾ.ಎನ್.ಎ.ಮಧ್ಯಸ್ಥ ಎಚ್ಚರಿಸಿದ್ದಾರೆ.

ತಾಪಮಾನದ ಏರಿಕೆಯ ಪರಿಣಾಮವಾಗಿ ಸಮುದ್ರದ ನೀರು ಮತ್ತಷ್ಟು ಹೆಚ್ಚಲಿದೆ ಎಂಬುದನ್ನು ವಿಜ್ಞಾನಿಗಳು ಈಗಾಗಲೇ ಸೂಚಿಸಿದ್ದಾರೆ. ಹೀಗೆ ನೀರು ಹೆಚ್ಚಾಗಿ ಕರಾವಳಿ ಪ್ರದೇಶದಲ್ಲಿ ಸಿಹಿನೀರು ಪ್ರಮಾಣ ಕಡಿಮೆಯಾಗಿ ಅದರಲ್ಲಿ  ಉಪ್ಪು ನೀರು ಬೆರಕೆಯಾಗಲಿದೆ. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದನ್ನು ನದಿಗಳಿಂದ ಮಾತ್ರ ತಡೆಯಲು ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ನದಿ ತಿರುವಿನಿಂದ ಸಮುದ್ರಕ್ಕೆ ಬರುವ ಸಿಹಿ ನೀರನ್ನು ತಡೆಯುವುದರಿಂದ ಸಮುದ್ರದಲ್ಲಿ ಉಪ್ಪಿನ ಅಂಶ ಮತ್ತಷ್ಟು ಹೆಚ್ಚಾಗಲಿದೆ. ಸಮುದ್ರದ ನೀರು ಆವಿಯಾಗಿ ಮೋಡವಾಗುವ ಮೂಲಕ ಮಳೆ ಬರುತ್ತಿದೆ. ಈಗ ನದಿ ತಿರುವಿನಿಂದ ಜಲಚಕ್ರಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದರು.

Share: